ಭಾನುವಾರ, ಆಗಸ್ಟ್ 14, 2022
22 °C
ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ

ತುರ್ತು ಕಾಮಗಾರಿಗೆ ಕೆಕೆಆರ್‌ಡಿಬಿ ಅನುದಾನ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು 45 ದಿನಗಳಲ್ಲಿ ಪೂರ್ಣಗೊಳಿಸಲು ಅವಕಾಶವಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯಡಿ ಅನುದಾನ ಬಳಕೆ ಮಾಡಿಕೊಳ್ಳಬೇಕು. ಶೀಘ್ರ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು, ಅಗತ್ಯವಿದ್ದಲ್ಲಿ ಅಲ್ಪಾವಧಿ ಟೆಂಡರ್‌ ಕರೆಯುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಕೆಆರ್‌ಡಿಬಿ ಹಾಗೂ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೆಕೆಆರ್‌ಡಿಬಿ ಅನುದಾನದಡಿಯಲ್ಲಿ ಕೈಗೆತ್ತಿಕೊಂಡ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲಿದ್ದು ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ದೇವದುರ್ಗ ಪಟ್ಟಣದಲ್ಲಿ ಎಂಜಿನಿಯರಿಂಗ್ ಕಾಲೇಜು ಹಾಗೂ ಸಿರವಾರ ಪಟ್ಟಣದಲ್ಲಿ ಕ್ರೀಡಾಂಗಣ ಕಾಮಗಾರಿ ಸೇರಿ ಒಟ್ಟು ಮೂರು ಕಾಮಗಾರಿಗಳು ಈ ಕೂಡಲೇ ಆರಂಭಿಸುವಂತೆ ನಿರ್ದೇಶನ ನೀಡಿದರು.

ಕಾಮಗಾರಿ ನಿರ್ವಹಿಸಿದ ನಂತರ ಸಕಾಲಕ್ಕೆ ಬಿಲ್‍ನ್ನು ಕೆಕೆಆರ್‌ಡಿಬಿ ವೆಬ್‍ಸೈಟ್‍ನಲ್ಲಿ ಅಪಲೋಡ್ ಮಾಡಬೇಕು. ಹೊಸ ಕಾಮಗಾರಿ ಆರಂಭಕ್ಕೆ ಬೇಕಾದ ಕ್ರಿಯಾಯೋಜನೆ ಸಿದ್ದಪಡಿಸಿಟ್ಟಿಕೊಳ್ಳಿ ಅನುದಾನ ಬಿಡುಗಡೆಯಾದಾಗ ಕಾಮಗಾರಿ ಆರಂಭಿಸಲು ಸಹಕಾರಿಯಾಗಲಿದೆ. ಕೆಕೆಆರ್‌ಡಿಬಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಸರ್ಕಾರಕ್ಕೆ ವಾಪಸಾಗದಂತೆ ಎಚ್ಚರಿಕೆ ವಹಿಸಬೇಕು. ಸಿರವಾರ ಪಟ್ಟಣದಲ್ಲಿ ನೂತನ ಕ್ರಿಡಾಂಗಣಕ್ಕೆ ಸರ್ಕಾರಿ ಭೂಮಿ ಗುರುತಿಸಲಾಗಿದೆ. ಈ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವದುರ್ಗ ತಾಲ್ಲೂಕಿನಲ್ಲಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ತಕ್ಷಣವೇ ಆರಂಭಸಿಲು ಸೂಚಿಸಿದರು. ರಾಯಚೂರು ತಾಲ್ಲೂಕಿನ ಎಲೆಬಿಚ್ಚಾಲಿ, ಮಟಮಾರಿ ಹಾಗೂ ಮಂಡಲಗೇರಾ ಗ್ರಾಮಗಳಲ್ಲಿ ಕೈಗೆತ್ತಿಕೊಂಡಿರುವ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು. ದೇವದುರ್ಗದ ಪಟ್ಟಣದಲ್ಲಿ ಕನಕ ವೃತ್ತ, ವಾಲ್ಮಿಕಿ ಭವನ ಹಾಗೂ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಬಿಲ್ ಪಾವತಿಸುವಂತೆ ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಮಷಿಹಾಳದ ಹತ್ತಿರದ ಹಳ್ಳದ ಸೇತುವೆ ಕಾಮಗಾರಿ ಅಪೂರ್ಣವಾಗಿದ್ದು, ತಾಲ್ಲೂಕಿನಲ್ಲಿ ಕೈಗೆತ್ತಿಕೊಳ್ಳದ ಕಾಮಗಾರಿಯ ಅನುದಾನವನ್ನು ಈ ಮಷಿಹಾಳ ಸೇತುವೆ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡಿಕೊಳ್ಳಿ, ಇಲ್ಲದಿದ್ದರೆ ಹೆಚ್ಚುವರಿ ಅನುದಾನ ನೀಡುವಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದರು.

ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಅಪೂರ್ಣಗೊಂಡಿದ್ದು ಶೀಘ್ರ ಪೂರ್ಣಗೊಳಿಸಿ ಎಂದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸಪ್ಪ ಮೆಕಾಲೆ, ದೇವದುರ್ಗ ಎಇಇ ನಸರತ್ ಅಲಿ, ರಾಯಚೂರು ಎಇಇ ಜಿ.ಅನುಪ್ರಕಾಶ, ಮಲ್ಲಿಕಾರ್ಜುನ ಗೋಪಿಶೆಟ್ಟಿ, ಸಿಂಧನೂರು ಎಇಇ ಸಿ.ಎಸ್.ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು