ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ ಕುರಿತು ಧ್ವನಿ ಎತ್ತಲಿರುವ ಎಚ್‌.ಡಿ.ಕೆ: ವೆಂಕಟರಾವ್ ನಾಡಗೌಡ

Published 17 ನವೆಂಬರ್ 2023, 14:49 IST
Last Updated 17 ನವೆಂಬರ್ 2023, 14:49 IST
ಅಕ್ಷರ ಗಾತ್ರ

ಸಿಂಧನೂರು: ‘ಮಳೆ ಅಭಾವದಿಂದ ರಾಜ್ಯದಾದ್ಯಂತ ಬರಗಾಲ ಆವರಿಸಿದೆ. ಅಕಾಲಿಕ ಮಳೆಯಿಂದಾಗಿರುವ ಬೆಳೆಹಾನಿ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿ.4 ರಿಂದ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿಯೆತ್ತಲಿದ್ದಾರೆ’ ಎಂದು ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಹೇಳಿದರು.

ತಾಲ್ಲೂಕಿನ ಮುಚ್ಚಳ ಕ್ಯಾಂಪ್ ಹಾಗೂ ಗಾಂಧಿನಗರ ಗ್ರಾಮದಲ್ಲಿ ಅಕಾಲಿಕ ಗಾಳಿ–ಮಳೆಯಿಂದ ನೆಲಕ್ಕುರುಳಿರುವ ಭತ್ತ ಮತ್ತು ಜೋಳದ ಬೆಳೆಯನ್ನು ಜೆಡಿಎಸ್ ಬರಗಾಲ ಅಧ್ಯಯನ ತಂಡದೊಂದಿಗೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಯಚೂರು ಗ್ರಾಮೀಣ, ಮಾನ್ವಿ, ಸಿಂಧನೂರು ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭತ್ತ, ಜೋಳ, ತೊಗರಿ, ಮೆಣಸಿನಕಾಯಿ, ಹತ್ತಿ ಬೆಳೆ ಹಾನಿಗೊಳಗಾಗಿದೆ. ಅನಿರೀಕ್ಷಿತ ಮಳೆಯಿಂದ ಭತ್ತದ ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪುನಃ ಮಳೆ ಸುರಿದರೆ ಇರುವ ಅಲ್ಪಸ್ವಲ್ಪ ಭತ್ತವೂ ಸಂಪೂರ್ಣವಾಗಿ ನಷ್ಟವಾಗಲಿದೆ. ಕೆಲ ರೈತರು ವಿಮೆ ಕಟ್ಟಿದ್ದಾರೆ. ಬಹಳಷ್ಟು ರೈತರು ವಿಮೆ ಕಟ್ಟಿಲ್ಲ. ಹೀಗಾಗಿ ಎಲ್ಲ ರೈತರ ಬೆಳೆಯನ್ನು ಸಮಗ್ರವಾಗಿ ಸಮೀಕ್ಷೆ ಮಾಡಬೇಕು’ ಎಂದು ತಿಳಿಸಿದರು.

‘ರೈತರು ಸಂಕಷ್ಟದಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಬೆಳೆ ವೀಕ್ಷಣೆ ಮಾಡಿರಲಿಲ್ಲ. ತಾವು ಧ್ವನಿಯೆತ್ತಿದ ನಂತರವೇ ವೀಕ್ಷಣೆ ಮಾಡಿದ್ದಾರೆ. 7 ತಾಸು ವಿದ್ಯುತ್ ಪೂರೈಕೆ ಆದೇಶ ಹೊರಡಿಸಿದ್ದರೂ ಅನಿಯಮಿತ ಲೋಡ್ ಶೆಡ್ಡಿಂಗ್‍ನಿಂದ ಕಣ್ಣಾಮುಚ್ಚಾಲೆ ಆಟ ನಡೆದಿದೆ. ಐಸಿಸಿ ಸಭೆಯ ಅವೈಜ್ಞಾನಿಕ ನಿರ್ಧಾರವೇ ರೈತರ ಬೆಳೆಹಾನಿಗೆ ಕಾರಣವಾಗಿದೆ. 15 ದಿನ ಮುಂಚೆ ನೀರು ಹರಿಸಿದ್ದರೆ ಇಷ್ಟೊತ್ತಿಗೆ ಭತ್ತ ಕಟಾವು ಆಗುತ್ತಿತ್ತು’ ಎಂದು ದೂರಿದರು.

‘ರಾಜ್ಯದಾದ್ಯಂತ ಬರಗಾರ ಅಧ್ಯಯನ ನಡೆಸಿದ ಬಳಿಕ ವರದಿಯನ್ನು ಜೆಡಿಎಸ್ ಮುಖ್ಯಕಚೇರಿಗೆ ಸಲ್ಲಿಸಲಾಗುವುದು. ಡಿ.4 ರಿಂದ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಕುಮಾರಣ್ಣ ಧ್ವನಿಯೆತ್ತಲಿದ್ದಾರೆ’ ಎಂದರು.

‘ರಾಜ್ಯ ಸರ್ಕಾರ ಗ್ಯಾರಂಟಿಗಳ ಆಲೋಚನೆ ಬಿಟ್ಟು ರೈತರ ನೋವಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ನೀರಾವರಿ ಪ್ರದೇಶಗಳ ಬೆಳೆಹಾನಿಗೆ ಎಕರೆಗೆ ₹25 ಸಾವಿರ, ಒಣ ಬೇಸಾಯದ ಬೆಳೆಹಾನಿಗೆ ₹15 ಸಾವಿರ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 28 ರೈತ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ಗಮನ ಸೆಳೆಯಲಾಗಿದೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಜೆಡಿಎಸ್ ನಿಮ್ಮೊಂದಿಗಿದೆ’ ಎಂದು ಹೇಳಿದರು.

ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ಕೆಒಎಫ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮಿಪತಿ ಗಾಣದಾಳ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ, ದೇವದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡನಗೌಡ ಪಾಟೀಲ, ಮಾನ್ವಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಮುಖಂಡರಾದ ಯೂಸೂಫ್‍ಖಾನ್, ಜಿ.ಸತ್ಯನಾರಾಯಣ, ನಾಗೇಶ ಹಂಚಿನಾಳ ಕ್ಯಾಂಪ್, ಅಲ್ಲಮಪ್ರಭು ಪೂಜಾರ, ಸುಮಿತ್ ತಡಕಲ್ ಹಾಗೂ ಸೈಯ್ಯದ್ ಆಸೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT