ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ದುಡಿಮೆಗೆ ‘ಮಳೆಮರ’ ದಾರಿ

ಹೂವು, ಕಾಯಿ, ಪುಡಿ ಸಂಗ್ರಹಿಸಿ ಶೂ ಪಾಲೀಶ್ ಫ್ಯಾಕ್ಟರಿಗೆ ಪೂರೈಕೆ
Published 6 ಡಿಸೆಂಬರ್ 2023, 6:04 IST
Last Updated 6 ಡಿಸೆಂಬರ್ 2023, 6:04 IST
ಅಕ್ಷರ ಗಾತ್ರ

ಕವಿತಾಳ: ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಬರುವ ಯುವಕರು ಇಲ್ಲಿನ ರಸ್ತೆ ಬದಿ ಮರಗಳಿಂದ ಹೂವು, ಕಾಯಿ, ಚಿಗುರು ಮತ್ತು ಕೊಂಬೆಗಳನ್ನು ಸಂಗ್ರಹಿಸಿ ಅದನ್ನು ಪುಡಿ ಮಾಡಿ ಕರೀಂ ನಗರದ ಫ್ಯಾಕ್ಟರಿಗೆ ಪೂರೈಸುವ ಮೂಲಕ ಜೀವನೋಪಾಯಕ್ಕೆ ದಾರಿ ಕಂಡುಕೊಂಡಿದ್ದಾರೆ. 

ಜಿಲ್ಲೆಯ ಸಿರವಾರ, ಕವಿತಾಳ, ಮಾನ್ವಿ ಸೇರಿದಂತೆ ವಿವಿಧೆಡೆ ರಸ್ತೆ ಬದಿ ಬೆಳೆದ ‘ಮಳೆಮರ’ ಗಳು ಈ ಯುವಕರ ದುಡಿಮೆಗೆ ಆಸರೆಯಾಗಿವೆ.

ಕಡು ಹಸಿರು ಬಣ್ಣದ ಸಣ್ಣ ಸಣ್ಣ ಎಲೆಗಳಿಂದ ಕೂಡಿದ ಮಳೆ ಮರ ಎತ್ತರಕ್ಕೆ ಛತ್ರಿ ಆಕಾರಕ್ಕೆ ಬೆಳೆಯುತ್ತದೆ, ನೋಡಿದರೆ ಎತ್ತರದಲ್ಲಿ ಹಸಿರು ಛತ್ರಿ ನೋಡಿದಂತೆ ಭಾಸವಾಗುತ್ತದೆ,

ಈ ಮರದ ಹಳದಿ ಮಿಶ್ರಿತ ಕೆಂಪು ಬಣ್ಣದ ಹೂವು, ಕಾಯಿ, ಕೊಂಬೆಗಳನ್ನು ಸಂಗ್ರಹಿಸಿ ಒಣಗಿಸಿ ಡಾಂಬರು ರಸ್ತೆಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದನ್ನು ಸೋಸುವ ಮೂಲಕ ಸಣ್ಣದಾದ ಪುಡಿಯನ್ನು ಫ್ಯಾಕ್ಟರಿಗೆ ಪೂರೈಸಲಾಗುತ್ತದೆ.

ಪ್ರತಿ ಒಂದು ಕೆ.ಜಿ. ಮರದ ಪುಡಿಯನ್ನು ₹200ರಂತೆ ಖರೀದಿಸುವ ಮದ್ಯವರ್ತಿಗಳು ಅದನ್ನು ಹೆಚ್ಚಿನ ದರಕ್ಕೆ ಶೂ ಪಾಲಿಶ್ ತಯಾರಿಸುವ ಫ್ಯಾಕ್ಟರಿಗೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಯುವಕರು.

‘ಮೂರು ಜನ ಕೆಲಸ ಮಾಡಿದರೆ ಎರಡು ದಿನದಲ್ಲಿ ಅಂದಾಜು 10ರಿಂದ 15 ಕೆ.ಜಿ. ಯವರೆಗೆ ಪುಡಿ ಸಂಗ್ರಹವಾಗುತ್ತದೆ. ಅದನ್ನು ಸಣ್ಣ ಚೀಲಗಳಲ್ಲಿ ತುಂಬಿ ಬಸ್‌ನಲ್ಲಿ ಸಾಗಿಸುತ್ತೇವೆ ಅಲ್ಲಿ ತೂಕ ಹಾಕುವ ಮದ್ಯವರ್ತಿಗಳು ಹಣ ನೀಡುತ್ತಾರೆ’ ಎಂದು ಯುವಕ ನಾಗಸಾಯಿ ಹೇಳಿದರು.

‘ನೂರಾರು ಕಿ.ಮೀ. ದೂರದಿಂದ ಬರುವ ಯುವಕರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಮಳೆ ಮರಗಳ ಸಂಖ್ಯೆ ನಮಲ್ಲಿಯೇ ಹೆಚ್ಚು ಕಂಡು ಬರುತ್ತವೆ. ಈ ಮರಗಳ ಉಪಯೋಗದ ಬಗ್ಗೆ ಇಲ್ಲಿನವರಿಗೆ ತಿಳಿದಿಲ್ಲ. ಹೊರ ರಾಜ್ಯದಿಂದ ಬರುವ ಯುವಕರು ಈ ರೀತಿ ಅದನ್ನು ಸಂಸ್ಕರಿಸಿ ದುಡಿಮೆ ಕಂಡು ಕೊಂಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಶ್ರಮಜೀವಿ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಹೇಳಿದರು.

‘ಮಳೆ ಮರ ಅಲಂಕಾರಿಕ ಮರವಾಗಿದೆ ಉತ್ತಮ ನೆರಳು ನೀಡುವ ಕಾರಣಕ್ಕೆ ರಸ್ತೆ ಬದಿ ನೆಡಲಾಗುತ್ತದೆ. ಅದರ ಹೂವು, ಕಾಯಿ ಮತ್ತು ಕೊಂಬೆಗಳನ್ನು ಬಣ್ಣ, ಅಂಟು ಮತ್ತಿತರ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೂದೆಪ್ಪ ಹೇಳಿದರು.

ಕವಿತಾಳ ಸಮೀಪದಲ್ಲಿ ರಸ್ತೆ ಬದಿಯ ಮಳೆ ಮರದಿಂದ ಕಾಯಿ ಹೂವು ಬಿಡಿಸಿ ಪುಡಿ ಮಾಡುತ್ತಿರುವ ತೆಲಂಗಾಣ ಮೂಲದ ಯುವಕರು
ಕವಿತಾಳ ಸಮೀಪದಲ್ಲಿ ರಸ್ತೆ ಬದಿಯ ಮಳೆ ಮರದಿಂದ ಕಾಯಿ ಹೂವು ಬಿಡಿಸಿ ಪುಡಿ ಮಾಡುತ್ತಿರುವ ತೆಲಂಗಾಣ ಮೂಲದ ಯುವಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT