ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಜಿಲ್ಲೆಯ ವಿವಿಧೆಡೆ ಬ್ಯಾಂಕ್‌ಗಳ ಎದುರು ಪ್ರತಿಭಟನೆ: ಮನವಿ ಸಲ್ಲಿಕೆ

ರಾಯಚೂರು: ಹಿಂದಿ ಹೇರಿಕೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ಆದೇಶ ವಿರೋಧಿಸಿ ಕರ್ನಾಟಕ ರಕ್ಷಣೆ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಿಂದಿ‌ ದಿವಸ್‌ನ ಪ್ರತಿ ದಹಿಸಿ, ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ 373 ನೇ ಪರಿಚ್ಛೇದ ದಡಿ ಭಾಷಾ ವಿಷಯವನ್ನು ತಿಳಿಸುವಾಗ ಬಹು ನಿರೀಕ್ಷಿತ ರಾಷ್ಟ್ರ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸುವ ವಿಚಾರದಲ್ಲಿ ಹಿಂದೇಟು ಹಾಕಿದ್ದರು. ಹಿಂದಿ ಭಾಷೆಗೆ ರಾಷ್ಟ್ರ ಭಾಷೆ ಎಂದು ಪ್ರಾಮುಖ್ಯತೆ ನೀಡದೆ 22 ರಾಷ್ಟ್ರೀಯ ಭಾಷೆಗಳಲ್ಲಿ ಹಿಂದಿ ಒಂದೆಂದೂ ಉಲ್ಲೇಖಿಸಿದ್ದರು. ಆದರೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಲು ಅಡ್ಡಿ ಇಲ್ಲ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಬಲವಂತವಾಗಿ ಎಲ್ಲ ರಾಜ್ಯಗಳ ಮೇಲೆ ಹೇರುತ್ತಿದೆ ಎಂದು ದೂರಿದರು.

ಒಂದು ದೇಶ - ಒಂದು ಭಾಷೆ ಆನಂತರ ಒಂದು ಧರ್ಮ ಎನ್ನುವುದು ಅವರ ಮೂಲ ಉದ್ದೇಶ. ಇದು ಕೋಮುವಾದ ಅಜೆಂಡಾ ಹೊಂದಿದೆ. ಹಿಂದಿಯನ್ನು ವ್ಯವಸ್ಥಿತವಾಗಿ ರಾಷ್ಟ್ರ ಭಾಷೆಯಂತೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಸಿ.ಕೆ.ಜೈನ್, ಮಲ್ಲಿಕಾರ್ಜುನ, ಕೆ.ಕಿಶನ ರಾವ್, ಆಸಿಫ್, ಸಂಜಯ, ವೈಷ್ಣವ, ದಿನೇಶ ಚೌದ್ರಿ, ಸುಭಾಷ ಗಡ್ಡಾಳೆ, ನಾಗರಾಜ, ಅಜೀಜ್, ಭೀಮೇಶ, ರಘು, ಶ್ರೀಕಾಂತ ಇದ್ದರು.

‘ಬ್ಯಾಂಕ್‌ನಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಸಿ’
ರಾಯಚೂರು:
ಬ್ಯಾಂಕ್‌ನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಎಲ್ಲ ಸೇವೆಯನ್ನು ಕನ್ನಡದಲ್ಲಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣೆ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಆನಂತರ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಪ್ರತಿವರ್ಷ ಸೆಪ್ಟೆಂಬರ್ 14ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡುತ್ತ ಬಂದಿದೆ. ಈ ಮೂಲಕ ಎಲ್ಲ ಭಾಷೆಗಳನ್ನು ಕಡೆಗಣಿಸುತ್ತಿದೆ. ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಹಕರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ನ ಎಲ್ಲ ವ್ಯವಹಾರಗಳನ್ನು ಸುಲಭವಾಗಿ ಕನ್ನಡದಲ್ಲಿ ನಡೆಸಲು ಕನ್ನಡಿಗರನ್ನು ಬ್ಯಾಂಕ್‌ನ ಉದ್ಯೋಗಿಗಳಾಗಿ ನೇಮಿಸಬೇಕು. ಕನ್ನಡ ಬಾರದ ಸಿಬ್ಬಂದಿಯನ್ನು ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡ ಇತ್ಯಾದಿ ಆಚರಣೆಗಳನ್ನು ಕೂಡಲೇ ಕೈಬಿಡಬೇಕು ಎಂದರು.

ಕರ್ನಾಟಕ ರಕ್ಷಣೆ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ್ ರೆಡ್ಡಿ, ಪದಾಧಿಕಾರಿಗಳಾದ ವಿಷ್ಣು ಪ್ರಸಾದ್, ಕೆ. ಡೊಂಡಪ್ಪ, ಸತ್ಯನಾರಾಯಣ, ಆಂಜಿನಯ್ಯ, ವೆಂಕಟರೆಡ್ಡಿ ಹಾಗೂ ವೆಂಕಟೇಶ ಯಾದವ ಇದ್ದರು.

ಹಿಂದಿ ದಿವಸ್ ಆಚರಣೆಗೆ ವಿರೋಧ
ಸಿಂಧನೂರು:
ಹಿಂದಿ ಭಾಷೆಯೊಂದಕ್ಕೆ ಮಾತ್ರ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ, ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಎಲ್ಲ ಹಿಂದಿಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದು ಖಂಡನೀಯವಾಗಿದ್ದು, ಕೂಡಲೇ ಭಾರತದ ಭಾಷಾ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣೆ ವೇದಿಕೆಯ (ಟಿ.ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಪದಾಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಿಂದ ಶಾಸಕರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇರುವುದಿಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ 22 ಭಾಷೆಗಳು ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಗಂಗಣ್ಣ ಡಿಶ್ ದೂರಿದರು.

ಭಾರತ ಬಹುಭಾಷೆ, ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ಇರಬೇಕು. ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡದಂಥ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು. ಯಾವ ಭಾಷೆಯನ್ನೂ ನಿರ್ಲಕ್ಷ್ಯ ಮಾಡಕೂಡದು ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರಿ, ಉಪಾಧ್ಯಕ್ಷರಾದ ಬಾಷಾಸಾಬಾ, ವೀರೇಶ ಕಂಬಾರ, ನಗರ ಘಟಕದ ಅಧ್ಯಕ್ಷ ಸುರೇಶ ಗೊಬ್ಬರಕಲ್, ಸದಸ್ಯರಾದ ರಂಜಾನ್‍ಸಾಬ, ರವಿ ಕುನ್ನಟಗಿ, ಶರಣಬಸವ ಮಲ್ಲಾಪುರ, ಶ್ರೀಧರ್ ಆಚಾರ್ಯ, ಶರಣಪ್ಪ ಕುನ್ನಟಗಿ, ಸುರೇಶ ಡಿಶ್, ರಾಜಾಸಾಬ ಗಾಂಧಿನಗರ, ಪರಶುರಾಮ ಭೋವಿ, ಬೂದೇಶ ಮರಾಠ, ರುದ್ರಗೌಡ, ಬಸವರಾಜ ಟೈಲರ್, ಭೀಮೇಶ, ಚಂದ್ರಹಾಸ, ನಾಗರಾಜ, ಅಶೋಕ, ಮಹೇಶ ಹಾಗೂ ಲಿಂಗಪ್ಪ ಜಂಗಮರಹಟ್ಟಿ ಇದ್ದರು.

ಹಿಂದಿ ಹೇರಿಕೆ ತಡೆಯಲು ಒತ್ತಾಯ
ಮಸ್ಕಿ:
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಿಂದಿ ಹೇರಿಕೆ ಮತ್ತು ದೌರ್ಜನ್ಯ ನಿಲ್ಲಿಸಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಪಟ್ಟಣದ ವಿವಿಧ ಬ್ಯಾಂಕ್‌ಗಳ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ‌ನಡೆಸಿದರು.

ಹಿಂದಿ ದಿವಸ್ ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ‌. ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಹಿಂದಿಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ನಡೆದಿವೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ದುರಗರಾಜ್ ವಟಗಲ್ ಹೇಳಿದರು. ಬ್ಯಾಂಕ್‌ನ ಎಲ್ಲ ಸೇವೆಗಳನ್ನೂ ಕನ್ನಡದಲ್ಲೇ ನೀಡಬೇಕು. ಕರ್ನಾಟಕದವರನ್ನೇ ಬ್ಯಾಂಕ್‌ ಉದ್ಯೋಗಿಗಳನ್ನಾಗಿ ನೇಮಿಸಬೇಕು. ಕನ್ನಡ ಬಾರದ ಸಿಬ್ಬಂದಿಯನ್ನು  ಕೂಡಲೇ ವರ್ಗಾವಣೆ ಮಾಡಬೇಕು. ಚಲನ್, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲ ಅರ್ಜಿ ನಮೂನೆಗಳೂ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಕರವೇ ಪದಾಧಿಕಾರಿಗಳಾದ ನೂರ್ ಮಹ್ಮದ್, ಸುರೇಶ ಕಾಟಗಲ್, ವಸಂತ ವೆಂಕಟಾಪುರ, ಸದ್ದಾಂ ಗಾಂಧಿನಗರ, ಅಮರೇಶ ಹಂಚಿನಾಳ, ಚಂದಪ್ಪ ಹಾಲಾಪುರ, ಮುದಿಯಪ್ಪ ಹಾಗೂ ಮೌಲಸಾಬ ಸೇರಿದಂತೆ ಹಲವರು ಇದ್ದರು.

ಹಿಂದಿ ಹೇರಿಕೆಗೆ ವಿರೋಧ
ಲಿಂಗಸುಗೂರು:
ಭಾರತ ಒಕ್ಕೂಟ ಸರ್ಕಾರವು ಸೆಪ್ಟಂಬರ್ 14ರಂದು ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣೆ ವೇದಿಕೆ (ನಾರಾಯಣಗೌಡ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಗಳವಾರ ಸ್ಟೇಟ್‍ ಬ್ಯಾಂಕ್‍ ಆಫ್‍ ಇಂಡಿಯಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ವಿವಿಧ ಭಾಷೆಗಳನ್ನು ಹೊಂದಿರುವ ದೇಶದಲ್ಲಿ ಹಿಂದಿ ಭಾಷೆಗೆ ಮಹತ್ವ ನೀಡುವ ಮೂಲಕ ಕನ್ನಡವನ್ನು ಕಡೆಗಣಿಸುತ್ತ ಬಂದಿದೆ ಎಂದು ಆರೋಪಿಸಿದರು.

ಬ್ಯಾಂಕ್‍ ಸೇವೆಗಳು ಕನ್ನಡಿಕರಣಗೊಳಿಸಬೇಕು. ನೌಕರರು ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ದಾಖಲೆಗಳನ್ನು ಕನ್ನಡದಲ್ಲಿಯೇ ಮುದ್ರಿಸಬೇಕು. ಅನ್ಯ ಭಾಷೆ ದಿನಾಚರಣೆಗಳಿಗೆ ಕಡಿವಾಣ ಹಾಕಬೇಕು. ನಾಮಫಲಕ ಕನ್ನಡದಲ್ಲಿಯೇ ಹಾಕಬೇಕು. ಇಲ್ಲದೆ ಹೋದರೆ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಜಿಲಾನಿಪಾಷ. ಮುಖಂಡರಾದ ಶಿವರಾಜ ನಾಯಕ, ಅಜೀಜಪಾಷ, ಚಂದ್ರು ನಾಯಕ, ರವಿಕುಮಾರ ಬರಗುಡಿ, ಹನುಮಂತ ನಾಯಕ, ಅಲ್ಲಾವುದ್ದೀನ್‍ಬಾಬಾ, ಭಗೀರಥ ಸರ್ಜಾಪುರ, ರಾಮಣ್ಣ ನರಕಲದಿನ್ನಿ, ಅಜ್ಜು, ನಬಿ ರೋಡಲಬಂಡ ಹಾಗೂ ಅಮರೇಶ ಹಟ್ಟಿ ಇದ್ದರು.

‘ಕನ್ನಡದಲ್ಲಿ ವ್ಯವಹರಿಸಿ’
ಮುದಗಲ್:
‘ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿ ವ್ಯವಹರಿಸಬೇಕು’ ಎಂದು ಒತ್ತಾಯಿಸಿ ಮುದಗಲ್ ಕರ್ನಾಟಕ ರಕ್ಷಣೆ ವೇದಿಕೆ ಪದಾಧಿಕಾರಿಗಳು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಬ್ಯಾಂಕ್‌ಗಳಲ್ಲಿ ಹಿಂದಿ ಭಾಷೆ ಹೇರುತ್ತಿದ್ದಾರೆ. ಇದು ಅಲ್ಲದೆ ಅನ್ಯ ಭಾಷೆಯ ಸಿಬ್ಬಂದಿ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಗ್ರಾಹಕರಿಗೆ ವ್ಯವಹಾರ ಮಾಡಲು ತೊಂದರೆಯಾಗುತ್ತಿದೆ. ಕೆಲ ಸಿಬ್ಬಂದಿ ಗ್ರಾಹಕರ ಜತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಕೆಲವರು ಗ್ರಾಹಕರ ಜತೆ ಸಂರ್ಘಷಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಗ್ರಾಹಕರು ತೊಂದರೆ ಪಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಬ್ಬಂದಿ ಕನ್ನಡ ಭಾಷೆ ಕಲಿತು ಕನ್ನಡದಲ್ಲಿ ಮಾತನಾಡಬೇಕು. ಗ್ರಾಹಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಮೆರವಣಿಗೆಯಲ್ಲಿ ತೆರಳಿ ಎಸ್‌.ಬಿ.ಐ, ಕೆನರಾ, ಪ್ರಗತಿ ಕೃಷ್ಣಾ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಕರವೇ ಅಧ್ಯಕ್ಷ ಎಸ್.ಎ.ನಯೀಮ್ ಜುನೈದ್, ಸಾಬು ಹುಸೇನ್, ಮಹಾಂತೇಶ, ನಾಗರಾಜ ನಾಯಕ ಶಾಮೀದ ಅರಗಂಜಿ ವಿರೂಪಾಕ್ಷಿ ಹೂಗಾರ, ಇಸ್ಮಾಯಿಲ್ ಕೊಳ್ಳಿ, ಮಜೀದ್ ಆಟೋ,ಯಮನೂರ ನಾಯಕ ಹಾಗೂ ಗ್ಯಾನಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು