ಶುಕ್ರವಾರ, ಜನವರಿ 24, 2020
28 °C
ಒಂದು ಕೆಜಿ ಚವಳೆಕಾಯಿ ₹120, ಅವರೆಕಾಯಿ ₹90

ಮಕರ ಸಂಕ್ರಾಂತಿ: ತರಕಾರಿ ದರ ದ್ವಿಗುಣ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಾಗೂ ರೈತ ಮಾರುಕಟ್ಟೆಯಲ್ಲಿ ಮಂಗಳವಾರ ನಸುಕಿನ ನಾಲ್ಕು ಗಂಟೆಯಿಂದ ಮಧ್ಯಾಹ್ನದವರೆಗೂ ತರಹೇವಾರಿ ತರಕಾರಿ ಮತ್ತು ಸೊಪ್ಪುಗಳ ವಹಿವಾಟು ಭರಾಟೆ ಜೋರಾಗಿತ್ತು.

ತರಕಾರಿ ಮೂಟೆಗಳನ್ನು ಸಾಗಿಸುವ ಟಂಟಂ, ಆಟೋಗಳು, ತಳ್ಳುಬಂಡಿಗಳು, ಜೀಪ್‌ಗಳ ದಟ್ಟಣೆ ವಿಪರೀತವಾಗಿತ್ತು. ತಾಜಾ ತರಕಾರಿಗಳನ್ನು ಖರೀದಿಸಲು ಬೆಳಗಿನ ಜಾವ 5 ಗಂಟೆಯಿಂದಲೇ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು. ಮಕರ ಸಂಕ್ರಮಣ ಹಬ್ಬದ ಮುನ್ನಾದಿನ ಬೋಗಿ ಆಚರಣೆ ದಿನವಾದ ಮಂಗಳವಾರ ತರಕಾರಿ ದರಗಳೆಲ್ಲವೂ ಗಗನಮುಖಿಯಾಗಿದ್ದವು.

ಸಂಕ್ರಮಣ ದಿನ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಇದರಿಂದ ದರಗಳೆಲ್ಲ ಏರಿಕೆಯಾಗುವುದು ನಿರೀಕ್ಷಿತ ಎಂಬುದನ್ನು ಅರಿತಿದ್ದ ಜನರು, ಚೌಕಾಸಿಯಿಲ್ಲದೆ ಖರೀದಿಸುತ್ತಿರುವುದು ಕಂಡುಬಂತು. ಎರಡು ದಿನಗಳ ಹಿಂದೆ ಪ್ರತಿ ಕೆಜಿಗೆ ₹60 ಕ್ಕೆ ಮಾರಾಟವಾಗುತ್ತಿದ್ದ ಚವಳೇಕಾಯಿ ದರ ದಿಢೀರ್‌ ₹120 ಕ್ಕೆ ಏರಿಕೆಯಾಗಿತ್ತು. ಎಳೆ ಚವಳೇಕಾಯಿ ದರ ಕೆಜಿಗೆ ₹160 ರಷ್ಟಿತ್ತು.

ಅವರೇಕಾಯಿ, ಗಜ್ಜರಿ, ಬದನೇಕಾಯಿ, ಹಿರೇಕಾಯಿಗಳ ದರವು ತಲಾ ಪ್ರತಿ ಕೆಜಿಗೆ ₹80 ರಿಂದ ₹100 ಕ್ಕೆ ಮಾರಾಟವಾದವು. ದಪ್ಪಮೆಣಸು, ಹೂಕೋಸು, ಎಲೆಕೋಸು, ಬೆಂಡೆಕಾಯಿ ತಲಾ ಪ್ರತಿ ಕೆಜಿಗೆ ₹80 ಕ್ಕೆ ಏರಿಕೆಯಾಗಿತ್ತು. ಎರಡು ದಿನಗಳ ಹಿಂದೆ ಇದ್ದ ತರಕಾರಿ ದರಗಳೆಲ್ಲವೂ ದುಪ್ಪಟ್ಟಾಗಿದ್ದವು. ಮಾರುಕಟ್ಟೆಯಲ್ಲಿ ಖರೀದಿಸುವವರ ದಟ್ಟಣೆ ಏರ್ಪಟ್ಟಿದ್ದರಿಂದ ವ್ಯಾಪಾರಿಗಳು, ಚೌಕಾಸಿಗೆ ನಿಂತಿದ್ದ ಗ್ರಾಹಕರತ್ತ ಮುಖ ಕೂಡಾ ಎತ್ತಿ ನೋಡದ ಸ್ಥಿತಿ ಇತ್ತು!

ಸೊಪ್ಪುಗಳು, ಟೊಮೆಟೊ, ಆಲೂಗಡ್ಡೆ ದರಗಳು ಮಾತ್ರ ಎಂದಿನಂತಿದ್ದವು. ಆಲೂಗಡ್ಡೆ ಕೆಜಿಗೆ ₹30. ಟೊಮೆಟೊ ದರ ಮಾತ್ರ ಸ್ವಲ್ಪವೂ ಏರಿಕೆಯಾಗಿರಲಿಲ್ಲ; ₹10 ಕ್ಕೆ ಕೆಜಿ ಇದ್ದುದರಿಂದ ಜನರು ಮುಗಿಬಿದ್ದು ಚೀಲ ತುಂಬಿಕೊಂಡರು. ಗ್ರಾಮೀಣ ಭಾಗದಿಂದ ಬಂದಿದ್ದ ರೈತ ಮಹಿಳೆಯರು ಮಾರಾಟ ಮಾಡುತ್ತಿದ್ದ ಮೆಂತೆ, ಕೊತ್ತಂಬರಿ, ರಾಜಗಿರಿ, ಸಪ್ಪನಪಲ್ಲೆ, ಪುಂಡಿಪಲ್ಲೆ, ಪಾಲಕ ಸೊಪ್ಪಿನ ಪಲ್ಲೆ ಕಟ್ಟುಗಳ ದರ ತುಂಬಾ ಅಗ್ಗವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು