ಬುಧವಾರ, ಅಕ್ಟೋಬರ್ 16, 2019
21 °C

ರಾಯಚೂರು ರೈಲ್ವೆ ನಿಲ್ದಾಣದೊಳಗೆ ಗಾಂಧೀಜಿ ಸ್ಪರ್ಶ

Published:
Updated:
Prajavani

ರಾಷ್ಟ್ರಪಿತ ಮಹಾತ್ಮಗಾಂಧಿ, ‘ಬಾಂಬೆಯಿಂದ ಮದ್ರಾಸ್‌’ಗೆ ರೈಲಿನಲ್ಲಿ ಸಂಚರಿಸುವಾಗ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಬೋಗಿಯಿಂದ ಕೆಳಗೆ ಬಂದು ಕೆಲಕಾಲ ವಿಶ್ರಾಂತಿ ಪಡೆದು ಪ್ರಯಾಣಿಸಿದ್ದರು. ಈ ಕುರಿತು ‘ಮಹಾತ್ಮ ಗಾಂಧೀಜಿ ಅವರ ಭಾಷಣ, ಬರಹಗಳು’ ಪುಸ್ತಕದಲ್ಲಿ ಅವರೇ ಉಲ್ಲೇಖಿಸಿರುವುದು ಇದೆ.

ಗಾಂಧೀಜಿ ಅವರ ಪಾದಸ್ಪರ್ಶವಾಗಿ 100 ವರ್ಷಗಳಾದ ಸವಿನೆನಪಿಗಾಗಿ 2018 ರಲ್ಲಿ ‘ರಾಯಚೂರು ರೈಲ್ವೆ ನಿಲ್ದಾಣ’ಕ್ಕೆ ದಕ್ಷಿಣ ಮಧ್ಯೆ ರೈಲ್ವೆ ವಲಯದಿಂದ ವಿಶೇಷ ಅನುದಾನ ಕೊಟ್ಟು, ನವೀಕರಣ ಕಾರ್ಯ ಕೈಗೊಳ್ಳಲಾಯಿತು. ಕಳೆದ ವರ್ಷ ಅಕ್ಟೋಬರ್‌ 2 ರಂದು ನಡೆದ ಗಾಂಧಿ ಜಯಂತಿ ಆಕರ್ಷಕವಾಗಿತ್ತು. ಸಿಕಂದರಾಬಾದ್‌ ದಕ್ಷಿಣ ಮಧ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳೆಲ್ಲ ಭಾಗವಹಿಸಿದ್ದರು. ನೂತನ ಉದ್ಯಾನ, ಆಸ್ಪತ್ರೆ, ವಿಶ್ರಾಂತಿಗೃಹ, ಸಿಬ್ಬಂದಿಯ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿದ್ದರು. ನಿಲ್ದಾಣಕ್ಕೆ ಆವರಣ ಗೋಡೆ ನಿರ್ಮಿಸಿ, ಪ್ರತಿಯೊಂದಕ್ಕೂ ಬಣ್ಣ ಬಳಿದು ಅಲಂಕರಿಸಲಾಗಿದೆ.

ತನಿಮಿತ್ತ ರೈಲ್ವೆ ನಿಲ್ದಾಣದ ಪ್ರತಿ ಗೋಡೆಗಳಿಗೂ ಗಾಂಧೀಜಿ ಅವರ ಜೀವನಗಾಥೆ ಹೇಳುವ ಭಾವಚಿತ್ರಗಳನ್ನು ಚಿತ್ರಿಸಲಾಗಿದೆ. ಅವ್ಯವಸ್ಥೆಯ ಆಗರವಾಗಿದ್ದ ರೈಲು ನಿಲ್ದಾಣಕ್ಕೆ ಗಾಂಧಿ ಜಯಂತಿಯಂದು ಹೊಸ ಕಳೆ ಬಂತು. ನೆಲಹಾಸುಗಳನ್ನೆಲ್ಲ ಕಿತ್ತುಹಾಕಿ ಟೈಲ್ಸ್‌ ಅಳವಡಿಸಲಾಗಿದ್ದು, ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದು, ನಿಲ್ದಾಣದೊಳಗೆ ಗಾಂಧೀಜಿ ಅವರ ಪಾದಸ್ಪರ್ಶ.

1917 ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಅವರು ‘ಮದ್ರಾಸ್‌ ಮೇಲ್‌’ ರೈಲಿನ 3ನೇ ಕ್ಲಾಸ್‌ ಬೋಗಿಯಲ್ಲಿ ಕುಳಿತು ಪ್ರಯಾಣಿಸಿದ್ದರು. ಬಾಂಬೆಯಿಂದ ಮದ್ರಾಸ್‌ ತಲುಪಲು ಎರಡು ರಾತ್ರಿಗಳನ್ನು ರೈಲಿನಲ್ಲಿಯೆ ಕಳೆಯಬೇಕಿತ್ತು. 22 ಪ್ರಯಾಣಿಕರು ಕುಳಿತುಕೊಳ್ಳಲು ಬೋಗಿಯಲ್ಲಿ ಆಸನಗಳಿದ್ದವು. ಆದರೆ, ಪುಣೆಯಲ್ಲಿ ಪ್ರಯಾಣಿಕರ ಸಂಖ್ಯೆ 35 ಕ್ಕೆ ಏರಿಕೆಯಾಯಿತು. ಬೋಗಿಯಲ್ಲಿ ಕಾಲು ಚಾಚುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ‘ರೈಲು ರಾಯಚೂರಿಗೆ ತಲುಪುತ್ತಿದ್ದಂತೆ ಬೋಗಿಯೊಳಗಿನ ಒತ್ತಡ ಸಹಿಸಲು ಅಸಾಧ್ಯವಾಯಿತು (After reaching Raichur Pressure became vulnerable)’ ಎಂದು ಗಾಂಧೀಜಿ ಬರೆದಿದ್ದಾರೆ.

‘ಮದ್ರಾಸ್‌ ಮಾರ್ಗಮಧ್ಯೆ ರಾಯಚೂರು, ದೌಂಡ್‌, ಸೋನೆಪುರ, ಚಕ್ರಾಧರಪುರ, ಪುರುಲಿಸ್‌, ಅಸಾನ್ಸೊಲ್‌ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಕೆಳಗೆ ಹೋಗಿ ವಿಶ್ರಾಂತಿ ಪಡೆದಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ. ಗಾಂಧೀಜಿ ಅವರು ಉದ್ದೇಶಪೂರ್ವಕವಾಗಿಯೆ 3ನೇ ಕ್ಲಾಸ್‌ ಬೋಗಿಯಲ್ಲಿ ಕುಳಿತು ಪ್ರಯಾಣಿಸಿದ್ದರು. ತಳಮಟ್ಟದ ಜನ ಜೀವನವನ್ನು ಹತ್ತಿರದಿಂದ ನೋಡಬೇಕು ಎನ್ನುವ ಉದ್ದೇಶ ಅವರಲ್ಲಿತ್ತು. ಆಸನಕ್ಕಾಗಿ ಪ್ರಯಾಣಿಕರು ಕಚ್ಚಾಡುವುದು, ರೈಲ್ವೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವುದು, ಪ್ರಯಾಣಿಕರಿಗೆ ಅಧಿಕಾರಿಗಳು ದಂಡ ವಿಧಿಸುವುದು, ಬೋಗಿಯೊಳಗೆ ಎಸೆಯುವ ತ್ಯಾಜ್ಯವನ್ನು ಎತ್ತಿ ಹಾಕದೆ ಇರುವುದು ಎಲ್ಲ ಸಂಗತಿಗಳನ್ನು ‘ರೈಲು ಪ್ರಯಾಣದ ಅನುಭವ’ ಎನ್ನುವ ಶೀರ್ಷಿಕೆಯಡಿ ಬರೆದುಕೊಂಡಿದ್ದಾರೆ. 

ಗಾಂಧೀಜಿ ಭಾವಸ್ಪರ್ಶ
ರಾಯಚೂರು ರೈಲು ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರೆಲ್ಲ ಮಹಾತ್ಮ ಗಾಂಧೀಜಿ ಅವರ ಬಿಂಬಗಳನ್ನು ಭಾವದಲ್ಲಿ ಧರಿಸುತ್ತಾರೆ. ವಿಶಾಲವಾದ ಗೋಡೆಯುದ್ದಕ್ಕೂ ಕಲಾವಿದರು ಬಿಡಿಸಿದ ಚಿತ್ರಗಳು ಚಿತ್ತಾಕರ್ಷಕವಾಗಿವೆ.

ನಿಲ್ದಾಣದಲ್ಲಿ ಗಾಂಧಿ ಜಯಂತಿ
ಅಕ್ಟೋಬರ್‌ 2 ರಂದು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗುಂತಕಲ್‌ ರೈಲ್ವೆ ವಿಭಾಗದ ಸಹಾಯಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸೂರ್ಯನಾರಾಯಣ ಅವರು ಗಾಂಧೀಜಿ ಪುತ್ಥಳಿಗೆ ಪೂಜೆ ಸಲ್ಲಿಸುವರು. ಸಸಿಗಳನ್ನು ನೆಡಲಾಗುವುದು ಹಾಗೂ ಎಲ್ಲರಿಗೂ ಶುಚಿತ್ವದ ಪ್ರಮಾಣವಚನ ಬೋಧಿಸಲಾಗುವುದು. ನಿಲ್ದಾಣದೊಳಗೆ ಒಂದು ಗಂಟೆ ‘ತೊಗಲು ಬೊಂಬೆಯಾಟ’ದ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಅರಿವು ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸ್ಟೇಷನ್‌ ಮಾಸ್ಟರ್‌ ಎಸ್‌.ಕೆ. ಸರ್ಕಾರ ತಿಳಿಸಿದರು.

Post Comments (+)