ಸಿಂಧನೂರು: ತಾಲ್ಲೂಕಿನ ಗಾಂಧಿ ನಗರ ಗ್ರಾಮದಲ್ಲಿ ಭಾನುವಾರ (ಮೇ 8) ಲಕ್ಷ ನರ್ಮದಾ ಲಿಂಗ ಸಹಿತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದ್ದು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪಾಲ್ಗೊಳ್ಳುವರು ಎಂದು ಶಾಸಕ ವೆಂಕಟರಾವ್ ನಾಡಗೌಡರು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ₹1 ಕೋಟಿ ವೆಚ್ಚದಲ್ಲಿ ಲಕ್ಷ ನರ್ಮದಾ ಲಿಂಗ ಸ್ಥಾಪನೆ ಮಾಡಲಾಗುತ್ತಿದೆ. ಬೆಲ್ಜಿಯಂನಿಂದ ಸ್ಫಟಿಕಲಿಂಗ ತರಲಾಗಿದ್ದು, ರಾಜ್ಯದಲ್ಲಿ ಇದು ಅತಿದೊಡ್ಡ ಶಿವಲಿಂಗವಾಗಲಿದೆ. ಮುಂದಿನ ದಿನಗಳಲ್ಲಿ ಇದೊಂದು ಪ್ರವಾಸಿ ತಾಣವಾಗಲಿದೆ ಎಂದರು.
ಲಿಂಗ ಪ್ರತಿಷ್ಠಾಪನೆಯ ಅಂಗವಾಗಿ ಮೇ 4ರಿಂದ ವಿಶೇಷ ಪೂಜೆ, ಹೋಮ-ಹವನಗಳಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀಶೈಲ ಮಹಾಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯದಲ್ಲಿ ದೀಪೋತ್ಸವ ಹಾಗೂ ಗಂಗಾರತಿ ಶುಕ್ರವಾರ ರಾತ್ರಿ ನಡೆದವು ಎಂದು ಹೇಳಿದರು.
ಈ ವರ್ಷ ಬಸವ ಜಯಂತಿ ಮತ್ತು ಈದ್ ಒಂದೇ ದಿನ ಬಂದಿದ್ದರಿಂದ ಹಿಂದೂ ಹಾಗೂ ಮುಸ್ಲಿಮರ ಒಗ್ಗೂಡಿ ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಭಾವೈಕ್ಯತೆ ಮತ್ತು ಸಾಮರಸ್ಯದ ಸಂದೇಶ ಸಾರಿರುವುದು ಮಾದರಿ ಕಾರ್ಯವಾಗಿದೆ ಎಂದರು.
ವಿರೋಧ ಪಕ್ಷದಲ್ಲಿ ಇದ್ದು ಟೀಕೆ ಮಾಡುವುದು ಕರ್ತವ್ಯ. ಆದರೆ, ಅಭಿವೃದ್ದಿ ಕೆಲಸ ಆಗಿಲ್ಲ ಎಂದರೇ ಟೀಕಿಸಬೇಕು. ಆದರೆ, ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ವಿನಾಃಕಾರಣ ಆರೋಪಿಸಬಾರದು. ಯುಜಿಡಿ ಮತ್ತು ನಿರಂತರ ನೀರು ಯೋಜನೆ ಕಾಮಗಾರಿ ಕಳಪೆ ಆಗಿರುವುದು ಮತ್ತು ನಾನು ಫರ್ಸಂಟೇಜ್ ಪಡೆದಿರುವ ಬಗ್ಗೆ ದಾಖಲೆ ಸಮೇತ ಬಸನಗೌಡ ಬಾದರ್ಲಿ ಸಾಬೀತುಪಡಿಸಲಿ. ಅದನ್ನು ಸಲಹೆಯಾಗಿ ಸ್ವೀಕರಿಸುತ್ತೇನೆ. ಶಾಸಕರ ವಿರುದ್ಧ ಮಾತನಾಡಿದರೆ ನಾನು ನಾಯಕ ಆಗುತ್ತೇನೆ, ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುತ್ತಾರೆ ಎಂದು ಬಸನಗೌಡ ಬಾದರ್ಲಿ ಅವರು ಭಾವಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ನಗರ ಘಟಕ ಅಧ್ಯಕ್ಷ ಎಂ.ಡಿ ನದೀಮ್ ಮುಲ್ಲಾ, ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ, ಚಂದ್ರಶೇಖರ ಮೈಲಾರ, ಮುಖಂಡರಾದ ಅಶೋಕಗೌಡ ಗದ್ರಟಗಿ, ದೇವೇಂದ್ರಗೌಡ, ಎಸ್.ಪಿ. ಟೈಲರ್, ರಂಗಾರೆಡ್ಡಿ, ನಿರುಪಾದೆಪ್ಪ ನಾಗಲಾಪೂರ, ಸೈಯ್ಯದ್ ಆಸೀಫ್, ಅಜಯ್ ದಾಸರಿ, ಚಂದ್ರಶೇಖರ ಇದ್ದರು.
ಎಚ್.ಡಿ.ದೇವೇಗೌಡ ಭೇಟಿ ನೀಡುವ ಹಿನ್ನೆಲೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡರು, ತಹಶೀಲ್ದಾರ್ ಮಂಜುನಾಥ ಭೋಗಾವತಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜನಿಯರ್ ಸಿ.ಎಸ್.ಪಾಟೀಲ, ಸಬ್‍ಇನ್‌ಸ್ಪೆಕ್ಟರ್ ಸೌಮ್ಯ ಎಂ ಅವರೊಂದಿಗೆ ನಗರದ ಕುಷ್ಟಗಿ ರಸ್ತೆಯಲ್ಲಿ ಇರುವ ಹೆಲಿಪ್ಯಾಡ್‍ಗೆ ತೆರಳಿ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.