ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಮೂಲಸೌಕರ್ಯಗಳ ಕೊರತೆ: ಗ್ರಾಹಕರ ಹಿತ ಕಡೆಗಣಿಸಿದ ಬಂಕ್‌ ಮಾಲೀಕರು

Published 1 ಜನವರಿ 2024, 6:05 IST
Last Updated 1 ಜನವರಿ 2024, 6:05 IST
ಅಕ್ಷರ ಗಾತ್ರ

ರಾಯಚೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಡಿ ಬರುವ ಜಿಲ್ಲೆಯ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯಗಳೇ ಇಲ್ಲ.

ಜಿಲ್ಲೆಯ ಪ್ರಮುಖ ಪೆಟ್ರೋಲ್‌ ಬಂಕ್‌ಗಳ ರಿಟೇಲ್‌ ಔಟ್‌ಲೆಟ್‌ಗಳಲ್ಲಿ ‘ಕಡ್ಡಾಯ’ ಸೌಲಭ್ಯಗಳನ್ನೇ ಒದಗಿಸದೆ ನಿಯಮ ಉಲ್ಲಂಘಿಸುತ್ತಿದ್ದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಪೆಟ್ರೋಲ್‌ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಏರ್‌ ಮಷಿನ್‌ ಇರಲೇಬೇಕೆಂಬ ನಿಯಮವಿದೆ. ನಿಯಮ ಉಲ್ಲಂಘನೆ ಆಧಾರದ ಮೇಲೆ ಬಂಕ್ ಮಾಲೀಕರಿಗೆ ದಂಡ ವಿಧಿಸಬೇಕಾದ ಸಂಬಂಧಿತ ಇಲಾಖೆಯ ಅಧಿಕಾರಿಗಳೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಏರ್‌ ಮಷಿನ್‌ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯೂ ಇಲ್ಲ. ನಿನ್ನೆಯಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದೆ, ಕೆಲಸದವರು ಬಂದಿಲ್ಲ ಇತ್ಯಾದಿ ಅನೇಕ ಬಗೆಯ ಸುಳ್ಳು ಹೇಳಿ ಗ್ರಾಹಕರ ದಿಕ್ಕು ತಪ್ಪಿಸುತ್ತಿದ್ದಾರೆ.

1960–70ರ ದಶಕದಲ್ಲಿ ಆರಂಭವಾದ ಹಳೆಯ ಪೆಟ್ರೋಲ್‌ ಬಂಕ್‌ಗಳಿಗೆ ಸ್ಥಳದ ಕೊರತೆ ಎದುರಾಗಿದೆ. ಹೀಗಾಗಿ ಶೌಚಾಲಯ ನಿರ್ಮಿಸಿಲ್ಲ. ಏರ್‌ ಮಷಿನ್ ಹಾಳಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ ಮ್ಯಾನೇಜರ್‌ ಭರವಸೆ ಕೊಡುತ್ತಾರೆ.

ಕೆಲ ಪೆಟ್ರೋಲ್‌ ಬಂಕ್‌ ಮಾಲೀಕರು ವಾಹನಗಳ ಪಂಕ್ಚರ್‌ ತೆಗೆಯುವ ವ್ಯಕ್ತಿಗಳಿಗೆ ಏರ್‌ಮಷಿನ್ ಹಾಗೂ ಅದರ ಪಕ್ಕದ ಜಾಗವನ್ನು ಬಾಡಿಗೆ ಕೊಟ್ಟಿದ್ದಾರೆ. ಅಲ್ಲಿ ಒಂದು ಟಯರ್‌ಗೆ ಗಾಳಿ ತುಂಬಿಸಲು ಕನಿಷ್ಠ ₹ 5 ಶುಲ್ಕ ಪಡೆಯಲಾಗುತ್ತಿದೆ. ಬಂಕ್‌ ಮಾಲೀಕರು ಸೇವೆ ಹೆಸರಲ್ಲಿ ವ್ಯವಹಾರಕ್ಕೆ ಇಳಿದಿರುವುದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

‘ಎಲ್ಲ ಪೆಟ್ರೋಲ್‌ ಬಂಕ್‌ ಕಂಪನಿಗಳ ಅಧಿಕಾರಿಗಳಿಗೆ ಪತ್ರ ಬರೆದು ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸೂಚಿಸಲಾಗಿದೆ. ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳು ಲಿಖಿತ ಭರವಸೆ ಕೊಟ್ಟರೂ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದ್ದಾರೆ. ಬಂಕ್‌ಗಳಿಗೆ ಭೇಟಿಕೊಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾಂತಗೇರಿ ಹೇಳುತ್ತಾರೆ.

ಪೂರಕ ಮಾಹಿತಿ: ಡಿ.ಎಚ್‌.ಕಂಬಳಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಅಮರೇಶ ನಾಯಕ, ಮಂಜುನಾಥ ಬಳ್ಳಾರಿ, ಶರಣಪ್ಪ ಆನೆಹೊಸೂರು, ಅಲಿಬಾಬಾ ಪಟೇಲ್, ಪಿ.ಕೃಷ್ಣ ಸಿರವಾರ.

ಸಿಂಧನೂರಿನ ರಾಯಚೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಏರ್‌ ಮಷಿನ್‌ ಪಾಳು ಬಿದ್ದಿದೆ
ಸಿಂಧನೂರಿನ ರಾಯಚೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಏರ್‌ ಮಷಿನ್‌ ಪಾಳು ಬಿದ್ದಿದೆ
ಮಾನ್ವಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಸ್ಥಗಿತಗೊಂಡಿರುವ ಏರ್ ಫಿಲ್ ಘಟಕ
ಮಾನ್ವಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಸ್ಥಗಿತಗೊಂಡಿರುವ ಏರ್ ಫಿಲ್ ಘಟಕ
ಸಿರವಾರದ ಲಿಂಗಸುಗೂರು ರಸ್ತೆಯಲ್ಲಿ ಪರಿಮಳಾ ಪೆಟ್ರೋಲ್ ಬಂಕ್‌ನಲ್ಲಿರುವ ಏರ್‌ ಮಷಿನ್
ಸಿರವಾರದ ಲಿಂಗಸುಗೂರು ರಸ್ತೆಯಲ್ಲಿ ಪರಿಮಳಾ ಪೆಟ್ರೋಲ್ ಬಂಕ್‌ನಲ್ಲಿರುವ ಏರ್‌ ಮಷಿನ್
ಮಸ್ಕಿಯ ನಾಯರಾ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಉಚಿತ ಏರ್ ತುಂಬಲಾಗುತ್ತಿದೆ
ಮಸ್ಕಿಯ ನಾಯರಾ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಉಚಿತ ಏರ್ ತುಂಬಲಾಗುತ್ತಿದೆ
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಇಂಡಿಯನ್ ಆಯಿಲ್‌ ಕಂಪನಿಯ ಪೆಟ್ರೋಲ್‌ ಬಂಕ್‌ನಲ್ಲಿ ಸ್ಥಗಿತಗೊಂಡಿರುವ ಏರ್‌ ಮಷಿನ್
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಇಂಡಿಯನ್ ಆಯಿಲ್‌ ಕಂಪನಿಯ ಪೆಟ್ರೋಲ್‌ ಬಂಕ್‌ನಲ್ಲಿ ಸ್ಥಗಿತಗೊಂಡಿರುವ ಏರ್‌ ಮಷಿನ್
ಪೆಟ್ರೋಲ್ ಬಂಕ್‌ನಲ್ಲಿ ಮೂಲಸೌಕರ್ಯಗಳ ಕೊರತೆ
ಸಿಂಧನೂರಲ್ಲಿ ಹತ್ತು ಪೆಟ್ರೋಲ್ ಬಂಕ್‌ಗಳಿದ್ದರೂ ಒಂದರಲ್ಲೂ ಪರಿಪೂರ್ಣವಾದ ಮೂಲಸೌಕರ್ಯಗಳಿಲ್ಲ. ಕುಷ್ಟಗಿ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಕಂಪನಿಯ ಬಂಕ್‌ನಲ್ಲಿ ಏರ್ ಮಷಿನ್‌ ಸೌಕರ್ಯವಿಲ್ಲ. ಗಂಗಾವತಿ ರಸ್ತೆಯಲ್ಲಿರುವ ಬಂಕ್‌ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಬಪ್ಪುರ ರಸ್ತೆಯಲ್ಲಿ ಇಂಡಿಯನ್ ಆಯಿಲ್ ಕಂಪನಿಯ ಬಂಕ್‌ನಲ್ಲಿ ಮಾತ್ರ ಕುಡಿಯುವ ನೀರಿನ ಸೌಕರ್ಯ ಏರ್ ಮಷಿನ್ ಮತ್ತು ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಶೌಚಾಲಯ ಇದೆ. ಲಿಂಗಸುಗೂರು ತಾಲ್ಲೂಕು ಕೇಂದ್ರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪೆಟ್ರೋಲ್ ಬಂಕ್‌ಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಗ್ರಾಹಕರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಏರ್‌ ಮಷಿನ್‌ಗಳು ಇದ್ದರೂ ಹಣ ಪಡೆದೇ ಸೇವೆ ಕೊಡಲಾಗುತ್ತಿದೆ. ಕಾಟಾಚಾರಕ್ಕೆ ಶೌಚಾಲಯ ನಿರ್ಮಿಸಿದ್ದು ಸದಾ ಬೀಗ ಹಾಕಿರುತ್ತದೆ. ಸಿಬ್ಬಂದಿ ಮಾತ್ರ ಬಳಕೆ ಮಾಡುವುದು ಸಾಮಾನ್ಯ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಂಡುಬರಲಿಲ್ಲ. ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿ 150 (ಎ) ಹೊಂದಿಕೊಂಡು ನಾಲ್ಕು ಪೆಟ್ರೋಲ್ ಬಂಕ್‌ಗಳಿದ್ದು ನಾಯರ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಎಲ್ಲ ಬಗೆಯ ಸೌಕರ್ಯ ಕಲ್ಪಿಸಲಾಗಿದೆ. ಉಳಿದ ಬಂಕ್‌ಗಳಲ್ಲಿ ಒಂದು ಸೌಲಭ್ಯವಿದ್ದರೆ ಇನ್ನೊಂದಿಲ್ಲ.
ಇದ್ದೂ ಇಲ್ಲದಂತಿರುವ ಏರ್ ಫಿಲ್ ಘಟಕಗಳು
ಮಾನ್ವಿ: ಪಟ್ಟಣದ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿಯುದ್ದಕ್ಕೂ ಒಟ್ಟು ಒಂಬತ್ತು ಪೆಟ್ರೋಲ್ ಬಂಕ್‌ಗಳು ಇವೆ.  ಬಹುತೇಕ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಏರ್ ಫಿಲ್ ಘಟಕಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ಇದ್ದೂ ಇಲ್ಲದಂತಿವೆ. ಪಟ್ಟಣದ ರಿಲಯನ್ಸ್ ಹಾಗೂ ಇಂಡಿಯನ್ ಆಯಿಲ್ ಬಂಕ್‌ಗಳಲ್ಲಿ ಏರ್ ಫಿಲ್ ಘಟಕಗಳು ಸ್ಥಗಿತಗೊಂಡಿವೆ. ಈಚೆಗೆ ಕೇಂದ್ರ ಗುಣಮಟ್ಟ ತಪಾಸಣಾ ತಂಡ ಸ್ಥಳೀಯ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಲಹೆ ಸೂಚನೆಗಳನ್ನು ನೀಡಿದೆ. ಕೇಂದ್ರ ತಂಡದ ಸೂಚನೆ ಮೇರೆಗೆ ಬಂಕ್‌ನಲ್ಲಿ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕ ಸಂತೋಷ ಜೈನ್ ತಿಳಿಸಿದರು.
ಶೌಚಾಲಯಕ್ಕೆ ಬೀಗ
ಕವಿತಾಳ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಎರಡು ಪೆಟ್ರೋಲ್‌ ಬಂಕ್‌ಗಳಿವೆ. ಎಚ್.ಪಿ ಮತ್ತು ಇಂಡಿಯನ್‌ ಕಂಪನಿ ಬಂಕ್‌ಗಳಲ್ಲಿ ಶೌಚಾಲಯ ಹಾಗೂ ಟಯರ್‌ಗಳಿಗೆ ಗಾಳಿ ತುಂಬುವ ಯಂತ್ರಗಳು ಲಭ್ಯವಿದ್ದು ಸುಸ್ಥಿತಿಯಲ್ಲಿವೆ. ‘ಹೊರಗಿನವರು ಬಂದು ಶೌಚಾಲಯ ಬಳಕೆ ಮಾಡಿದ ನಂತರ ಸರಿಯಾಗಿ ನೀರು ಹಾಕದೇ ಹೋಗುತ್ತಾರೆ. ಹೀಗಾಗಿ ಶೌಚಾಲಯಗಳಿಗೆ ಬೀಗ ಹಾಕಿರುತ್ತೇವೆ. ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಲು ಬರುವ ಗ್ರಾಹಕರು ಶೌಚಾಲಯ ಉಪಯೋಗಿಸುತ್ತಾರೆ’ ಎಂದು ಎಚ್.ಪಿ. ಬಂಕ್‌ ಮಾಲೀಕ ಅರುಣಕುಮಾರ ಹೇಳುತ್ತಾರೆ. ‘ಗ್ರಾಹಕರು ತಾವಾಗಿಯೇ ಟಯರ್‌ಗಳಿಗೆ ಗಾಳಿ ತುಂಬಿಸಿಕೊಳ್ಳಬಹುದು. ಇಲ್ಲವಾದರೆ ಬಂಕ್‌ ಸಿಬ್ಬಂದಿಯೇ ಗಾಳಿ ತುಂಬಿಸಿಕೊಡುತ್ತಾರೆ. ಶೌಚಾಲಯಗಳು ಸುಸ್ಥಿಯಲ್ಲಿದ್ದು ದೂರ ಪ್ರಯಾಣದ ಕುಟುಂಬ ಸಮೇತ ಬರುವ ಗ್ರಾಹಕರು ಶೌಚಾಲಯ ಬಳಕೆ ಮಾಡುತ್ತಾರೆ’ ಎಂದು ಇಂಡಿಯನ್‌ ಬಂಕ್‌ ಮಾಲೀಕ ಪ್ರಸಾದ ವರಲಕ್ಷ್ಮೀ ಹೇಳಿದರು. ಕವಿತಾಳದ ಎಚ್.ಪಿ. ಪೆಟ್ರೋಲ್‌ ಬಂಕ್‌ನಲ್ಲಿರುವ ಶೌಚಾಲಯ ಮತ್ತು ಟಯರ್‌ಗೆ ಗಾಳಿ ತುಂಬುವ ಯಂತ್ರ ಬಳಕೆಯಲ್ಲಿದೆ.
ಹೊಸ ಪೆಟ್ರೋಲ್ ಬಂಕ್‌ಗಳಲ್ಲಿ ಉತ್ತಮ ಸೌಲಭ್ಯ
ಸಿರವಾರ: ಪಟ್ಟಣದಲ್ಲಿರುವ 7 ಪೆಟ್ರೋಲ್ ಪಂಪ್‌ಗಳಲ್ಲಿ 4 ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯ ಕುಡಿಯುವ ನೀರು ಮತ್ತು ಏರ್ ಹಾಕುವ ವ್ಯವಸ್ಥೆ ಇದೆ. ಮೂರು ಬಂಕ್‌ಗಳಲ್ಲಿ ನೆಪಮಾತ್ರಕ್ಕೆ ಏರ್‌ ಮಷಿನ್‌ ಅಳವಡಿಸಲಾಗಿದೆ. ಶೌಚಾಲಯ ನಿರ್ಮಿಸಲಾಗಿದೆ. ಇದನ್ನು ಗ್ರಾಹಕರ ಸೇವೆಗೆ ಮುಕ್ತಗೊಳಿಸಿಲ್ಲ. ಪಟ್ಟಣದ ನಾಯರಾ ಪೆಟ್ರೋಲ್ ಬಂಕ್ ಮತ್ತು ಪರಿಮಳಾ ಇಂಡಿಯನ್ ಪೆಟ್ರೋಲ್ ಬಂಕ್‌ಗಳಲ್ಲಿ ಸುಸಜ್ಜಿತವಾದ ಶೌಚಾಲಯಗಳಿದ್ದು ಪರಿಮಳಾ ಬಂಕ್‌ನಲ್ಲಿ ಅತ್ಯಾಧುನಿಕ ಕಾರ್‌ಗಳಿಗೆ ಬೇಕಾಗುವ ನೈಟ್ರೋಜನ್ ಏರ್ ಮತ್ತು ಎಲ್ಲಾ ವಾಹನಗಳಿಗೆ ಬೇಕಾಗುವ ಏರ್ ಹಾಕುವ ವ್ಯವಸ್ಥೆ ಮಾಡಲಾಗಿದೆ.
ನಿಯಮ ಗಾಳಿಗೆ ತೂರಿದ ಬಂಕ್‌ ಮಾಲೀಕರು
ದೇವದುರ್ಗ: ಪಟ್ಟಣದಲ್ಲಿ ಇಂಡಿಯನ್ ಆಯಿಲ್ ಕಂಪನಿಯ 5 ಭಾರತ್ ಪೆಟ್ರೋಲಿಯಂ ಕಂಪನಿಯ 3 ಹಿಂದೂಸ್ತಾನ್ ಪೆಟ್ರೋಲಿಯಂನ 2 ಹಾಗೂ ನಾಯರಾ ಕಂಪನಿಯ 1 ಪೆಟ್ರೋಲ್ ಬಂಕ್‌ಗಳು ಇವೆ. ವಾಹನಗಳಿಗೆ ಗಾಳಿ ಮತ್ತು ಸವಾರರಿಗೆ ಶೌಚಾಲಯ ಕುಡಿಯುವ ನೀರಿನ ಸೌಲಭ್ಯ ನೀಡುತ್ತಿಲ್ಲ. ಪಟ್ಟಣದ ಮೊದಲ ಬಂಕ್ ಖೇಣದ್ ಮುರಿಗೆಪ್ಪ ಪೆಟ್ರೋಲ್ ಬಂಕ್‌ನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಕೊಪ್ಪರ ಕ್ರಾಸ್ ಹತ್ತಿರದ ತಾಯಿ ಕೃಪಾ ಪೆಟ್ರೋಲಿಯಂ ಮಾಲೀಕರು ಸಾರ್ವಜನಿಕರು ಶೌಚಾಲಯ ಗಲೀಜು ಮಾಡುತ್ತಾರೆಂದು ಬೀಗ ಹಾಕಿದ್ದಾರೆ. ಪ್ರಭು ಪೆಟ್ರೋಲ್‌ ಬಂಕ್‌ನಲ್ಲಿ ಶೌಚಾಲಯ ವ್ಯವಸ್ಥೆ ಇದೆ. ಆದರೆ ಬಳಕೆಗೆ ಅವಕಾಶ ನೀಡುತ್ತಿಲ್ಲ. ಗಾಳಿ ತುಂಬಿಸುವ ಯಂತ್ರ ಹಾಳಾಗಿ 5 ವರ್ಷ ಕಳೆದಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಜಾಲಹಳ್ಳಿ ರಸ್ತೆಯಲ್ಲಿ ಬರುವ ಹಿಂದೂಸ್ತಾನ್ ಪೆಟ್ರೋಲಿಯಂ ಇಂಡಿಯನ್ ಆಯಿಲ್ ಪೆಟ್ರೋಲ್ ಶಹಾಪುರ ರಸ್ತೆಯಲ್ಲಿ ಬರುವ ಭಾರತ ಪೆಟ್ರೋಲ್ ಮತ್ತು ನಾಯರಾ ಪೆಟ್ರೋಲ್ ಬಂಕ್‌ಗಳು ಕಳೆದ 2 ವರ್ಷಗಳ ಹಿಂದಷ್ಟೇ ಪ್ರಾರಂಭಗೊಂಡಿದ್ದು ಶೌಚಾಲಯ ಬಳಕೆಯಲ್ಲಿದ್ದು ಏರ್‌ ಮಷಿನ್‌ ಕಾರ್ಯನಿರ್ವಹಿಸುತ್ತಿಲ್ಲ. ಬಂಕ್‌ ಮಾಲೀಕರು ಅದನ್ನು ದುರಸ್ತಿಯನ್ನೂ ಮಾಡುತ್ತಿಲ್ಲ. ‘ಗ್ರಾಹಕರು ಬಂಕ್‌ಗಳಲ್ಲಿ ಪೆಟ್ರೋಲ್‌ ಡೀಸೆಲ್‌ ತುಂಬಿಸಿಕೊಂಡ ನಂತರ ಟಯರ್‌ಗಳಲ್ಲಿ ಗಾಳಿ ತುಂಬಿಸಿಕೊಳ್ಳಲು ಪಂಕ್ಚರ್ ಅಂಗಡಿಗೆ ತೆರಳಬೇಕಾಗಿದೆ’ ಎಂದು ಗ್ರಾಯಕ ರಮೇಶ ನಾಯಕ ಹೇಳುತ್ತಾರೆ.
ಜಾಲಹಳ್ಳಿ: ಒಂದಿದ್ದರೆ ಇನ್ನೊಂದಿಲ್ಲ
ಜಾಲಹಳ್ಳಿ: ಪಟ್ಟಣದಿಂದಲೇ ಹಾದುಹೋಗಿರುವ ಕಲ್ಮಲಾ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಮೂರು ಪೆಟ್ರೋಲ್ ಬಂಕ್‌ಗಳು ಇದ್ದು ಎಚ್.ಪಿ ಬಂಕ್ ನಾಯರಾ ಬಂಕ್ ಹಾಗೂ ಭಾರತ ಪೆಟ್ರೋಲಿಯಂ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ನಾಯರಾ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಎಲ್ಲ ಸೌಲಭ್ಯ ಇದೆ. ಕುಡಿಯುವ ನೀರು ಶೌಚಾಲಯ ವಾಹನಗಳಿಗೆ ಏರ್ ತುಂಬಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಎರಡು ಬಂಕ್‌ಗಳಲ್ಲಿ ಕುಡಿಯುವ ನೀರು ಶೌಚಾಲಯ ಇದೆ. ಅದರೆ ಪೆಟ್ರೋಲ್ ಡೀಸೆಲ್ ತುಂಬಿಸಿಕೊಳ್ಳಲು‌ ಬರುವ ವಾಹನಗಳಿಗೆ ಉಚಿತ ಏರ್ ತುಂಬಿಕೊಳ್ಳುವ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಮೂರು ಪೆಟ್ರೋಲ್ ಬಂಕ್‌ಗಳ ಪೈಕಿ ನಾಯರಾ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ನಿಯಮ ಪಾಲನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT