ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಾತ್ರೆಗಳೇ ಆಹಾರವಾಗದಿರಲಿ, ಆಹಾರವೇ ಆರೋಗ್ಯ ವರ್ಧಕವಾಗಲಿ’

ಸಂಸ್ಥಾಪನಾ ದಿನಾಚರಣೆ
Published 22 ನವೆಂಬರ್ 2023, 14:33 IST
Last Updated 22 ನವೆಂಬರ್ 2023, 14:33 IST
ಅಕ್ಷರ ಗಾತ್ರ

ರಾಯಚೂರು: ‘ಆಹಾರವೇ ಆರೋಗ್ಯ ವರ್ಧಕವಾಗಬೇಕು ಹೊರತು ಮಾತ್ರೆಗಳು ಆಹಾರವಾಗಬಾರದು. ಹೀಗಾಗಿ ಗುಣಮಟ್ಟದ ಆಹಾರಧಾನ್ಯಗಳ ಉತ್ಪಾದನೆಗೆ ಒತ್ತುಕೊಡುವ ಅಗತ್ಯವಿದೆ’ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಸಿ.ವಾಸುದೇವಪ್ಪ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚು ಪ್ರಗತಿ ಕಂಡು ಬರುತ್ತಿಲ್ಲ. ಶೇಕಡ 90ರಷ್ಟು ಸ್ಟಾರ್ಟ್‌ಅಪ್‌ ವಿಫಲವಾಗಿವೆ. ಕೇವಲ 7ರಷ್ಟು ಸ್ಟಾರ್ಟ್‌ಅಪ್‌ ಯಶ ಕಂಡಿವೆ. ಭಾವನಾತ್ಮಕ ಚಿಂತನೆ ಅಗತ್ಯವಿಲ್ಲ. ಪ್ರಾಯೋಗಿಕ ಚಿಂತನೆಗೆ ಪ್ರಾಮುಖ್ಯ ಕೊಡಬೇಕಾಗಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಿಂದ ಹೊರ ಬಂದರೆ ಸಾಲದು. ಮಾಹಿತಿ ಸಂವಹನ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕು. ಇಲ್ಲದ ಹೋದರೆ ಸ್ಪರ್ಧಾತ್ಮಕ ಯುಗದಿಂದ ಹಿಂದೆ ಉಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆ ಜಾರಿಗೊಳಿಸಿದೆ. ಕಡಿಮೆ ಇಂಧನ, ನೀರು ಬಳಸಿ ಕೃಷಿ ಉತ್ಪಾದನೆ ಹೆಚ್ಚಿಸಬೇಕಿದೆ. ಪ್ರಸ್ತುತ ಪ್ರತಿಯೊಬ್ಬರಿಗೆ ನಾಲ್ಕು ಲೀಟರ್‌ ಹಾಲು ಲಭ್ಯವಿದೆ. 2027ಕ್ಕೆ ಇನ್ನೊಂದು ಲೀಟರ್‌ ಹೆಚ್ಚುವರಿಯಾಗಿ ಉತ್ಪಾದನೆ ಮಾಡಬೇಕು. ಇಲ್ಲದಿದ್ದರೆ ಕೊರತೆ ಕಂಡು ಬರಲಿದೆ’ ಎಂದು ವಿಶ್ಲೇಷಿಸಿದರು.

‘ದೇಶದಲ್ಲಿ ವಾರ್ಷಿಕ 95 ಕೋಟಿ ಮೌಲ್ಯದಷ್ಟು ಆಹಾರ ವ್ಯರ್ಥವಾಗುತ್ತಿದೆ. ಆಹಾರ ವ್ಯರ್ಥ ಮಾಡುವುದೆಂದರೆ ಕೇವಲ ಬಿಸಾಡುವುದಲ್ಲ. ಬೇಸಾಯ, ಸಾಗಣೆ, ಸಂಗ್ರಹಣೆ, ಸ್ಥಳಾಂತರದ ಸಮಯದಲ್ಲಿ ಆಗುವ ವ್ಯರ್ಥವನ್ನೂ ತಡೆಯಬೇಕಾಗಿದೆ. ಜನಸಂಖ್ಯಾ ಸ್ಪೋಟದಿಂದ ಆಹಾರಧಾನ್ಯಗಳ ಬೇಡಿಕೆಯೂ ಅಧಿಕವಾಗಿದೆ. ಹೀಗಾಗಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.

‘ಆಹಾರ ಉತ್ಪಾದನೆಯಲ್ಲಿ ವಿಶ್ವದಲ್ಲಿ 118ನೇ ಸ್ಥಾನದಲ್ಲಿದ್ದ ಭಾರತ ಇದೀಗ 98ನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರ ಕಡಿಮೆಯಾಗಿದೆ. 2047ರ ವೇಳೆಗೆ ದೇಶದ ಜನಸಂಖ್ಯೆ 1.65 ಶತಕೋಟಿ ಆಗಲಿದೆ. ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ವಿಜ್ಞಾನಿಗಳು ಗುಣಮಟ್ಟ ಹಾಗೂ ಕೃಷಿ ಉತ್ಪನ್ನಗಳ ಪ್ರಮಾಣ ಹೆಚ್ಚಿಸುವ ದಿಸೆಯಲ್ಲಿ ಚಿಂತನೆ ಮಾಡಬೇಕಿದೆ’ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ.ಡಿ, ಬಸನಗೌಡ ಬ್ಯಾಗವಾಟ, ಕುಲಸಚಿವ ಎಂ.ವೀರನಗೌಡ, ಕೃಷಿ ವಿವಿಯ ವಿವಿಧ ವಿಭಾಗಗಳ ಅಧಿಕಾರಿಗಳಾದ ಎಂ.ಜಿ ಪಾಟೀಲ, ಬಿ.ಕೆ ದೇಸಾಯಿ, ಎಸ್.ಬಿ ಗೌಡಪ್ಪ, ಗುರುರಾಜ ಸುಂಕದ, ಸತ್ಯನಾರಾಯಣರಾವ್, ಎಂ ನೇಮಿಚಂದ್ರಪ್ಪ, ಎಂ.ಎಂ ಧನೋಜಿ, ಪಿ.ಎಚ್ ಕುಚನೂರು, ಜೆ ವಿಶ್ವನಾಥ, ಜಿ.ರವಿಶಂಕರ, ಮಚೇಂದ್ರನಾಥ ಎಸ್, ಜಾಗೃತಿ.ಬಿ ದೇಶಮಾನೆ, ರವಿ ಮೇಸ್ತಾ, ಪ್ರಮೋದ ಕಟ್ಟಿ, ಕೊಟ್ರೇಶಪ್ಪ, ಸುನೀಲ್ ಇದ್ದರು.

...... 

ಕೆಲಸ ಅಥವಾ ಅಮಾನತು ಆಯ್ಕೆ ನಿಮಗೆ ಬಿಟ್ಟಿದ್ದು...

ರಾಯಚೂರು: ‘ವಿಜಯನಗರ ಜಿಲ್ಲೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣವಾದ ದಿನದಿಂದಲೂ ಸ್ವಚ್ಛತೆ ಮಾಡಿರಲಿಲ್ಲ. ಅಲ್ಲಿಯ ಅಧಿಕಾರಿಗಳಿಗೆ ನೀರಿನ ಟ್ಯಾಂಕ್‌ ಸ್ವಚ್ಛ ಮಾಡಲು 24 ಗಂಟೆಗಳ ಸಮಯ ನೀಡಿದೆ. ಕೆಲಸ ಅಥವಾ ಅಮಾನತು ನೀವೇ ಆಯ್ಕೆ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಅದರ ಪರಿಣಾಮ ಜಿಲ್ಲೆಯ 7 ಸಾವಿರ ಓವರ್‌ ಹೆಡ್‌ ಟ್ಯಾಂಕ್‌ಗಳು ಮೂರುದಿನಗಳಲ್ಲಿ ಸ್ವಚ್ಛವಾದವು’ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಹೇಳಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ಸರ್ಕಾರ ನಮಗೆ ಸಂಬಳ ಕೊಡುವುದೇ ಕೆಲಸ ಮಾಡಲು. ಅದನ್ನೂ ಸರಿಯಾಗಿ ಮಾಡದಿದ್ದರೆ ಹೇಗೆ? ಟ್ಯಾಂಕ್‌ ತೊಳೆಯದ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಇತ್ತು. ಈಗ ಅದು ತೊಲಗಿದೆ’ ಎಂದು ತಿಳಿಸಿದರು.

‘ಹಿಂದೆ ರಾಯಚೂರಲ್ಲಿ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ವಾಸವಾಗಿದ್ದಾಗ ಹಾಸ್ಟೆಲ್‌ನಲ್ಲೂ ಇಂತಹದ್ದೇ ಸಮಸ್ಯೆ ಇತ್ತು. ಶೌಚಾಲಯದ ನೀರು ಸಹ ಹರಿದು ಹೋಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಯಾಗಿ ಬಂದ ನಂತರ ವಿಜಯನಗರದ ಹಾಸ್ಟೆಲ್‌ಗಳಲ್ಲೂ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಿರುವೆ’ ಎಂದು ಹೇಳಿದರು.

‘ಹಿಂದೆ ರಾಯಚೂರಲ್ಲಿ ರೈತರಿಗೆ ಬಾಯೊ ಕೆಮಿಕಲ್‌ ಹೆಸರಲ್ಲಿ ಮೋಸ ಮಾಡಲಾಗುತ್ತಿತ್ತು. ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ವ್ಯವಹಾರ ನಡೆಸುವ ದೊಡ್ಡ ಜಾಲವೇ ಇಲ್ಲಿತ್ತು. ನಾನು ಕೃಷಿ ವಿಶ್ವವಿದ್ಯಾಲಯದ ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಕಲಿ ಎನ್ನುವುದು ಗೊತ್ತಾಯಿತು’ ಎಂದರು.

‘ಕೃಷಿ ವಿಜ್ಙಾನಿಗಳು ಎಚ್ಚರಿಕೆ ವಹಿಸಿದರೆ ಕೆಲ ಕಳ್ಳ ಕ್ರಿಮಿನಾಶಕ ಕಂಪನಿಗಳಿಂದ ರೈತರಿಗೆ ಆಗುವ ಮೋಸ ತಡೆಯಬಹುದು‘ ಎಂದು ಹೇಳಿದರು.

’ಭಾರತ ಕಡಿಮೆ ಭೂಪ್ರದೇಶ ಹೊಂದಿದರೂ ಅನ್ಯ ದೇಶಗಳಿಗೆ ಅನ್ನ ನೀಡುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದ ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನಿಗಳನ್ನು ರೂಪಿಸುವ ಶಿಕ್ಷಕರು’ ಎಂದು ಹೇಳಿದರು.

‘ಕಠಿಣ ಪರಿಶ್ರಮವೇ ನಮ್ಮನ್ನು ಯಶಸ್ಸಿನ ಮಾರ್ಗದತ್ತ ಕೊಂಡೊಯ್ಯುತ್ತದೆ. ವಾಮ ಮಾರ್ಗ ಯಾವ ಫಲವನ್ನೂ ಕೊಡುವುದಿಲ್ಲ. ವಿಶ್ವವಿದ್ಯಾಲಯಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಹ ಪರಿಶ್ರಮದ ಮೂಲಕ ಯಶ ಸಾಧಿಸಲು ಮುಂದಾಗಬೇಕು. ಬೇರೆಯವರ ಕಾಲೆಳೆಯುವ ಪ್ರವೃತ್ತಿ ಕೊನೆಗಾಣಿಸಬೇಕು’ ಎಂದು ತಿಳಿಸಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾತನಾಡಿದರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾತನಾಡಿದರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT