ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಿ: ಸಲಹೆ

10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥಸಂಚಲನ
Last Updated 16 ಜುಲೈ 2019, 14:31 IST
ಅಕ್ಷರ ಗಾತ್ರ

ರಾಯಚೂರು: ಹಿಂದಿನ ಕಾಲದಲ್ಲಿ ಪೊಲೀಸರು ಬಂದಾಗ ಸರ್ಕಾರ ಬಂತೆಂದು ಗ್ರಾಮೀಣ ಜನರು ಹೇಳುತ್ತಿದ್ದರು. ಆದ್ದರಿಂದ ಕಣ್ಣಿಗೆ ಕಾಣುವಂತಹ ಸರ್ಕಾರವೆಂದರೆ ಪೊಲೀಸರಾಗಿದ್ದು, ಏನೇ ಮಾಡಿದರೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕು ಎಂದು ಬಳ್ಳಾರಿ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಎಂ.ನಂಜುಂಡಸ್ವಾಮಿ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಮಂಗಳವಾರ ಆಯೋಜಿಸಿದ್ದ 10ನೇ ತಂಡದ ನಾಗರಿಕ/ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕೆಲಸ ದೊರೆಯಬೇಕಾದರೆ ಅದೃಷ್ಟ ಮಾಡಿರಬೇಕು. ಏಕೆಂದರೆ ದೇಶದ ಹೆಚ್ಚಿನ ಜನರು ಪೊಲೀಸ್‌ ಆಗಲು ಬಯಸುತ್ತಾರೆ. ಆದರೆ, ಬಯಸಿದವರೆಲ್ಲ ಪೊಲೀಸರು ಆಗಲು ಸಾಧ್ಯವಿಲ್ಲ. ತರಬೇತಿ ಪಡೆದು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಪೊಲೀಸರು ತರಬೇತಿ ನೀಡಿದವರಿಗೆ ಹೆಸರು ಬರುವಂತೆ ಉತ್ತಮವಾಗಿ ಕೆಲಸ ಮಾಡಬೇಕು ಎಂದರು.

ಪೊಲೀಸರಿಗೆ ಜಾತಿಯೆಂದರೆ ಪೊಲೀಸ್ ಇಲಾಖೆಯಾಗಿದ್ದು, ಅವರಿಗೆ ಭಾರತೀಯತೆಯೇ ಧರ್ಮವಾಗಿದೆ. ಭಾರತದ ಸಂವಿಧಾನವೇ ಧರ್ಮಗ್ರಂಥವಾಗಿದೆ. ಇಲಾಖೆಯ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಧ್ವಜ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆ ಮಾತ್ರ ಪೊಲೀಸರಿಗೆ ಹಬ್ಬಗಳಾಗಿವೆ. ದೀಪಾವಳಿ, ರಂಜಾನ್ ಹಾಗೂ ಕ್ರಿಸ್‌ಮಸ್ ಸೇರಿದಂತೆ ನೂರೆಂಟು ಆಚರಣೆ ಮಾಡುವ ಜನರಿಗೆ ರಕ್ಷಣೆ ನೀಡಿ ಸಮಾಜದಲ್ಲಿ ಶಾಂತಿ– ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಪ್ರಾಸ್ತಾವಿಕ ಮಾತನಾಡಿ, ತರಬೇತಿ ಪಡೆದು ಪೊಲೀಸರಾಗಿ ಸೇವೆಗೆ ಸೇರುತ್ತಿರುವ 157 ಪ್ರಶಿಕ್ಷಣಾರ್ಥಿಗಳು ಶಿಸ್ತು ಹಾಗೂ ಸಂಯಮದಿಂದ ಕೆಲಸ ಮಾಡಿ ಇಲಾಖೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಪ್ರತಿಜ್ಞಾ ವಿಧಿ ಬೋಧಿಸಿದರು. ಆಕರ್ಷಕ ಪಥ ಸಂಚಲನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT