ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಿಗೆಗೆ ಯತ್ನಿಸಿದ ಮಾದಿಗ ಮುಖಂಡರ ಬಂಧನ

ಪ್ರಗತಿ ಪರಿಶೀಲನೆಗಾಗಿ ಆಗಮಿಸಿದ್ದ ಸಚಿವ ಪ್ರಭು ಚವಾಣ್‌
Last Updated 7 ಅಕ್ಟೋಬರ್ 2021, 12:54 IST
ಅಕ್ಷರ ಗಾತ್ರ

ರಾಯಚೂರು: ನ್ಯಾ.ಸದಾಶಿವ ಆಯೋಗದ ವರದಿ ಜಾರಿಯನ್ನು ವಿರೋಧಿಸಿರುವ ಪಶುಸಂಗೋಪನೆ ಸಚಿವ ಪ್ರಭು ಚವಾಣ್‌ ಅವರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದ ವೇಳೆಯಲ್ಲಿ, ಕಚೇರಿ ಆವರಣ ದ್ವಾರದ ಬಳಿ ಮಾದಿಗ ಸಮಾಜದ ಮುಖಂಡರು ಕಾರಿಗೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಿ ಘೋಷಣೆಗಳನ್ನು ಕೂಗಿದ ಪ್ರಸಂಗ ಗುರುವಾರ ನಡೆಯಿತು.

ಕೂಡಲೇ ಪೊಲೀಸರು ಧಾವಿಸಿ ಬಂದು ಮುಖಂಡರನ್ನೆಲ್ಲ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿದ ಸಚಿವರ ವಿರುದ್ಧ ಮುಖಂಡರು ಘೋಷಣೆಗಳನ್ನು ಕೂಗಿದರು. ಸಚಿವರಿಗೆ ಕಪ್ಪು ಮಸಿ ಬಳಿಯುವುದಕ್ಕೂ ತಯಾರಿ ಮಾಡಿಕೊಂಡಿರುವುದು; ಪ್ರತಿಭಟನಾಕಾರರಲ್ಲಿದ್ದ ಕಪ್ಪು ಮಸಿ ಡಬ್ಬಿಯನ್ನು ಪೊಲೀಸರು ವಶಪಡಿಸಿಕೊಂಡಾಗ ಗೊತ್ತಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಮಾದಿಗ ದಂಡೋರ ಸಮಿತಿ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯವರು ಹೋರಾಟ ನಡೆಸುವುದಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರು. ಸಭೆಯಲ್ಲಿ ಭಾಗಿಯಾಗಲು ಸಚಿವರು ಆಗಮಿಸುವಾಗ, ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಕಾರು ನಿಲುಗಡೆ ಮಾಡಿದರು. ಸಚಿವರೊಂದಿಗೆ ಇದ್ದ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ ಅವರು ಪ್ರತಿಭಟನಾಕಾರರ ಜೊತೆ ಸೇರಿ ಸಂಧಾನ ಮಾಡುವುದಕ್ಕೆ ಯತ್ನಿಸಿದರು.

ಪ್ರತಿಭಟನೆ ಮುಂದುವರಿದಿದ್ದರಿಂದ ಸಚಿವರು ಮುಂದೆ ಹೋದರು. ಜಿಲ್ಲಾಧಿಕಾರಿ ಆವರಣದ್ವಾರದ ಬಳಿ ಇದ್ದಕ್ಕಿದ್ದಂತೆ ಕೆಲವು ಮುಖಂಡರು ಧಾವಿಸಿ ಕಾರಿಗೆ ಅಡ್ಡಲಾಗಿ ಓಡಿಬಂದರು. ಮುತ್ತಿಗೆ ಹಾಕುವುದಕ್ಕೆ ಪ್ರಯತ್ನಿಸಿ ಘೋಷಣೆಗಳನ್ನು ಕೂಗಲಾರಂಭಿಸಿದರು.

ಮತ್ತಿಗೆ ಯತ್ನ ಪ್ರಸಂಗದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣ ಹಾಗೂ ಸುತ್ತಮುತ್ತಲೂ ಪೊಲೀಸರು ಮತ್ತಷ್ಟು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದಕ್ಕೆ ಅನುವು ಮಾಡಿದರು. ಸಭೆ ಮುಕ್ತಾಯಗೊಳಿಸಿ ಸಚಿವರು ಹೊರಬಂದಾಗಲೂ ಮುತ್ತಿಗೆ ಹಾಕುವುದಕ್ಕೆ ಮಾದಿಗ ಸಮಾಜದ ಕೆಲವು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನುಗ್ಗಿದ್ದರು. ಕೂಡಲೇ ಇದನ್ನು ಗಮನಿಸಿದ ಪೊಲೀಸರು ವಶಕ್ಕೆ ಪಡೆದರು.

ಸಚಿವರಿದ್ದ ಕಾರನ್ನು ಪರ್ಯಾಯ ಮಾರ್ಗದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಗೆ ಕಳುಹಿಸುವುದಕ್ಕೆ ಪೊಲೀಸರು ವ್ಯವಸ್ಥೆ ಮಾಡಿದರು. ಸಚಿವರು ಯಾದಗಿರಿ ಜಿಲ್ಲೆಯತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT