ಲಿಂಗಸುಗೂರು: ‘ರಾಜ್ಯ ಸರ್ಕಾರ ಜೆಸ್ಕಾಂ ಉಪ ವಿಭಾಗಕ್ಕೆ 2017-18ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಬಿಡುಗಡೆ ಮಾಡಿದ್ದ ₹10.33 ಲಕ್ಷ ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಆರೋಪಿಸಿದರು.
‘ತಾಲ್ಲೂಕಿನ ದೇವರಭೂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿ ಪ್ರದೇಶಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಲ್ಲದೆ ನೂರಕ್ಕೂ ಹೆಚ್ಚು ಕುಟುಂಬಗಳಿಂದ ಪ್ರತಿ ಮನೆಗೆ ₹3,600 ರಂತೆ ಹಣ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಈ ಹಿಂದೆ ನಿರಂತರ ಜ್ಯೋತಿ ಹೆಸರಲ್ಲಿ ಕೂಡ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡಿಗಳನ್ನು ಕತ್ತಲೆಯಲ್ಲಿ ಉಳಿಸಿದ್ದಾರೆ. ಈಗ ಲಕ್ಷಾಂತರ ಹಣ ದೋಚಿ ಪುನಃ ಕಗ್ಗತ್ತಲೆಯಲ್ಲಿ ಇರಿಸಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರದ ಅನುದಾನ, ವೈಯಕ್ತಿಕ ಹಣ ಪಡೆದುಕೊಂಡರೂ ವಿದ್ಯುತ್ ಸಂಪರ್ಕ ನೀಡದಿರುವುದು ಪರಿಶಿಷ್ಟರ ಮೇಲಿನ ಕಾಳಜಿ ಸಾಕ್ಷಿಕರಿಸಿದೆ. ಇನ್ನೂ ಹದಿನೈದು ದಿನಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದೆ ಹೋದರೆ ರೈತರ ಸಹಯೋಗದಲ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಕೋಠ, ಮುಖಂಡರಾದ ರಾಮಯ್ಯ ಜವಳಗೇರಾ, ಲಾಲಸಾಬ್, ನಾಡಗೌಡ, ರಾಘವೇಂದ್ರ ಕೊಠಾರಿ, ದುರುಗಪ್ಪ ಫೂಲಭಾವಿ, ನರೇಶಕುಮಾರ, ಸಂತೋಷಕುಮಾರ, ಬಾಲಯ್ಯ ಐದಭಾವಿ ಹಾಗೂ ಬಸವರಾಜ ಸರ್ಜಾಪುರ ಉಪಸ್ಥಿತರಿದ್ದರು.