ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಕಾಯಿಲೆಗೆ ಔಷಧಿ ಕೊರತೆ

ಸಾರಿಗೆ ನಿರ್ಬಂಧ ತಂದ ಸಂಕಷ್ಟ, ರೋಗಿಗಳಿಗೆ ತೊಂದರೆ
Last Updated 8 ಏಪ್ರಿಲ್ 2020, 17:00 IST
ಅಕ್ಷರ ಗಾತ್ರ

ಮಾನ್ವಿ: ಕೋವಿಡ್ ರೋಗದ ಹಿನ್ನೆಲೆಯಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವ ಔಷಧಿ ಅಂಗಡಿಗಳಲ್ಲಿ ದೀರ್ಘಾವಧಿ ಕಾಯಿಲೆಗಳ ಔಷಧಿ ಕೊರತೆ ಉಂಟಾಗಿದೆ.

ಸಾರಿಗೆ ನಿರ್ಬಂಧವು ಔಷಧಿ ವಿತರಕರಿಂದ ತಾಲ್ಲೂಕಿನ ಅಂಗಡಿಗಳಿಗೆ ಔಷಧಿಗಳ ಸಮರ್ಪಕ ಪೂರೈಕೆಗೆ ಅಡ್ಡಿಯಾಗಿದೆ. ಇದರಿಂದ ದೀರ್ಘಾವಧಿಯ ಹೃದ್ರೋಗ, ಮಧುಮೇಹ, ರಕ್ತದ ಒತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಔಷಧಿಗಳಿಗಾಗಿ ಪರದಾಡುವಂತಾಗಿದೆ.

ಮಾನ್ವಿ ಪಟ್ಟಣ ಸೇರಿ ತಾಲ್ಲೂಕಿನಲ್ಲಿ 60ಕ್ಕೂ ಅಧಿಕ ಔಷಧಿ ಮಾರಾಟ ಅಂಗಡಿಗಳು ಇವೆ. ವ್ಯಾಪಾರಸ್ಥರು ಔಷಧಿಗಳ ಖರೀದಿಗೆ ದೂರದ ದಾವಣಗೆರೆ, ಬೆಂಗಳೂರು, ಹೈದರಾಬಾದ್‌ ಔಷಧಿ ವಿತರಕರನ್ನು ಅವಲಂಬಿಸಿದ್ದಾರೆ.

ಔಷಧಿ ಅಂಗಡಿಗಳ ಮಾಲೀಕರು ಮಾರಾಟಕ್ಕಾಗಿ ಅಗತ್ಯ ಔಷಧಿಗಳ ಬೇಡಿಕೆ ಪಟ್ಟಿಯನ್ನು ಪ್ರತಿ ದಿನ ವಿತರಕರಿಗೆ ಸಲ್ಲಿಸುತ್ತಿದ್ದರು. ಬೇಡಿಕೆ ಸಲ್ಲಿಸಿದ ಮರುದಿನವೇ ಸಂಬಂಧಪಟ್ಟ ವಿತರಕರಿಂದ ಔಷಧಿಗಳು ಸಾರಿಗೆ ಬಸ್ ಮತ್ತಿತರ ಖಾಸಗಿ ಸರಕು ಸಾಗಣೆಯ ವಾಹನಗಳ ಮೂಲಕ ಅಂಗಡಿಗಳಿಗೆ ನೇರವಾಗಿ ಸರಬರಾಜು ಆಗುತ್ತಿದ್ದವು. ಕೊರೊನಾ ಉಲ್ಬಣವಾಗುತ್ತಿದ್ದಂತೆ ಸಾರಿಗೆ ಬಸ್ ಮತ್ತಿತರ ಸರಕು ಸಾಗಣೆಯ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ ನಂತರ ವಿತರಕರು ತಮ್ಮ ಸ್ವಂತ ಅಥವಾ ಖಾಸಗಿ ವಾಹನಗಳಲ್ಲಿ ಪೂರೈಸುತ್ತಿದ್ದಾರೆ. ವಿತರಕರಿಗೆ ತಮ್ಮ ಸಾರಿಗೆ ವೆಚ್ಚ ಹೊರೆಯಾಗುತ್ತಿರುವ ಕಾರಣ ಪ್ರತಿ ವಾರಕ್ಕೊಂದು ದಿನ ಮಾತ್ರ ತಮ್ಮ ವಾಹನಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ ಎನ್ನಲಾಗಿದೆ. ಕಾರಣ ರೋಗಿಗಳಿಗೆ ಸಮರ್ಪಕವಾಗಿ ಔಷಧಿಗಳು
ದೊರಕುತ್ತಿಲ್ಲ.

‘ಮಧುಮೇಹ ಕಾಯಿಲೆಗೆ ಬಹು ಬೇಡಿಕೆಯ ಮಾತ್ರೆಗಳನ್ನು ಹಿಮಾಚಲ ಪ್ರದೇಶದ ಸೋಲನ್ ಮೂಲದ ಯುಎಸ್ ವಿಟಮಿನ್ಸ್ ಖಾಸಗಿ ವಿತರಕ ಕಂಪನಿ ಪೂರೈಸುತ್ತದೆ. ಆದರೆ ಈಗ ಲಾಕ್ ಡೌನ್ ಘೊಷಣೆ ಕಾರಣ ಈ ಕಂಪನಿ ಮಾತ್ರೆಗಳ ಪೂರೈಕೆ ಸ್ಥಗಿತಗೊಳಿಸಿದ್ದು, ಮಧುಮೇಹ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದು ಸ್ಥಳೀಯ ಔಷಧಿ ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.

ಜನೌಷಧಿ ಕೇಂದ್ರ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಔಷಧಿಗಳ ಕೊರತೆ ಇದೆ. ಈ ಕುರಿತು ಸರ್ಕಾರ ಹಾಗೂ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಔಷಧಿಗಳ ಸರಬರಾಜಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT