ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ ಐಐಐಟಿ ರಾಯಚೂರು

ಕೇಂದ್ರ ಸರ್ಕಾರದಿಂದ ದೊರೆಯಲಿದೆ ಹೆಚ್ಚಿನ ಅನುದಾನ
Last Updated 23 ಸೆಪ್ಟೆಂಬರ್ 2020, 16:22 IST
ಅಕ್ಷರ ಗಾತ್ರ

ರಾಯಚೂರು: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ರಾಯಚೂರು ಅನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಕೇಂದ್ರ ಸರ್ಕಾರವು ವಿಧೇಯಕವೊಂದನ್ನು ಅಂಗೀಕಾರ ಮಾಡಿದ್ದು, ಇದರಿಂದ ಹಿಂದುಳಿದ ಭಾಗದಲ್ಲಿ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಯೊಂದು ತಲೆಎತ್ತುತ್ತಿರುವ ಬಗ್ಗೆ ಜಿಲ್ಲೆಯ ಜನರು ಹೆಮ್ಮೆ ಪಡುತ್ತಿದ್ದಾರೆ.

ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಬೇಡಿಕೆ ಇದ್ದರೂ ಐಐಐಟಿ ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ 2018 ರಲ್ಲಿ ಅನುಮೋದನೆ ನೀಡಿತು. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ (ಎಂಎಚ್‌ಆರ್‌ಡಿ) ಸಚಿವಾಲಯದ ನಿರ್ದೇಶನದಂತೆ 2018–19ನೇ ಶೈಕ್ಷಣಿಕ ಸಾಲಿನಲ್ಲಿಯೇ ಐಐಐಟಿ ರಾಯಚೂರು ಕಾರ್ಯಾರಂಭ ಮಾಡಿದೆ. ಇದೀಗ ರಾಯಚೂರಿನಲ್ಲಿ ಶಾಶ್ವತ ಕ್ಯಾಂಪಸ್‌ ನಿರ್ಮಾಣದ ಪ್ರಕ್ರಿಯೆಗಳು ನಡೆಯುತ್ತಿದ್ದು, ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದರಿಂದ ಕ್ಯಾಂಪಸ್‌ ನಿರ್ಮಾಣ ಇನ್ನಷ್ಟು ವೇಗ ಪಡೆಯಲಿದೆ.

ಸರ್ಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಅನುದಾನ ಒದಗಿಸಲಿವೆ. ರಾಜ್ಯ ಸಚಿವ ಸಂಪುಟವು ಈಗಾಗಲೇ ₹44 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಅದರಲ್ಲಿ ₹2.75 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ನೂತನ ಕ್ಯಾಂಪಸ್‌ಗೆ ಸಂಪರ್ಕ ರಸ್ತೆ, ಕುಡಿಯುವ ನೀರು ಹಾಗೂ ಒಂದು ಸಾವಿರ ಕೆವಿ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆ ಶುರುವಾಗಿದೆ.

‘ನೂತನ ಕ್ಯಾಂಪಸ್‌ ನಿರ್ಮಾಣ ಮಾಡುವುದು ಸೇರಿದಂತೆ ಐಐಐಟಿ ರಾಯಚೂರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಒಂದು ಸಮಿತಿ ರಚಿಸಲಾಗಿದೆ. ಐಐಟಿ ಹೈದರಾಬಾದ್‌ನ ನಿರ್ದೇಶಕರು, ರಾಯಚೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಸೇರಿ ಹಲವು ಸದಸ್ಯರು ಸಮಿತಿಯಲ್ಲಿ ಇದ್ದಾರೆ. ಕ್ಯಾಂಪಸ್‌ ನಿರ್ಮಾಣದ ಬಗ್ಗೆ ಈಗಾಗಲೇ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಮಾಸ್ಟರ್‌ ಪ್ಲ್ಯಾನ್‌: ರಾಯಚೂರಿನಿಂದ 10 ಕಿಲೋ ಮೀಟರ್‌ ದೂರದ ವಡವಾಟಿ ಗ್ರಾಮದ 65 ಎಕರೆ ಜಾಗದಲ್ಲಿ ಐಐಐಟಿ ನಿರ್ಮಾಣವಾಗಲಿದೆ. ಕ್ಯಾಂಪಸ್‌ ನಿರ್ಮಾಣದ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಲು ಟೆಂಡರ್‌ ಪ್ರಕ್ರಿಯೆ ಮಾಡಲಾಗುತ್ತಿದೆ. ಯೋಜನೆಯ ಬಳಿಕವೇ ಕಟ್ಟಡ ನಿರ್ಮಾಣದ ಕಾಮಗಾರಿಗಳು ಆರಂಭವಾಗಲಿವೆ.

ನೂತನ ಕ್ಯಾಂಪಸ್‌: ಅಧ್ಯಯನಕ್ಕೆ ಅನುಕೂಲಕರ ಸುರಕ್ಷಿತ, ಯೋಗ್ಯ, ಸಂಪರ್ಕಸೌಲಭ್ಯ ಹಾಗೂ ಪ್ರಶಾಂತವಾದ ಕ್ಯಾಂಪಸ್‌ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಶೈಕ್ಷಣಿಕ ಮತ್ತು ಔದ್ಯೋಗಿಕ ಗುರಿ ಸಾಧನೆಗೆ ಪ್ರೋತ್ಸಾಹಿಸುವ ವಿದ್ಯಾರ್ಥಿ ಕೇಂದ್ರಿತ ಕ್ಯಾಂಪಸ್‌ ಅಭಿವೃದ್ಧಿ ಮಾಡಲಾಗುವುದು. 40 ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಸಾಧ್ಯವಿರುವ ಕ್ಯಾಂಪಸ್‌ ಇದಾಗಲಿದೆ. ವಸತಿ ಸೌಕರ್ಯ, ಕ್ರೀಡಾಂಗಣ, ಬೋಧಕ, ಸಿಬ್ಬಂದಿ ವಸತಿಗೃಹಗಳನ್ನು ನಿಸರ್ಗಸ್ನೇಹಿಯಾಗಿ ನಿರ್ಮಾಣ ಮಾಡಲಾಗುತ್ತಿದೆ.

ರಾಷ್ಟ್ರೀಯ ಮಹತ್ವದ ಸಂಸ್ಥೆಗಳು?

ದೇಶದಲ್ಲಿ ಇದುವರೆಗೂ 156 ಸಂಸ್ಥೆಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಘೋಷಿಸಲಾಗಿದೆ. ಅದರಲ್ಲಿ 23 ಐಐಟಿಗಳು, 15 ಎಐಐಎಂಎಸ್‌ಗಳು, 20 ಐಐಎಂಗಳು, 31 ಎನ್‌ಐಟಿಗಳು, ರಾಯಚೂರು ಸೇರಿ 25 ಐಐಐಟಿಗಳು, 17 ಐಐಎಸ್‌ಇಆರ್‌ಗಳು, 7 ಎನ್‌ಐಪಿಇಆರ್‌, 5 ಎನ್‌ಐಡಿ, 3 ಎಸ್‌ಪಿಎಗಳು, 5 ಸೆಂಟ್ರಲ್‌ ಯುನಿವರ್ಸಿಟಿಗಳು, 4 ಮೆಡಿಕಲ್‌ ರಿಸರ್ಚ್‌ ಹಾಗೂ 11 ವಿಶೇಷ ಕ್ಯಾಂಪಸ್‌ಗಳು ಇವೆ.

ತಾತ್ಕಾಲಿಕ ಕ್ಯಾಂಪಸ್‌

ರಾಯಚೂರು ನಗರವ್ಯಾಪ್ತಿಯ ಯರಮರಸ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕ್ಯಾಂಪಸ್‌ನಲ್ಲಿ ಇದೇ ವರ್ಷದಿಂದ ತಾತ್ಕಾಲಿಕವಾಗಿ ಐಐಐಟಿ–ರಾಯಚೂರು ಕಾರ್ಯಾರಂಭ ಮಾಡುವುದಕ್ಕೆ ಯೋಜಿಸಲಾಗಿದೆ. ಇದಕ್ಕಾಗಿ ಆಡಳಿತ ಕಚೇರಿ ಮತ್ತು ಪಾಠಪ್ರವಚನ ಕಟ್ಟಡ ಸಮುಚ್ಛಯಗಳನ್ನು ಮೀಸಲು ಇಡಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯವೂ ಇದೆ. ಸಂಪರ್ಕ ರಸ್ತೆ ಸೇರಿ ಕೆಲವು ಮೂಲ ಸೌಕರ್ಯಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

2018–19ನೇ ಶೈಕ್ಷಣಿಕ ಸಾಲಿನಲ್ಲಿ 30 ವಿದ್ಯಾರ್ಥಿಗಳು ಐಐಐಟಿ ರಾಯಚೂರು ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದು, ಹೈದರಾಬಾದ್‌ ಐಐಟಿ ಕ್ಯಾಂಪಸ್‌ನಲ್ಲಿ ಪಾಠ ಪ್ರವಚನಗಳನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT