ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯೇ ಕುತೂಹಲ

Published 21 ಮಾರ್ಚ್ 2024, 6:30 IST
Last Updated 21 ಮಾರ್ಚ್ 2024, 6:30 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಗೊಂಡರೂ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿಲ್ಲ. ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯೇ ಕುತುಹೂಲ ಮೂಡಿಸಿದೆ.

ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಬದಲು ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ದೊರೆಯಲಿದೆ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ. ಬಿಜೆಪಿಯ ಟಿಕೆಟ್‌ ಸಿಗದಿದ್ದರೆ ರಾಜಾ ಅಮರೇಶ್ವರ ನಾಯಕ ಕಾಂಗ್ರೆಸ್‌ ಮೊರೆ ಹೋದರೂ ಅಚ್ಚರಿ ಇಲ್ಲ ಎಂದು ಉಭಯ ಪಕ್ಷಗಳ ನಾಯಕರು ಆಡಿಕೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ಬಿ.ವಿ.ನಾಯಕ ಹಾಗೂ ರಾಜಾ ಅಮರೇಶ್ವರ ನಾಯಕ ಎರಡೇ ಹೆಸರುಗಳು ಕೇಳಿ ಬರುತ್ತಿವೆ. ಒಂದು ವರ್ಷದಿಂದ ತಣ್ಣಗೆ ಇದ್ದ ರಾಜಾ ಅಮರೇಶ್ವರ ನಾಯಕ ಇದೀಗ ಪಕ್ಷದ ವೇದಿಕೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಐದು ವರ್ಷ ಉತ್ತಮವಾಗಿ ಕೆಲಸ ಮಾಡಿರುವ ಕಾರಣ ಪಕ್ಷದ ಟಿಕೆಟ್‌ ನನಗೆ ಸಿಗಲಿದೆ’ ಎನ್ನುವ ವಿಶ್ವಾಸದಲ್ಲಿ ರಾಜಾ ಅಮರೇಶ್ವರ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಮಾತ್ರ ಬೇರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುವುದು ಸೂಕ್ತ ಎಂದು ಪಕ್ಷದ ಮುಖಂಡರಿಗೆ ಸಲಹೆ ಕೊಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕ ಇದೆ. ಕಾಂಗ್ರೆಸ್‌ನಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಹೆಸರು ಮುಂಚೂಣಿಯಲ್ಲಿದೆ. ಕುಮಾರ ನಾಯಕ ಅವರು ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಂಪರ್ಕಿಸಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ನಗರದ ಹೋಟೆಲೊಂದರಲ್ಲಿ ರೂಮ್‌ ಮಾಡಿಕೊಂಡು ರಾಜಕೀಯ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಆಪ್ತ ವಲಯದವರೂ ಸಹ ಚುನಾವಣೆಯಲ್ಲಿ ಸಹಾಯ ಮಾಡುವ ಭರವಸೆ ನೀಡಿ ಜಿ.ಕುಮಾರ ನಾಯಕ ಅವರನ್ನು ಹುರಿದುಂಬಿಸುತ್ತಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ ಅವರ ಅಳಿಯ ರವಿ ಪಾಟೀಲ ಸಹ ತಾನು ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವೆ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕ್ರಮ ಹಾಗೂ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಓಡಾಡುತ್ತಿದ್ದಾರೆ.

ನಂತರದ ಸ್ಥಾನದಲ್ಲಿ ಬಿ.ವಿ.ನಾಯಕ ಹೆಸರೂ ಕೇಳಿ ಬರುತ್ತಿದೆ. ಬಿಜೆಪಿಯ ಟಿಕೆಟ್‌ ಸಿಗದಿದ್ದರೆ ಇವರು ಕಾಂಗ್ರೆಸ್‌ಗೆ ಬರಬಹುದು ಎನ್ನುವ ಲೆಕ್ಕಾಚಾರ ಇದೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ, ರಾಯಪ್ಪ ನಾಯಕ, ದೇವಣ್ಣ ನಾಯಕ ಅವರ ಹೆಸರುಗಳೂ ಚರ್ಚೆಯಲ್ಲಿವೆ. ಸುರಪುರ ಕ್ಷೇತ್ರದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಅಂತಿಮವಾಗಿತ್ತು. ಆದರೆ, ಅವರ ಅಕಾಲಿಕ ನಿಧನದ ಕಾರಣ ಚುನಾವಣಾ ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಇದರ ನಡುವೆಯೇ ಕಲ್ಯಾಣ ಕರ್ನಾಟಕದಲ್ಲಿ ಒಬ್ಬ ಮಹಿಳೆಗೂ ಟಿಕೆಟ್‌ ಕೊಟ್ಟಿಲ್ಲ. ರಾಯಚೂರು ಕ್ಷೇತ್ರದ ಟಿಕೆಟ್‌ ಅನ್ನು ಮಹಿಳೆಗೆ ಕೊಡಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ನಾಗವೇಣಿ ಪಾಟೀಲ ಒತ್ತಾಯಿಸಿದ್ದಾರೆ.

ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್‌ನ ದೊಡ್ಡ ಪಡೆಯೇ ಇದೆ. ಬಿಜೆಪಿ ವರಿಷ್ಠರು ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಆಗ್ರಹಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಆಯ್ಕೆ ಸ್ವಲ್ಪ ತಡವಾಗಲಿದೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಪಕ್ಷಗಳ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕೀಯ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಒಂದು ಪಕ್ಷದಲ್ಲಿರುವ ಮುಖಂಡರೇ ಇನ್ನೊಂದು ಪಕ್ಷದಿಂದ ಕಣ್ಣಕ್ಕೆ ಇಳಿದ ನಿದರ್ಶನಗಳು ಅನೇಕ ಇವೆ. ಈ ಬಾರಿ ಒಳ ಹೊಂದಾಣಿಕೆ‌ಯು ರಾಜಕೀಯ ಫಲಿತಾಂಶವನ್ನೇ ಬುಡ ಮೇಲು ಮಾಡುವ ಸ್ಥಿತಿ ಇದೆ. ಹೀಗಾಗಿ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಎಚ್ಚರ ವಹಿಸುತ್ತಿರುವುದು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT