ಸೋಮವಾರ, ಡಿಸೆಂಬರ್ 5, 2022
19 °C
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಾಥಾ: ಕುಣಿದು ಕುಪ್ಪಳಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳು

ರಾರಾಜಿಸಿದ ಕನ್ನಡ ಬಾವುಟ: ಮೊಳಗಿದ ಜಯಘೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಾಡಳಿತದ ನೇತೃತ್ವದಲ್ಲಿ ಸೋಮವಾರ ವಿವಿಧ ಶಾಲಾ-ಕಾಲೇಜುಗಳ ಸುಮಾರು ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದಲ್ಲಿ ಜಾಥಾ ನಡೆಸಿದರು.

ಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ಸಿಂಗರಿಸಿದ್ದ ಭುವನೇಶ್ವರಿ ದೇವಿ ಮೂರ್ತಿಗೆ ಶಾಸಕ ವೆಂಕಟರಾವ್ ನಾಡಗೌಡ ಪುಷ್ಪ ನಮನ ಸಲ್ಲಿಸಿದರು.

ಮಿನಿ ವಿಧಾನಸೌಧದ ಆವರಣದಲ್ಲಿ ಸಂಗೀತ ಕಲಾವಿದರು ಹಾಗೂ ವಿದ್ಯಾರ್ಥಿಗಳು ಏಕಕಾಲದಲ್ಲಿ ಗಾಯನ ಮಾಡಿದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ,‘ನಾಡಿನ ಎಂಟು ಜನರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯಕ್ಕಿರುವ ಶಕ್ತಿಯ ನಿದರ್ಶನ. ಕನ್ನಡಿಗರು ಎಂದಿಗೂ ಹೃದಯ ವೈಶಾಲ್ಯ ಇರುವವರು, ಅದುವೇ ನಮ್ಮ ದೌರ್ಬಲ್ಯ ಆಗಬಾರದು’ ಎಂದರು. ‌

‘ವಿದ್ಯಾರ್ಥಿಗಳು ಮನೆಗಳ ಮೇಲೆ, ವ್ಯಾಪಾರಸ್ಥರು ಅಂಗಡಿಗಳ ಮೇಲೆ ಕನ್ನಡ ಬಾವುಟ ಕಟ್ಟಿ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸಬೇಕು’ ಎಂದರು.

ಜಾಥಾ ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ಸರ್ಕಲ್, ನಟರಾಜ್ ಕಾಲೊನಿ ರಸ್ತೆ, ಟಿಪ್ಪುಸುಲ್ತಾನ್ ಸರ್ಕಲ್, ಹಳೆ ಬಜಾರ್ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕನಕದಾಸ ಸರ್ಕಲ್, ಸಾರ್ವಜನಿಕ ಆಸ್ಪತ್ರೆ ಮೂಲಕ ಪುನಃ ಮಿನಿ ವಿಧಾನಸೌಧಕ್ಕೆ ಬಂದು ತಲುಪಿತು.

ಯಾಪಲಪರ್ವಿಯ ಹಗಲುವೇಷ ಕಲಾ ತಂಡ, ಚಿಕ್ಕಕೊಟ್ನೇಕಲ್‌ನ ಶ್ರೀದೇವಿ ಸಾಂಸ್ಕೃತಿಕ ಕಲಾ ತಂಡದ ಚರ್ಮವಾದ್ಯ, ಬಡಿಬೇಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕೋಲಾಟ ನೋಡುಗರ ಕಣ್ಮನ ಸೆಳೆಯಿತು.

ಶಾಸಕ ವೆಂಕಟರಾವ್ ನಾಡಗೌಡ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಪಂಚಾಯತ್‍ ರಾಜ್ ಇಲಾಖೆಯ ಎಂಜಿನಿಯರಿಂಗ್ ಉಪವಿಭಾಗದ ಎಇಇ ಅನ್ನಪೂರ್ಣ ಅವರು ಕೋಲಾಟ ಹಾಡಿದರು.

ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ವಿವಿಧ ವಾದ್ಯಗಳಿಗೆ ಕುಣಿದು ಕುಪ್ಪಳಿಸಿದರು.

ನಟರಾಜ್ ಕಾಲೊನಿ ಮತ್ತು ಹಳೆಬಜಾರ್ ರಸ್ತೆಯಲ್ಲಿ ಜೈನ ಸಮುದಾಯದ ಮುಖಂಡರು ಶರಬತ್, ಬಿಸ್ಕತ್, ಬಾಳೆ ಹಣ್ಣು ವಿತರಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್ ಆಚಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಲ್ಲಯ್ಯ, ಕ್ಷೇತ್ರ ಶಿಕ್ಷಣಾಧಕಾರಿ ಶರಣಪ್ಪ ವಟಗಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಿಡಿಪಿಒ ಸುದೀಪಕುಮಾರ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಜೆಡಿಎಸ್ ಮುಖಂಡರಾದ ಚಂದ್ರುಭೂಪಾಲ ನಾಡಗೌಡ ಹಾಗೂ ಅಭಿಷೇಕ ನಾಡಗೌಡ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು