ಭಾನುವಾರ, ಅಕ್ಟೋಬರ್ 2, 2022
19 °C

ರಾಯಚೂರು: ಜಿಲ್ಲೆಯಲ್ಲಿ ಸಾಮರಸ್ಯದ ಮೊಹರಂ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಹಿಂದೂ, ಮುಸ್ಲಿಂ ಆದಿಯಾಗಿ ಎಲ್ಲ ಧರ್ಮೀಯರೂ ಮಂಗಳವಾರ ಮೊಹರಂ ಹಬ್ಬವನ್ನು ಸಡಗರದಿಂದ ಆಚರಿಸಿದರು.

ಕೋವಿಡ್ ಕಾರಣ ಕಳೆದ ಎರಡು ಮೊಹರಂ ಪೂಜೆಗೆ ಮಾತ್ರ ಸೀಮಿತವಾಗಿತ್ತು. ಈ ವರ್ಷ ಸೋಂಕಿನ ಅಪಾಯ ಇಲ್ಲದ ಕಾರಣ ಸಂಭ್ರಮದಿಂದ ಹಬ್ಬ ನಡೆಸಲಾಯಿತು.

ಎಲ್ಲ ಧರ್ಮದವರು ವಿವಿಧ ಬಣ್ಣದ ಬಟ್ಟೆ, ಅಲಂಕಾರಿಕ ಪೇಪರ್, ವರ್ಣರಂಜಿತ ರಿಬ್ಬನ್ ಹಾಗೂ ಬಿದಿರಿನ ಕಡ್ಡಿಗಳ ಕೋಲು ಹಿಡಿದು ಅಲೈ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನು ನೋಡಲು ಜನ ಮುಗಿಬಿದ್ದರು. ಹಿಂದೂ- ಮುಸ್ಲಿಂ ಸಮುದಾಯದವರು ಸೌಹಾರ್ದಯುತವಾಗಿ ಮೊಹರಂ ಹಬ್ಬದ ಕಿಚ್ಚು ಹಾಯ್ದರು. ಅಪಾರ ಸಂಖ್ಯೆಯ ಜನನ ಭಾಗವಹಿಸಿ ಮೊಹರಂ ಆಚರಣೆ ವಿಶೇಷವಾಗಿತ್ತು.

ಪೀರಾ ದೇವರುಗಳನ್ನು ಕೂಡಿಸುವುದು, ವಿಶಿಷ್ಠ ರೀತಿಯ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಹಲಗೆ ಬಾರಿಸುವುದು, ಹುಲಿ ಕುಣಿತ, ರಿವಾಯತ ಪದಗಳೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಹಿಂದೂ ಮುಸ್ಲಿಮರು ಜತೆಗೂಡಿ ಆಚರಿಸಿದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀಗಿ ಪೊಲೀಸ್ ಬಂದೋಬಂಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಹಸನ್-ಹುಸೇನರ ಮುಖಾಮುಖಿ ಭೇಟಿ
ಮುದಗಲ್:
ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ಪಟ್ಟಣದ ಕೋಟೆಯ ಮುಂಭಾಗದಲ್ಲಿ ಇಮಾಮ್ ಹಸನ್ ಮತ್ತು ಹುಸೇನ್ ದೇವರ ಭೇಟಿ ಜರುಗಿತು.

ಮೇಗಳಪೇಟೆಯ ಮಸೀದಿಯಿಂದ ಹಸನ್, ಕಿಲ್ಲಾದಿಂದ ಹುಸೇನ್ ದೇವರನ್ನ ಭಾಜಾ ಭಜಂತ್ರಿ, ಅಲೈ ಹಾಡು, ಹಳ್ಳಳ್ಳಿ ಬುಕ್ಕ, ಹೆಜ್ಜೆ ಮೇಳಗಳ ಮೂಲಕ ಮೆರವಣಿಗೆಯಲ್ಲಿ ಕೋಟೆ ಮುಂಭಾಗಕ್ಕೆ ಕರೆ ತಂದರು.

ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಬಾರಿ ಜನಸ್ತೋಮದ ನಡುವೆ ಹಸನ್-ಹುಸೇನರ ಭೇಟಿ ಜರುಗಿತು.

ಶಾಸಕರಾದ ಡಿ.ಎಸ್. ಹೂಲಗೇರಿ, ಅಮರೇಗೌಡ ಪಾಟೀಲ ಬಯ್ಯಾಪುರ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಕಾಂಗ್ರೆಸ್ ಮುಖಂಡ ರುದ್ರಯ್ಯ, ಜೆಡಿಎಸ್ ಮುಖಂಡ ಸಿದ್ದು ಬಂಡಿ, ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರು, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಹುಸೇನಿ ಆಲಂ ದೇವರ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಗುರುಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಮರಿಲಿಂಗಪ್ಪ, ಸಾಧಿಕ್ ಅಲಿ, ನ್ಯಾಮತ್ ಉಲ್ಲಾ ಖಾದ್ರಿ, ದೊಡ್ಡ ಸಿದ್ದಯ್ಯ, ಸಣ್ಣ ಸಿದ್ದಯ್ಯ ಇದ್ದರು.

ದೇವರ ಭೇಟಿ ನೀಡುವ ದರ್ಶನ ಪಡೆಯುವುದಕ್ಕೆ ವಿಐಪಿ ಗ್ಯಾಲರಿಯಲ್ಲಿ ಸಾಮಾನ್ಯ ಜನರು ಕುಳಿತ್ತಿದ್ದು ಕಂಡ ಶಾಸಕ ಹೂಲಗೇರಿ ಅವರು ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಕ್ಷಸ ಪ್ರತಿಕೃತಿಗಳ ದಹನ
ಸಿಂಧನೂರು:
ನಗರದ ಸೇರಿದಂತೆ ತಾಲ್ಲೂಕಿನಾದ್ಯಂತ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದ ಬಡಿಬೇಸ್, ಹಳೆ ಬಜಾರ್, ಏಕೆಗೋಪಾಲ ನಗರ, ಇಂದಿರಾ ನಗರ, ಖದರಿಯಾ ಕಾಲೊನಿ, ಮಹಿಬೂಬ್ ಕಾಲೊನಿ ಸೇರಿದಂತೆ ಇತರೆಡೆ ಪೀರ್ ದೇವರಗಳನ್ನು ಪ್ರತಿಷ್ಠಾಪಿಸಿ, ಕೊನೆಯ ದಿನವಾದ ಮಂಗಳವಾರ ದಫನ್ ಮಾಡಲಾಯಿತು.

ಆಯಿನೂರು ಗ್ರಾಮದಲ್ಲಿ ಕತಲ್ ರಾತ್ರಿ ಮತ್ತು ಕೊನೆಯ ದಿನದಂದು ವಿಶಿಷ್ಟವಾಗಿ ಆಚರಿಸಲಾಯಿತು. ಸೋಮವಾರ ತಡ ರಾತ್ರಿ ರಾವಣ ಸೇರಿದಂತೆ ಇತರ ರಾಕ್ಷಸ ವಂಶಸ್ಥರ ಪ್ರತಿಕೃತಿಗಳನ್ನು ಹೊತ್ತುಕೊಂಡು ಕುಣಿಯುತ್ತಾ ನಂತರ ಪಟಾಕಿ ಹಚ್ಚಿ ದಹನ ಮಾಡಲಾಯಿತು.

13 ಪೀರ್ ದೇವರಗಳನ್ನು ಹಿಡಿದುಕೊಂಡು ಮಸೀದಿಯಿಂದ ಗ್ರಾಮದ ಮನೆ-ಮನೆಗೆ ತೆರಳಿ ಪೂಜೆ ಸಲ್ಲಿಸಲಾಯಿತು. ರೋಗ ರುಜಿನ, ಮಕ್ಕಳಾಗದವರು ದೇವರ ಮುಂದೆ ಪ್ರಾರ್ಥಿಸಿದರು. ನಂತರ ನದಿಗೆ ತೆರಳಿ ದಫನ್ ಆಗುವ ಸಮಯದಲ್ಲಿ ಮಳೆ ಬೆಳೆ ಕುರಿತು ಹೇಳಿಕೆಗಳು ನಡೆದವು.

ಬಾದರ್ಲಿ, ಗೋನ್ವಾರ, ಜವಳಗೇರಾ, ಸಾಲಗುಂದಾ ಇತರೆ ಗ್ರಾಮಗಳಲ್ಲಿ ಮೊಹರಂ ಜರುಗಿತು.

ಸಿರವಾರ: ಅಲೈ ದೇವರುಗಳ ಸವಾರಿ
ಸಿರವಾರ:
ಮೊಹರಂ ಕೊನೆಯ ದಿನವಾದ ಮಂಗಳವಾರ ಅಲೈ ದೇವರುಗಳ ದಫನ್ ಕಾರ್ಯ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ನಡೆಯಿತು.

ಅತ್ತನೂರು, ಮರಾಟ, ಜಾಲಾಪೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳಿಗ್ಗೆ ದೇವರುಗಳ ಸವಾರಿ, ಸಂಜೆ ದೇವರ ದಫನ್ ಕಾರ್ಯವು ಅಲೈ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

ಕಳೆದ ಐದು ದಿನಗಳಿಂದ ಪಟ್ಟಣದ ಹಿಂದೂ ಮುಸ್ಲಿಮರು ಕೆಂಪು ಸಕ್ಕರೆ, ತೆಂಗಿನ ಕಾಯಿ, ಬೆಲ್ಲದ ಪಾನಕ ನೀಡಿ ತಮ್ಮ ಹರಕೆ ತೀರಿಸಿದರು.

ಕಳೆದ ಹಲವು ವರ್ಷಗಳಿಂದ ಅಲೈ ಕುಣಿತ ನಿಷೇಧಿಸಿದ್ದರಿಂದ ದಫನ್ ಮೆರವಣಿಗೆ ನೋಡಲು ಬಂದಿದ್ದ ಜನರಿಗೆ ನಿರಾಶೆಯಾಯಿತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.

ಸಕ್ಕರೆ ಓದಿಸಿ ಹರಕೆ ಸಲ್ಲಿಕೆ

ಜಾಲಹಳ್ಳಿ: ಮೊಹರಂ ಹಬ್ಬದ ದಫನ್ ಆಚರಣೆಯನ್ನು ಹಿಂದೂ–ಮುಸ್ಲಿಂ ಭಕ್ತರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಪಟ್ಟಣದ ಮಸೀದಿಯಲ್ಲಿ ಹುಸೇನ್ ಪಾಷಾ, ಸೈಯದ್ ಖಾಸಿಂ, ಇಮಾಮ್ ಖಾಸಿಂ ಮತ್ತು ಹೈದರ್ ಅಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿಕೊಂಡು ಬರಲಾಯಿತು.

ಆ.7ರಂದು ಹೈದರ್ ಅಲಿ ಮತ್ತು ಇಮಾಮ್ ಖಾಸಿಂ ಹಾಗೂ ಕತಲ್ ರಾತ್ರಿಯಂದು (ಆ.8) ಹುಸೇನ್ ಪಾಷ ಮತ್ತು ಸೈಯದ್ ಖಾಸಿಂ ದೇವರ ಸಾವರಿ ಜರುಗಿತು. ಮೊಹರಂ ಕೊನೆಯ ದಿನದಂದು ನಾಲ್ಕೂ ದೇವರನ್ನು ಅಲೈ ಮೆರವಣಿಗೆಯಲ್ಲಿ ಹೊತ್ತೊಯ್ದು ದೇಸಾಯಿ ಅವರ ತೋಟದಲ್ಲಿ ದಫನ್ ಆಚರಣೆ ಜರಗಿಸಲಾಯಿತು.

ಕೋವಿಡ್ ಕಾರಣ ಬಳಿಕ ಈ ವರ್ಷ ಹಬ್ಬವನ್ನು ಸಡಗರಿಂದ ಆಚರಿಸಲಾಯಿತು. ಕುಟುಂಬ ಸಮೇತರಾಗಿ ಮಸೀದಿಗೆ ಬಂದ ಭಕ್ತರು ಸಕ್ಕರೆ ಓದಿಸಿಕೊಂಡು ಹರಕೆ ಸಲ್ಲಿಸಿದರು.

ಹಿಂದೂ–ಮುಸ್ಲಿಮರ ಅಲೈ ಕುಣಿತ

ತುರ್ವಿಹಾಳ: ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಲೈ ದೇವರುಗಳ ಮೆರವಣಿಗೆಯನ್ನು ಸಂಭ್ರಮದಿಂದ ನಡೆಸಲಾಯಿತು.

ಪಟ್ಟಣದ ಮೌಲಾಲೀ ಹಾಗೂ ಮುಲ್ಲಾರ್ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾದ ದೇವರುಗಳ ಮೆರವಣಿಗೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ, ಅಮರಗುಂಡಯ್ಯ ಶಿವಾಚಾರ್ಯರು, ಚಿದಾನಂದಯ್ಯ ಗುರುವಿನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ‘ಹಿಂದೂ-ಮುಸ್ಲಿಮರು ಭಾವೈಕ್ಯ ಹಾಗೂ ಸೌಹಾರ್ದತೆಯಿಂದ ದೇವರುಗಳ ಮುಂದೆ ಕುಣಿಯಬೇಕು’ ಎಂದು ಮನವಿ ಮಾಡಿದರು.

ಹಳೆ ಬಜಾರ್‌ನಲ್ಲಿ ಎರಡೂ ಮಸೀದಿಯ ದೇವರುಗಳ ಸಮಾಗಮದ ದೃಶ್ಯ ನೋಡಲು ಸಾವಿರಾರರು ಜನರು ಸೇರಿದರು.

ದೇವರುಗಳ ಮುಂದೆ ಅಲೈ ಕುಣಿಯುತ್ತಾ ಕನಕದಾಸ ವೃತ್ತ, ಬಸ್ ನಿಲ್ದಾಣದ ಮೂಲಕ ಈದ್ಗಾ ಮೈದಾನದಲ್ಲಿ ದಫನ್ ಮಾಡಲಾಯಿತು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು