ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರಳು ಅಕ್ರಮ ಸಾಗಾಣಿಕೆ | ಕ್ರಿಮಿನಲ್ ಕೇಸ್ ದಾಖಲಿಸಿ: ಮನವಿ

Published : 1 ಸೆಪ್ಟೆಂಬರ್ 2024, 15:15 IST
Last Updated : 1 ಸೆಪ್ಟೆಂಬರ್ 2024, 15:15 IST
ಫಾಲೋ ಮಾಡಿ
Comments

ಸಿಂಧನೂರು: ‘ತಾಲ್ಲೂಕಿನ ಗೋಮರ್ಸಿ, ವಳಬಳ್ಳಾರಿ, ಗಿಣಿವಾರ ಹಗೂ ಗೊಣ್ಣಿಗನೂರು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ದಂಧೆ ಹಗಲು-ರಾತ್ರಿಯೆನ್ನದೆ ರಾಜಾರೋಷವಾಗಿ ನಡೆಯುತ್ತಿದ್ದು, ಈ ದಂಧೆಕೋರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು’ ಎಂದು ಒತ್ತಾಯಿಸಿ ಬಹುಜನ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಶನಿವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

‘ನದಿ, ಹಳ್ಳದಲ್ಲಿ ಜೆಸಿಬಿ ಮೂಲಕ ಅಗೆದು ಮರಳನ್ನು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಲಾರಿಗಳಲ್ಲಿ ತುಂಬಿ ಅಕ್ರಮವಾಗಿ ಸಾಗಣಿಕೆ ಮಾಡಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಕೆಲ ವಾಹನಗಳು ಒಂದು ರಾಯಲ್ಟಿ ಪಡೆದು ನಾಲ್ಕೈದು ಟ್ರಿಪ್ ಮರಳು ಸಾಗಾಣಿಕೆ ಮಾಡುತ್ತಿವೆ. ಮರಳು ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. ಹೆಡ್‌ಲೈಟ್‍ಗಳನ್ನು ಹಾಕುವುದಿಲ್ಲ. ಈ ಹಿಂದೆ ಗಿಣಿವಾರ ಗ್ರಾಮದ ಸಾಬಣ್ಣ, ಅಬಲನೂರು ಗ್ರಾಮದ ಬಾಲಕನೊಬ್ಬ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿಸಿದ್ದಾರೆ’ ಎಂದು ಸಮಿತಿಯ ಸಂಸ್ಥಾಪಕ ಭೀಮೇಶ ಕವಿತಾಳ ಗಮನ ಸೆಳೆದರು.

‘ಆ.30ರಂದು ರಾತ್ರಿ ಸಮಯದಲ್ಲಿ ಗಿಣಿವಾರ ಗ್ರಾ.ಪಂ ಸದಸ್ಯ ಉಪ್ಪಳೆಪ್ಪ ತಮ್ಮ ಹೊಲದಿಂದ ಗ್ರಾಮಕ್ಕೆ ಬರುವಾಗ ದಾರಿಯ ಮಧ್ಯದಲ್ಲಿ ಬಿದ್ದಿದ್ದ ಮರಳು ಕಾಣದೆ ಬಿದ್ದು ಗಾಯಗೊಂಡಿದ್ದಾರೆ. ಈ ಕುರಿತು ಮರಳು ಸಾಗಾಣಿಕೆ ಮಾಡುವವರನ್ನು ಪ್ರಶ್ನಿಸಿದರೆ ಪೊಲೀಸರಿಗೆ ಮಾಮೂಲು ಕೊಡುತ್ತೇವೆಂದು ಹೇಳಿದ್ದಾರೆ. ಕೂಡಲೇ ತಹಶೀಲ್ದಾರರು, ಡಿವೈಎಸ್‍ಪಿ ಅವರು ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಗ್ರಾ.ಪಂ ಸದಸ್ಯ ಉಪ್ಪಳೆಪ್ಪ ಗಿಣಿವಾರ, ಮುಖಂಡ ಶೇಖರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT