ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಯೋಜನೆಯಲ್ಲಿ ಹಗರಣ: ದೇವದುರ್ಗ ತಾಲ್ಲೂಕಿನಲ್ಲಿ ಮತ್ತೆ 27 ಪಿಡಿಒಗಳ ಅಮಾನತು

Published 20 ಜನವರಿ 2024, 15:34 IST
Last Updated 20 ಜನವರಿ 2024, 15:34 IST
ಅಕ್ಷರ ಗಾತ್ರ

ರಾಯಚೂರು: ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದ ₹150 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ಅವರು 27 ಪಿಡಿಒಗಳನ್ನು ಅಮಾನತು ಮಾಡಿದ್ದಾರೆ.

ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಪರಿಶೀಲನೆ ನಡೆಸಿ ನೀಡಿದ ವರದಿ ಆಧರಿಸಿ ಅಮಾನತು ಮಾಡಿದ್ದಾರೆ. ಜಿಲ್ಲೆಯಿಂದ ವರ್ಗಾವಣೆಯಾಗಿ ಕಲಬುರಗಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಪಿಡಿಒಗಳನ್ನೂ ಅಮಾನತು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ದೇವದುರ್ಗ ತಾಲ್ಲೂಕಿನ ಮಸರಕಲ್‌ ಪಂಚಾಯಿತಿ ಪಿಡಿಒ ಆಗಿ ಕಾರ್ಯನಿರ್ವಹಿಸಿ ಬಡ್ತಿ ಹೊಂದಿದ್ದ ಮಾನ್ವಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಖಾಲೀದ್‌ ಅಹಮ್ಮದ್ ಅವರನ್ನೂ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ರಾಹುಲ್‌ ಪಾಂಡ್ವೆ ತಿಳಿಸಿದ್ದಾರೆ.

2023ರ ಡಿಸೆಂಬರ್‌ 8ರಂದು ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ 27 ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಇಬ್ಬರು ಪಿಡಿಒಗಳು ಎರಡು ಗ್ರಾಮ ಪಂಚಾಯಿತಿಗಳ ಪ್ರಭಾರ ವಹಿಸಿಕೊಂಡಿದ್ದರು.

‘ವಿಧಾನ ಪರಿಷತ್‌ ಸದಸ್ಯ ಶರಣಗೌಡ ಬಯ್ಯಾಪುರ ಅವರು 2022ರಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಕೊಟ್ಟರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ನೇರವಾಗಿ ಸರ್ಕಾರಕ್ಕೆ ದೂರು ಕೊಟ್ಟಿದ್ದರು. ನಂತರ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸಮಿತಿಯು 2021–2022ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಜಿಲ್ಲಾ ಪಂಚಾಯಿತಿ ಸಿಇಒ, ಉಪ ಕಾರ್ಯದರ್ಶಿ, ಯೋಜನಾ ನಿರ್ದೇಶಕ ಹಾಗೂ ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT