ಸೋಮವಾರ, ಸೆಪ್ಟೆಂಬರ್ 20, 2021
29 °C
ಕೆವಿಕೆಯಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿ

ಕೆವಿಕೆ: ‘ಜೇನು ಸಾಕಾಣಿಕೆಯಿಂದ ಹೆಚ್ಚುವರಿ ಆದಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜೇನು ಸಾಕಾಣಿಕೆಯು ಒಂದು ಗ್ರಾಮೀಣ ಆಧಾರಿತ ಉದ್ದಿಮೆಯಾಗಿದ್ದು, ರೈತನಿಗೆ ಹೆಚ್ಚುವರಿ ಆದಾಯವನ್ನು ನೀಡುವ ಹಾಗೂ ಸ್ವ-ಉದ್ಯೋಗವನ್ನು ನೀಡುವ ಉಪಕಸುಬಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಯೋಹದಲ್ಲಿ ರೈತರು ಹಾಗೂ ಆಸಕ್ತರಿಗೆ ಗುರುವಾರ ಆಯೋಜಿಸಿದ್ದ 2021-22 ನೇ ಸಾಲಿನ “ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ” ‘ವೈಜ್ಞಾನಿಕ ಜೇನು ಸಾಕಾಣಿಕೆ’ ಕುರಿತು ಒಳಆವರಣ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಭೂರಹಿತ ಕೃಷಿ ಕಾರ್ಮಿಕರು ಸಹ ಅಳವಡಿಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಜೇನುಕೃಷಿಯು ಕಡಿಮೆಯಾಗಿದೆ, ಆದರೆ ಇದರ ಬೇಡಿಕೆ ಬಹಳ ಇದೆ. ಜೇನು ಸಾಕಾಣಿಕೆಯು ಜಮೀನು ಇಲ್ಲದ ರೈತರಿಗೆ, ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಸಣ್ಣ ಹಿಡುವಳಿದಾರರಿಗೆ ಒಂದು ಉತ್ತಮ ಆರ್ಥಿಕ ಉದ್ಯಮವಾಗಿದೆ. ವಿದ್ಯಾವಂತ ನಿರುದ್ಯೋಗ ಯುವರಕರು ಜೇನುಕೃಷಿಯನ್ನು ಕೈಗೊಂಡರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.

ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್. ಮಾತನಾಡಿ, ಪರಾಗಸ್ಪರ್ಶ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಜೇನುನೊಣಗಳು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತಿವೆ. ಕೇವಲ ಜೇನುನೊಣಗಳಿಂದ ಹಣ್ಣಿನ ಬೆಳೆಗಳಲ್ಲಿ ಶೇ 25 ರಿಂದ 60 ರಷ್ಟು, ಸಾಂಬಾರು ಬೆಳೆಗಳಲ್ಲಿ ಶೇ 50 ರಿಂದ 95 ರಷ್ಟು ಮತ್ತು ತರಕಾರಿ ಬೆಳೆಗಳಲ್ಲಿ ಶೇ 25 ರಿಂದ 150 ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯತೆಗಳಿವೆ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದರು.

ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಸಂಗಣ್ಣ ಎಂ ಸಜ್ಜನರ್ ಮಾತನಾಡಿ, ಜೇನು ದುಂಬಿಗಳು ಉತ್ಪಾದನಾ ಸಾಮಗ್ರಿಯಾಗಿರುವುದು ಕೃಷಿಯಲ್ಲಿ ಮಾತ್ರವಲ್ಲ, ಅರಣ್ಯ ಸಮೃದ್ದಿಯನ್ನು ಪರಾಗಸ್ಪರ್ಶದಿಂದ ಹೆಚ್ಚಿಸುವುದರಲ್ಲಿಯೂ ಉತ್ತಮ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಹ್ಲಾದ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿವ ರೈತರು ತರಬೇತಿಯಲ್ಲಿ ಕಲಿತ ವಿಷಯಗಳನ್ನು ಆದಷ್ಟು ಹೆಚ್ಚು ರೈತರಿಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತೋಟಗಾರಿಕೆ ವಿಜ್ಞಾನಿ ಡಾ. ಹೇಮಲತಾ. ಕೆ.ಜೆ. ಜೇನು ಸಾಕಣಿಕೆಗೆ ಪೂರಕವಾದ ತೋಟಗಾರಿಕೆ ಬೆಳೆಗಳು ಕುರಿತು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಹೇಶ ಹಿರೇಮಠ, ಜೇನು ಸಾಕಾಣಿಕೆಗೆ ಪೂರಕವಾದ ತೋಟಗಾರಿಕೆ ಇಲಾಖೆ ಸೌಲಭ್ಯಗಳ ಕುರಿತು , ಆಹಾರ ಸಂಸ್ಕರಣಾ ತಂತ್ರಜ್ಞಾನಿ ವೀಣಾ ಟಿ., ಜೇನು ಕೃಷಿ ಉತ್ಪನ್ನಗಳು, ಜೇನಿನ ಔಷಧಿಯ ಗುಣಗಳು ಹಾಗೂ ಮೌಲ್ಯವರ್ಧನೆಯ ಕುರಿತು ಹಾಗೂ ಮಣ್ಣು ವಿಜ್ಞಾನಿ ಡಾ. ಎಸ್ ಎನ್ ಭಟ್ ಅವರುಸಮಗ್ರ ಕೃಷಿಯ ಕುರಿತು ರೈತರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು