ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲಾರ್ ಪದ್ಧತಿಯಿಂದ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆ

Published 10 ಮಾರ್ಚ್ 2024, 15:51 IST
Last Updated 10 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆ ಸೇರಿದಂತೆ ರೈತರ ಶ್ರೇಯೋಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ. ಸಿಂಧನೂರು ಕ್ಷೇತ್ರದಲ್ಲಿಯೂ ಕೃಷಿ, ಆರೋಗ್ಯ, ಶಿಕ್ಷಣದ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವೆ

ಹಂಪನಗೌಡ ಬಾದರ್ಲಿ, ಶಾಸಕರು


ಸಿಂಧನೂರು: ರಾಜ್ಯ ಸರ್ಕಾರವು ರೈತರ ಪಂಪ್‍ಸೆಟ್‌ಗೆ ವಿದ್ಯುತ್ ಕೊರತೆಯಾಗಬಾರದು ಎನ್ನು ಉದ್ದೇಶದಿಂದ ಸೋಲಾರ್ ಪದ್ಧತಿಯ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಸುವ ಯೋಜನೆ ರೂಪಿಸಿದ್ದು, ವಿದ್ಯುತ್ ದರದಲ್ಲಿ ಶೇ.80 ರಷ್ಟು ರಿಯಾಯಿತಿ ನೀಡುವ ಉದ್ದೇಶ ಹೊಂದಿದೆ. ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ತಾಲ್ಲೂಕಿನ ಉಪ್ಪಳ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪ್ಪಳ ಗ್ರಾಮದ ಕಾಲುವೆ ನೀರು ಮತ್ತು ವಿದ್ಯುತ್ ಸಮಸ್ಯೆ ನಿವಾರಣೆಗೆ ಸಾಧ್ಯವಾದಷ್ಟು ತೊಂದರೆಯಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ನೀರಿನ ಕೊರತೆ ನೀಗಿಸಲು ಎರಡು ದಿನದಲ್ಲಿ ಕೊಳವೆ ಭಾವಿ ತೋಡಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಮ್ಮ ಅವರಿಗೆ ಸೂಚನೆ ನೀಡಿದರು.

ನವಲಿ ಜಲಾಶಯಕ್ಕೆ ಕಾಯಕಲ್ಪ: ಈ ಭಾಗದ ರೈತರಿಗೆ 6.30 ಲಕ್ಷ ಎಕರೆಗೆ ನೀರೊದಗಿಸಲು 30 ಟಿಎಂಸಿ ನೀರನ್ನು ಸಂಗ್ರಹಿಸುವ ನವಲಿ ಜಲಾಶಯ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಗಿದ್ದು, ಇನ್ನು ಎರಡು ತಿಂಗಳಲ್ಲಿ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಯೋಜನೆಗೆ ಕಾಯಕಲ್ಪ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ಅನುದಾನ ನೀಡಿದ್ದು, ಅಕ್ಷರ ಆವಿಸ್ಕಾರ ಯೋಜನೆಯಲ್ಲಿ ಶಾಲಾ ಕಟ್ಟಡ, ಪೀಠೋಪಕರಣ, ಸ್ಮಾರ್ಟ್‍ಕ್ಲಾಸ್ ಸೌಕರ್ಯ ಒದಗಿಸಲು 750 ಕೋಟಿ ಕಾಯ್ದಿಡಲಾಗಿದೆ. ಅದರಲ್ಲಿ ಸಿಂಧನೂರು ತಾಲ್ಲೂಕಿನ 9 ಪ್ರೌಢಶಾಲೆಗಳ ಕಟ್ಟಡಗಳನ್ನು ನಿರ್ಮಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ರಾಜಕೀಯ ಬೇಡ: ಗ್ರಾಮದ ಪ್ರಗತಿಯ ದೃಷ್ಠಿಯಿಂದ ರಾಜಕೀಯ ಭಿನ್ನಾಭಿಪ್ರಾಯ ಮರೆತು ಕುಡಿಯುವ ನೀರು, ರಸ್ತೆ, ಚರಂಡಿ, ಹೊಲಗಳಿಗೆ ನೀರಿನ ಸೌಕರ್ಯ ಇಂತಹ ಹತ್ತಾರು ಕೆಲಸಗಳನ್ನು ಗ್ರಾಮದ ಪ್ರಮುಖರೆಲ್ಲ ಒಗ್ಗೂಡಿ ಮಾಡಿಕೊಳ್ಳಬೇಕು. ಹಿರಿಯರ ಸಮಿತಿಯನ್ನು ರಚಿಸಿ ಗ್ರಾಮಾಭಿವೃದ್ಧಿಯ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದಲ್ಲಿ ಹತ್ತಾರು ವರ್ಷಗಳ ಹಿಂದಿನಂತೆ ಪ್ರೀತಿ, ವಿಶ್ವಾಸ ಇಟ್ಟುಕೊಂಡು ಸಹಬಾಳ್ವೆ ಮಾಡುವ ಬದ್ಧತೆ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಸರು ಹಾಕಿಕೊಳ್ಳಬೇಡಿ, ನನಗೂ ಸಿಡಿಸಬೇಡಿ; ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬಿಡುಗಡೆಯಾದ ₹4 ಲಕ್ಷ ಮತ್ತು ದರ್ಗಾಕ್ಕೆ ಬಿಡುಗಡೆಯಾದ ₹2 ಲಕ್ಷ ಹಣವನ್ನು ಗುತ್ತಿಗೆದಾರರೊಬ್ಬರು ಮಂಗಮಾಯ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಅವರನ್ನು ತಕ್ಷಣ ಕರೆದು ದೇವರ ಹಣ ಕೊಡಿಸುವುದಾಗಿ ಭರವಸೆ ನೀಡಿದರು.

ಹಿಂದಿನ ಶಾಸಕರು ಧಡೇಸುಗೂರಿನಿಂದ ಉಪ್ಪಳದ ವರೆಗಿನ 6 ಕೀ.ಮಿ. ರಸ್ತೆಗೆ ಡಾಂಬರೀಕರಣ ಮಾಡುವುದಾಗಿ ಪೂಜೆ ಸಲ್ಲಿಸಿದ್ದಾರೆ. ಕೆಲಸ ಮಾತ್ರ ಇನ್ನು ಆರಂಭವಾಗಿಲ್ಲ ಎಂದು ಗ್ರಾಮದ ಶೇಖರಪ್ಪ ಪಲ್ಲೆದ್ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಳೆಯ ಸಂಗತಿಗಳನ್ನು ಹೇಳಬೇಡಿ, ಹಿಂದಿನ ಸರ್ಕಾರ ₹22 ಸಾವಿರ ಕೋಟಿ ಇದೇ ರೀತಿ ಕೆಲಸ ಮಂಜೂರು ಮಾಡಿದೆ. ಆದರೆ ಹಣ ಮಾತ್ರ ಬಿಡುಗಡೆ ಮಾಡಿಲ್ಲ. ಆ ವಿಷಯ ಎತ್ತಿ ‘ನೀವು ಕೆಸರು ಹಾಕಿಕೊಳ್ಳಬೇಡಿ, ನನಗೂ ಸಿಡಿಸಬೇಡಿ’ ಎಂದು ಜನರನ್ನು ನಗೆಗಡಲಲ್ಲಿ ತೇಲಿಸಿದರು.

ದಢೇಸುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಕೀರಮ್ಮ ಫಕೀರಪ್ಪ, ಸದಸ್ಯರಾದ ಅಮರಯ್ಯಸ್ವಾಮಿ, ಶಿವರಾಮ, ಹನುಮಂತಪ್ಪ ನಾಯಕ, ಮುಖಂಡರಾದ ಖಾಸಿಂಸಾಬ, ಎಂ.ಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಬಸವರಾಜ, ನಗರಸಭೆ ಮಾಜಿ ಸದಸ್ಯ ಶಿವರುದ್ರಗೌಡ, ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಸುಧೀರ್ ಮೂಲಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ, ಮೇಲ್ವಿಚಾರಕಿ ಶಾರದ ನಾಯಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಜೀರ ಅಹ್ಮದ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಶಂಭುಲಿಂಗಪ್ಪ, ಜಯಲಕ್ಷ್ಮಿ ಬಸವರಾಜ, ಅಶೋಕ ಭೂಪಾಲ, ಕರಿಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT