ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಲ್‌ಆರ್‌ ಪಡೆಯಲು ಜನರಿಂದ ಹರಸಾಹಸ!

ಕಂಪ್ಯೂಟರ್‌ ಪರೀಕ್ಷೆ ತೆಗೆದುಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಬರುವ ಅನಿವಾರ್ಯತೆ
Last Updated 27 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಜನರು ಕಲಿಕಾ ಅನುಜ್ಞಾ ಪತ್ರ (ಎಲ್‌ಎಲ್‌ಆರ್‌) ಹಾಗೂ ಚಾಲನಾ ಪರವಾನಿಗೆ (ಡಿಎಲ್‌) ಪಡೆಯುವುದಕ್ಕೆ ಜಿಲ್ಲಾ ಕೇಂದ್ರಕ್ಕೆ ಬರಬೇಕಿದೆ.

ಈ ಮೊದಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿದ್ದರು. ತಾಲ್ಲೂಕಿನ ಜನರು ಜಿಲ್ಲಾ ಕೇಂದ್ರಕ್ಕೆ ಬರುವ ಅಗತ್ಯ ಇರುತ್ತಿರಲಿಲ್ಲ. ಆದರೆ, ಕೆಲವು ತಿಂಗಳುಗಳಿಂದ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಎಲ್‌ಎಲ್‌ಆರ್‌ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಸಾಫ್ಟ್‌ವೇರ್‌ ಅಭಿವೃದ್ಧಿ ಅಳವಡಿಸಲಾಗಿದೆ. ಇದರಿಂದ ಪ್ರತಿ ಕೆಲಸಕ್ಕೂ ಜಿಲ್ಲಾ ಕೇಂದ್ರದಲ್ಲಿರುವ ಆರ್‌ಟಿಒ ಕಚೇರಿಗೆ ಬರುವುದು ಅನಿವಾರ್ಯವಾಗಿ ಪರಿಣಮಿಸಿದೆ.

ವಾಹನ ಚಾಲನೆಗೆ ಸಂಬಂಧಿಸಿದ ಮಾಹಿತಿ ನೋಂದಾಯಿಸಲು ಹಾಗೂ ಆನ್‌ಲೈನ್‌ ಅರ್ಜಿ ಸಲ್ಲಿಸಲು ‘ಸಾರಥಿ’ ಸಾಫ್ಟ್‌ವೇರ್‌ ಬಳಕೆ ಮಾಡಬೇಕು. ವಾಹನಕ್ಕೆ ಸಂಬಂಧಿಸಿದ ಮಾಹಿತಿ ದಾಖಲಿಸಲು ‘ವಾಹನ’ ಸಾಫ್ಟ್‌ವೇರ್‌ ಬಳಕೆ ಮಾಡಬೇಕಿದೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಬಳಿಕವಷ್ಟೇ ಪರೀಕ್ಷೆಗೆ ಹಾಜರಾಗುವ ದಿನ ಹಾಗೂ ಸಮಯವನ್ನು ಆನ್‌ಲೈನ್‌ ಮೂಲಕ ಮೊಬೈಲ್‌ಗೆ ಸಂದೇಶ ಬರುತ್ತದೆ.

ಈ ಮೊದಲು ದಿನಕ್ಕೆ ಅಪರಿಮಿತವಾಗಿ ನೀಡುತ್ತಿದ್ದ ಎಲ್‌ಎಲ್‌ಆರ್‌ ಹಾಗೂ ಡಿಎಲ್‌ ಸಂಖ್ಯೆಗಳಿಗೆ ಮಿತಿ ಹೇರಲಾಗಿದೆ. ಇದರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿರುವ 28 ವಾಹನ ಚಾಲನಾ ಕೇಂದ್ರಗಳಿಂದ ಪ್ರತಿನಿತ್ಯ ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಕೆಯಾಗುತ್ತಿದೆ. ಆದರೆ, ಚಾಲನಾ ಪರವಾನಿಗೆ ಮೊದಲಿನಂತೆ ಬೇಗನೆ ದೊರೆಯುತ್ತಿಲ್ಲ. ಇದರಿಂದ ಪ್ರತಿನಿತ್ಯ ಆರ್‌ಟಿಒ ಕಚೇರಿಗಳಿಗೆ ಜನರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸದಾಗಿ ಅಭಿವೃದ್ಧಿ ಮಾಡಿರುವ ಸಾಫ್ಟ್‌ವೇರ್‌ ನಿರ್ವಹಣೆಯು ಆರ್‌ಟಿಒ ಕಚೇರಿಯ ಸಿಬ್ಬಂದಿಗೂ ಕಬ್ಬಿಣದ ಕಡಲೆಯಾಗಿದೆ. ಎಲ್‌ಎಲ್‌ಆರ್‌ ಮತ್ತು ಡಿಎಲ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಸಾಫ್ಟ್‌ವೇರ್‌ ನಿರ್ವಹಣೆಯನ್ನು ಸಿಬ್ಬಂದಿ ರೂಢಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸರಾಗವಾಗಿ ಡಿಎಲ್‌ ಹಾಗೂ ಎಲ್‌ಎಲ್‌ಆರ್‌ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಂಪ್ಯೂಟರ್‌ ಕಲಿತರಿಗೆ ತುಂಬಾ ಸರಳವಾಗಿ ಅರ್ಥವಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುವುದಕ್ಕೆ ಸಧ್ಯಕ್ಕೆ ಅವಕಾಶವಿಲ್ಲ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಅವರು ತಿಳಿಸಿದರು.

‘ಬೈಕ್‌ ಖರೀದಿ ಮಾಡಿಕೊಂಡು ತಿಂಗಳಾದರೂ ಎಲ್‌ಎಲ್‌ಆರ್‌ ಸಿಗುತ್ತಿಲ್ಲ. ಸಿಂಧನೂರಿನಿಂದ ಮೂರು ಬಾರಿ ಆರ್‌ಟಿಒ ಕಚೇರಿಗೆ ಬಂದು ಹೋಗಿದ್ದೇನೆ. ಮೊಬೈಲ್‌ಗೆ ಸಂದೇಶ ಬಳಿಕ ಪರೀಕ್ಷೆ ಬರಬೇಕು ಎನ್ನುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳು ಮೊದಲು ತಾಲ್ಲೂಕಿಗೆ ಬಂದು, ಪ್ರಮಾಣಪತ್ರಗಳನ್ನು ನೋಡಿ ಪರೀಕ್ಷೆ ತೆಗೆದುಕೊಂಡು ಎಲ್‌ಎಲ್‌ಆರ್‌ ಕೊಡುತ್ತಿದ್ದರು. ಈಗ ಬಹಳ ತಾಪತ್ರಯ ನಿರ್ಮಾಣವಾಗಿದೆ’ ಎಂದು ಸಿಂಧನೂರಿನ ಗಾಂಧಿನಗರ ನಿವಾಸಿ ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT