ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೃಷ್ಣಾನದಿಯಲ್ಲಿ ಮರುಕಳಿಸಿದ ಮಹಾಪ್ರವಾಹ

ಪ್ರವಾಹ ಪರಿಹಾರ ಕೇಂದ್ರ ತೆರೆಯುವುದಕ್ಕೆ ಜಿಲ್ಲಾಡಳಿತದಿಂದ ತಯಾರಿ
Last Updated 30 ಜುಲೈ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಕೃಷ್ಣಾನದಿಯಲ್ಲಿ ದಾಖಲೆಮಟ್ಟದ ಪ್ರವಾಹ ಬರುತ್ತಿದ್ದು, ನದಿತೀರದ ಗ್ರಾಮಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

ಸದ್ಯಕ್ಕೆ 4 .26ಲಕ್ಷ ಕ್ಯುಸೆಕ್‌ ಅಡಿ ಪ್ರವಾಹಮಟ್ಟ ಇದ್ದು, ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಮತ್ತಷ್ಟು ಏರಿಕೆ ಮಾಡಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದಲೂ ಹೊರಬಿಡುವ ನೀರಿನಮಟ್ಟವು 4.30 ಲಕ್ಷ ಕ್ಯುಸೆಕ್‌ ಅಡಿ ದಾಟಲಿದೆ. ಮುನ್ಸೂಚನೆ ಅರಿತ ಜಿಲ್ಲಾಡಳಿತವು ಈಗಾಗಲೇ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರಗಳಲ್ಲಿ ಬಿಗಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ನದಿಯಿಂದ ಕವಲೊಡೆದ ಹಳ್ಳಗಳ ಮೂಲಕ ಕೆಲವು ನದಿತೀರದ ಗ್ರಾಮಗಳಿಗೆ ಜಲದಿಗ್ಬಂಧನ ಆಗುವ ಸಾಧ್ಯತೆ ಇದೆ. ಅಲ್ಲದೆ, ಜನವಸತಿಗಳಿಗೂ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಜನರನ್ನು ಸ್ಥಳಾಂತರಿಸುವ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳುವುದಕ್ಕೆ ಆಯಾ ತಾಲ್ಲೂಕು ಆಧಿಕಾರಿಗಳಿಗೆ ಮತ್ತು ಗ್ರಾಮಮಟ್ಟದ ವಿಪತ್ತು ನಿರ್ವಹಣಾ ಸಮಿತಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರವಾಹ ಪರಿಹಾರ ಕೇಂದ್ರಗಳನ್ನು ತೆರೆಯುವುದ್ಕಾಗಿ 30 ಕಡೆ ಜಾಗಗಳನ್ನು ಗುರುತಿಸಲಾಗಿದೆ.

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಗ್ರಾಮಗಳನ್ನು ಸಂಪರ್ಕಿಸುವ ಯರಗೋಡಿ ಸೇತುವೆಯು ಮುಳುಗುವ ಹಂತದಲ್ಲಿದೆ. ಈ ಸೇತುವೆ ಮುಳುಗಡೆಯಾದರೆ ಸುಮಾರು 40 ಕಿಲೋ ಮೀಟರ್‌ ಸುತ್ತುವರಿಗೂ ಜಲದುರ್ಗದ ಮೂಲಕ ಲಿಂಗಸುಗೂರಿಗೆ ತಲುಪಬೇಕಾಗುತ್ತದೆ. ಪ್ರವಾಹಮಟ್ಟ 5 ಲಕ್ಷ ಕ್ಯುಸೆಕ್‌ ಅಡಿ ಮೀರಿದರೆ ಜಲದುರ್ಗದ ಬಳಿ ಇರುವ ಸೇತುವೆಯೂ ಮುಳುಗಡೆ ಆಗುತ್ತದೆ. ಇದರಿಂದ ನಡುಗಡ್ಡೆಯ ಎಲ್ಲ ಗ್ರಾಮಗಳಿಗೂ ಸಂಪೂರ್ಣ ಸಂಪರ್ಕ ಕಡಿತವಾಗುತ್ತದೆ. 2019 ರಲ್ಲಿ ಮೊದಲ ಬಾರಿ ಜಲದುರ್ಗ ಸೇತುವೆ ಮುಳುಗಡೆ ಆಗಿತ್ತು. ಎರಡು ವರ್ಷಗಳ ತರುವಾಯ ಮತ್ತೆ ಪ್ರವಾಹವು ಅಪಾಯದಮಟ್ಟಕ್ಕೆ ತಲುಪುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ದೇವದುರ್ಗ ತಾಲ್ಲೂಕಿನ ಅಂಜಳ, ಲಿಂಗದಳ್ಳಿ, ಹೂವಿನಹೆಡಗಿ, ಹಿರೇರಾಯಕೊಂಪಿ, ಕೊಪ್ಪರ, ಇಟಗಿ, ಗೂಗಲ್ ಗ್ರಾಮಗಳಲ್ಲಿ ಈಗಾಗಲೇ ಪ್ರವಾಹದಿಂದ ಬೆಳೆಹಾನಿ ಉಂಟಾಗಿದೆ. ಗೂಗಲ್‌ ಅಲ್ಲಮಪ್ರಭು ದೇವಸ್ಥಾನ ಜಲಾವೃತವಾಗಿದ್ದು, ಹೂವಿನಹೆಡಗಿ ಬಸವೇಶ್ವರ ಕಲ್ಯಾಣ ಮಂಟಪದ ಸಮೀಪ ನೀರು ನುಗ್ಗಿದೆ. 2019ರಲ್ಲಿ ಬಹಳಷ್ಟು ಗ್ರಾಮಗಳ ಜನವಸತಿಗಳಿಗೂ ನೀರು ನುಗ್ಗಿತ್ತು. ಇದೀಗ ಮತ್ತೆ ಪ್ರವಾಹ ಏರುಮುಖವಾಗಿ ನುಗ್ಗಿ ಬರುತ್ತಿದೆ.

ರಾಯಚೂರು ತಾಲ್ಲೂಕಿನ ಗುರ್ಜಾಪುರದಲ್ಲಿ ಕಟ್ಟೆಚ್ಚರ ಬಿಗಿಗೊಳಿಸಲಾಗಿದೆ. ಗ್ರಾಮಸ್ಥರನ್ನು ಸ್ಥಳಾಂತರಿಸುವುದಕ್ಕೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಗ್ರಾಮದ ಪುನರ್ವಸತಿ ನಿರ್ಮಾಣ ಆರಂಭವಾಗಿದ್ದು, ಮುಂಬರುವ ವರ್ಷಗಳಲ್ಲಿ ಶಾಶ್ವತ ಸ್ಥಳಾಂತರ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರ್ಜಾಪುರ, ಕಾಡ್ಲೂರು, ಅರಿಷಿಣಗಿ, ಯರಗುಂಟಾ ಗ್ರಾಮಗಳ ನದಿತೀರದಲ್ಲಿ ಭತ್ತದ ಜಮೀನುಗಳಿಗೆ ಪ್ರವಾಹ ನುಗ್ಗಿದ್ದರಿಂದ ಬೆಳೆಹಾನಿಯಾಗಿದೆ.

2009 ರಲ್ಲಿ ಮಹಾಪ್ರವಾಹ ಬಂದಾಗ ಕೃಷ್ಣಾನದಿಯಲ್ಲಿ ಗರಿಷ್ಠಮಟ್ಟ 4.96 ಲಕ್ಷ ಕ್ಯುಸೆಕ್‌ ಅಡಿ ದಾಖಲಾಗಿತ್ತು. 2019 ರಲ್ಲಿ ಬಂದಿದ್ದ ಮಹಾಪ್ರವಾಹ ಗರಿಷ್ಠ 6.26 ಲಕ್ಷ ಕ್ಯುಸೆಕ್‌ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT