ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಉದ್ಘಾಟನೆ ಭಾಗ್ಯ ಕಾಣದ ಹಾಸ್ಟೆಲ್

Published 9 ನವೆಂಬರ್ 2023, 4:35 IST
Last Updated 9 ನವೆಂಬರ್ 2023, 4:35 IST
ಅಕ್ಷರ ಗಾತ್ರ

ಮಸ್ಕಿ: ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿದ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ ಕಾಮಗಾರಿ ಪೂರ್ಣಗೊಂಡಿದ್ದರೂ, ಕಟ್ಟಡ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ!

ಸಮಾಜ ಕಲ್ಯಾಣ ಇಲಾಖೆಯು 2021-22ನೇ ಸಾಲಿನ ₹5 ಕೋಟಿ ಅನುದಾನದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಮೂಲಕ ಸಾನಬಾಳ ರಸ್ತೆಯಲ್ಲಿ ನೂತನ 250 ಕಾಲೇಜು ವಿದ್ಯಾರ್ಥಿಗಳ ಸಾಮರ್ಥ್ಯದ ಸುಸಜ್ಜಿತ ಹಾಸ್ಟೆಲ್ ಕಟ್ಟಡ ನಿರ್ಮಿಸಿದೆ.

ಕಟ್ಟಡದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಮಹೇಂದ್ರಕರ್ ಎಂಬುವರು ನಿಗದಿತ ಅವಧಿಯಲ್ಲೇ ಒಳಗೆ ಕಟ್ಟಡ ಪೂರ್ಣಗೊಳಿಸಿದ್ದಾರೆ. ಆದರೂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಸ್ವಾಧೀನಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಹಾಸ್ಟೇಲ್‌ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳ ವಿಳಂಬ ನೀತಿಯಿಂದಾಗಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಬಳಗಾನೂರು ರಸ್ತೆಯ ಖಾಸಗಿ ವ್ಯಕ್ತಿಯೊಬ್ಬರ ಕಟ್ಟಡದಲ್ಲಿ ಹಲವು ಅವ್ಯವಸ್ಥೆಗಳ ನಡುವೆ ತಂಗಬೇಕಾದ ಸ್ಥಿತಿ ಎದುರಾಗಿದೆ.

ಖಾಸಗಿ ಕಟ್ಟಡದಲ್ಲಿ ಒಂದೊಂದು ಕೊಠಡಿಯಲ್ಲಿ 15-20 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದೆ. ಶೌಚಾಲಯದ ಅವ್ಯವಸ್ಥೆ, ಕುಡಿಯುವ ನೀರಿನ ಕೊರತೆ, ಗಾಳಿ–ಬೆಳಕು ಇಲ್ಲದ ಕಾರಣ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿ ದಿನ ದೂಡುವಂತಾಗಿದೆ.

ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗಲಾದರೂ ಹಾಸ್ಟೆಲ್ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡಬೇಕು ಎಂಬುದು ಈ ಭಾಗ ಜನರ ಒತ್ತಾಯ.

₹5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹಾಸ್ಟೆಲ್ ಉದ್ಘಾಟನೆಗೆ ಸಮಾಜ ಕಲ್ಯಾಣ ಸಚಿವರ ಸಮಯ ಕೇಳಲಾಗಿದೆ. ಅವರು ದಿನಾಂಕ ನೀಡಿದ ನಂತರ ಉದ್ಘಾಟಿಸಲಾಗುವುದು
-ಆರ್.ಬಸನಗೌಡ ತುರುವಿಹಾಳ, ಶಾಸಕ ಮಸ್ಕಿ
ಕಟ್ಟಡ ನಿರ್ಮಾಣವಾಗಿ ತಿಂಗಳು ಮೇಲಾಗಿದೆ. ಕಟ್ಟಡ ಸ್ವಾಧೀನಕ್ಕೆ ತೆಗೆದುಕೊಂಡು ಬಾಕಿ ಪಾವತಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಲಾಗಿದೆ
- ರಾಜು ಮಹೇಂದ್ರಕರ್, ಗುತ್ತಿಗೆದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT