ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ ಚಿನ್ನದ ಗಣಿ: ಅನುಕಂಪದ ಉದ್ಯೋಗ ರದ್ದು; ಕಾರ್ಮಿಕರ ಆಕ್ರೋಶ

Last Updated 26 ಫೆಬ್ರುವರಿ 2021, 14:01 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ (ರಾಯಚೂರು): ರಾಜ್ಯ ಸರ್ಕಾರವು ಅನುಕಂಪದ ಉದ್ಯೋಗ ರದ್ದು ಮಾಡಿರುವುದಕ್ಕೆ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಗಣಿ ಸಚಿವರ ಎದುರು ಆಕ್ರೋಶ‌ ವ್ಯಕ್ತಪಡಿಸಿದ ಪ್ರಸಂಗ ಶುಕ್ರವಾರ ಹಟ್ಟಿ ಗಣಿ ಕಂಪನಿಯಲ್ಲಿ ನಡೆಯಿತು.

ಕಾರ್ಮಿಕನ ಅಶಕ್ತತೆ ಆಧರಿಸಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದನ್ನು ರದ್ದು ಮಾಡಿರುವುದರ ವಿರುದ್ಧವೂ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲ್ಲೇಶಪ್ಪ ಶಾಫ್ಟ್‌ನಲ್ಲಿ ಲಿಫ್ಟ್ ಮೂಲಕ ಗಣಿ ವೀಕ್ಷಣೆಗೆ ತೆರಳಿದ್ದ ಸಚಿವರು ಹಾಗೂ ಅಧಿಕಾರಿಗಳು ವಾಪಸಾಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಯಿತು. ಆದರೆ ಸಚಿವರು ಕಾರ್ಮಿಕರ ಅಳಲು ಆಲಿಸದೆ ಮುನ್ನಡೆದರು.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ ನಿರಾಣಿ, 'ಮೊದಲ‌ ಸಲ ಕಂಪನಿಗೆ ಭೇಟಿ ನೀಡುತ್ತಿದ್ದೇನೆ. ಕಾರ್ಮಿಕರು ಮಾತುಕತೆಗೆ ಸಮಯ ಕೇಳಿದರೆ, ಈಗಲೂ ಸ್ಪಂದಿಸುತ್ತೇನೆ. ಗೌರವ ಇಲ್ಲದೆ ಚೀರಾಡಿಕೊಂಡಿದ್ದರೆ, ಕೇಳುವುದಕ್ಕೆ ಆಗುವುದಿಲ್ಲ. ಕಾರ್ಮಿಕರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ, ಇತ್ಯರ್ಥ ಮಾಡಿಯೇ‌ ಹೋಗುತ್ತೇನೆ. ಅಗತ್ಯ ಬಿದ್ದರೆ ವಾಸ್ತವ್ಯ ಉಳಿಯುತ್ತೇನೆ' ಎಂದರು.

'ನಾನು ಕೂಡಾ ಕಾರ್ಖಾನೆಗಳನ್ನು ನಡೆಸುತ್ತಿದ್ದೇನೆ. 75 ಸಾವಿರ ಉದ್ಯೋಗಗಳನ್ನು ನೀಡಿದ್ದೇನೆ. ಇವರ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುವುದಿಲ್ಲ' ಎಂದು ಹೇಳಿದರು.

ಶೂ ತೊಡಿಸಿದ ಕಾರ್ಮಿಕ

ಹಟ್ಟಿಚಿನ್ನದ ಗಣಿ ಕಂಪನಿ ವೀಕ್ಷಿಸಲು ಆಗಮಿಸಿದ್ದ ಗಣಿ ಸಚಿವ ಮುರುಗೇಶ ನಿರಾಣಿ ಅವರಿಗೆ ಕಾರ್ಮಿಕರೊಬ್ಬರು ಸುರಕ್ಷತಾ ಶೂಗಳನ್ನು ತೊಡಿಸಿದರು. ಮಲ್ಲೇಶಪ್ಪ ಶಾಫ್ಟ್‌ನಲ್ಲಿ ಲಿಫ್ಟ್ ಏರುವ ಮೊದಲು ಸಚಿವರಿಗೆ ಹೆಲ್ಮೆಟ್, ಶೂ ಹಾಗೂ ದೀಪದ ಬೆಲ್ಟ್ ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT