ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಮ್ಯಾದಾರರು

ಬೇಸಿಗೆ ಕಾಲದಲ್ಲಿ ನಡೆಯಬೇಕಿದ್ದ ವ್ಯಾಪಾರವಿಲ್ಲದೆ ನಷ್ಟ
Last Updated 10 ಮೇ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಕುಲ ಕಸುಬಿನಲ್ಲಿ ಸ್ವಾವಲಂಬನೆ ಜೀವನ ನಡೆಸುತ್ತಿರುವ ರಾಯಚೂರು ನಗರದ ಮ್ಯಾದರರು ಬೇಸಿಗೆ ಕಾಲದಲ್ಲಿ ವ್ಯಾಪಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಬಿದಿರು ಮತ್ತು ಬಿದಿರಿನ ವಸ್ತುಗಳಿಗೆ ಲಾಕ್‌ಡೌನ್‌ನಿಂದಾಗಿ ಬೇಡಿಕೆಯಿಲ್ಲ.

ನಗರದ ಸಿಯಾತಲಾಬ್ ಬಡಾವಣೆಗೆ ಹೊಂದಿಕೊಂಡಿರುವ ಮ್ಯಾದರವಾಡಿ (ಬಂಬು ಬಜಾರ್)ಯಲ್ಲಿ ಸುಮಾರು 25 ಬಿದಿರಿನ ಅಂಗಡಿಗಳಿವೆ. ಇದೇ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳು ಸಾಕಷ್ಟಿವೆ. ಮ್ಯಾದರರು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬಿದಿರಿನ ವಸ್ತುಗಳ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆಧುನಿಕ ಕಾಲದ ಪ್ಲಾಸ್ಟಿಕ್ ನೈಲಾನ್ ವಸ್ತುಗಳ ವ್ಯಾಪಾರಕ್ಕೆ ಸೆಡ್ಡು ಹೊಡೆದು ತರಹೇವಾರಿ ವಸ್ತುಗಳನ್ನು ತಯಾರಿಸುತ್ತಿದ್ದರೆ.

ಅಸ್ಸಾಂ, ನೆಲ್ಲೂರು, ಸಂಕೇಶ್ವರದಿಂದ ಬಿದಿರು ಬಂಬಗಳನ್ನು ಹಾಗೂ ಬಲ್ಲಿಸ್ ತಂದು ತಡಿಕೆ, ಮರ, ಬೀಸಣಿಕೆ, ಏಣಿ, ಪುಟ್ಟಿ ಹಾಗೂ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್ ಘೊಷಣೆ ಮಾಡಿದ್ದರಿಂದ ಸಂಚಾರ ಸ್ಥಗಿತವಾಗಿ ಕಚ್ಚಾ ವಸ್ತು ಖರೀದಿಸಲು ಆಗಿಲ್ಲ. ಇತ್ತ ಸಿದ್ದಪಡಿಸಿದ ವಸ್ತುಗಳಿಗೆ ಖರೀದಿಸಲು ರೈತರು ಹಾಗೂ ಸಾರ್ವಜನಿಕರು ಬರದೆ ಇದ್ದುದ್ದಕ್ಕೆ ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ.

ಮಗುವಿನ ಹುಟ್ಟಿನಿಂದ (ತೊಟ್ಟಿಲು) ಶುರುವಾಗಿ ಸಾಯುವವರೆಗೂ (ಚಟ್ಟ) ಬಿದಿರಿನ ವಸ್ತುಗಳ ಉಪಯೋಗ ಮಾಡಲಾಗುತ್ತಿತ್ತು. ಆದರೆ, ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್, ನೈಲಾನ್ ಇತ್ಯಾದಿ ಹಾವಳಿಯಿಂದ ಸ್ವಲ್ಪ ಮಟ್ಟಿಗೆ ಇವುಗಳ ಬಳಕೆ ಕಡಿಮೆಯಾಗಿದೆ. ಆದರೂ ಮದುವೆ ಹಾಗೂ ಶುಭ ಕಾರ್ಯಗಳಲ್ಲಿ ಹಂದರ ಹಾಕುವುದು, ಫ್ಲೆಕ್ಸ್, ಬ್ಯಾನರ್ ಗಳಿಗೆ ಬಂಬು ಬಲ್ಲಿಸ್, ಟೀನ್ ಶೆಡ್ ಮನೆ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ಹಾಕುವ ಬಲ್ಲೀಸ್ ಬೇಕೆ ಬೇಕು.

ಕೃಷಿ ಚಟುವಟಿಕೆಯಲ್ಲಿ ಕುಂಟೆ, ಪುಟ್ಟಿ ಇತರೆ ಬಿದಿರಿನ ವಸ್ತುಗಳ ಉಪಯೋಗ ಹೆಚ್ಚು.ಲಾಕ್‌ಡೌನ್‌ನಿಂದಾಗಿ ರೈತರು ಬೆಳೆಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಬಾರದೇ ಪರಿತಪಿಸುವಂತಾಗಿದೆ. ವಿವಾಹ ಹಾಗೂ ಇತರೆ ಶುಭ ಕಾರ್ಯಗಳಿಗೂ ಬ್ರೇಕ್ ಬಿದ್ದಿದ್ದರಿಂದ ಬಿದಿರಿನ ವ್ಯಾಪಾರ ನೆಲಕಚ್ಚಿದೆ ಎನ್ನುವುದು ವ್ಯಾಪಾರಿಗಳ ಅಳಲು.

’ಬಿದಿರಿನ ವ್ಯಾಪಾರ ವರ್ಷಪೂರ್ತಿ ಇರುವುದಿಲ್ಲ. ಜನವರಿಯಿಂದ ಜೂನ್‌ವರೆಗೆ ನಡೆಯುತ್ತದೆ. ಈ ಸಂದರ್ಭದಲ್ಲಿ 4 ರಿಂದ 5 ಲಾರಿ ಲೋಡ್ (ಬಂಬೂ ಹಾಗೂ ಬಲ್ಲೀಸ್) ಪ್ರತಿವರ್ಷ ಮಾರಾಟ ಆಗುತ್ತಿತ್ತು. ಈಗ ವ್ಯಾಪಾರ ಆರಂಭವಾಗಿದ್ದರೂ ಕೂಡ ಶೇ 10 ಮಾತ್ರ ವ್ಯಾಪಾರ ನಡೆಯುತ್ತಿದೆ. ಪ್ರತಿ ವರ್ಷ ಬೇಸಿಗೆಯ ಆರಂಭದ ಅವಧಿಯಲ್ಲಿ ₹80 ಸಾವಿರದಿಂದ ₹1 ಲಕ್ಷ ಲಾಭ ಬರುತ್ತಿತ್ತು. ಅದಕ್ಕೆ ಲಾಕ್ ಡೌನ್‌ನಿಂದಾಗಿ ಏನು ಲಾಭ ಸಿಕ್ಕಿಲ್ಲ’ ಎಂದು ಬಿದಿರಿನ ವ್ಯಾಪಾರಿ ಈರಯ್ಯ ಮ್ಯಾದರ್ ಅಳಲು ತೋಡಿಕೊಂಡರು.

ಬಂಬು (ಕಚ್ಛಾ ವಸ್ತು) ‍ಪಡೆದು ತಡಿಕೆ, ಮರ, ಬೀಸಣಿಕೆ ತಯಾರಿಸಿ ಅಂಗಡಿ ಮಾಲೀಕರಿಗೆ ನೀಡಿ ₹150 ರಿಂದ ₹200ರವರೆಗೆ ಕೂಲಿ ಪಡೆದು ಸುಮಾರು 120 ಕುಟುಂಬಗಳೂ ಜೀವನ ನಡೆಸುತ್ತಿವೆ. ಕಳೆದ ಎರಡು ತಿಂಗಳಿನಿಂದ ಕಚ್ಚಾ ವಸ್ತುಗಳ ಬಾರದ ಕಾರಣ ಕೆಲಸವಿಲ್ಲದೇ ಮನೆಯಲ್ಲಿಯೇ ಖಾಲಿ ಕುಳಿತಿದ್ದಾರೆ.

’ಈಗ ಲಾಕ್ ಡೌನ್ ಸಡಿಲಕೆಯಿಂದಾಗಿ ಕಳೆದ ಎರಡು ದಿನಗಳಿಂದ ಕೆಲಸದಲ್ಲಿ ತೊಡಗಿದ್ದೇವೆ. ಸರ್ಕಾರದಿಂದ ಜನಧನ್‌ ಖಾತೆಗೆ ಹಾಕಿದ್ದ ₹500 ಹಾಗೂ ಕೆಲ ದಾನಿಗಳು ನೀಡಿದ ಆಹಾರ ಸಾಮಗ್ರಿಗಳ ಮೇಲೆ ದಿನ ದೂಡಿದ್ದೇವೆ. ಸರ್ಕಾರವು ಆಟೋ ಚಾಲಕರಿಗೆ, ಅಗಸರಿಗೆ ನೀಡಿದಂತೆ ನಮಗೂ ₹5000 ಪರಿಹಾರ ಕೊಡಬೇಕು‘ ಎಂದು ಬಿದಿರಿನ ಕೆಲಸ ಮಾಡುವ ಪದ್ದಮ್ಮ ಒತ್ತಾಯಿಸಿದರು.

*
ನಮ್ಮ ವ್ಯಾಪಾರಕ್ಕೆ ರೈತರೇ ಮುಖ್ಯ ಗ್ರಾಹಕರು. ಹೊಲ ಹದ ಮಾಡಿದ ನಂತರ ನೀಲಗಿರಿ ಕಟ್ಟಿಗೆ, ಬಂಬು ಖರೀದಿ ಹೆಚ್ಚು ಮಾಡುತ್ತಾರೆ. ಹೊಲಗಳಲ್ಲಿ ತಾತ್ಕಾಲಿಕ ಶೆಡ್, ಪುಟ್ಟಿ ಹಾಗೂ ಇತರೆ ಕೃಷಿ ಉತ್ಪನ್ನ ಖರೀದಿಸುತ್ತಾರೆ. ಅಲ್ಲದೇ ಬೇಸಿಗೆಯಲ್ಲಿ ಮಹನಿಯರ ಜಯಂತಿಯ ನಿಮಿತ್ತ ಫ್ಲೆಕ್ಸ್, ಬ್ಯಾನರ್ ಮಾಡಿಸುತ್ತಾರೆ. ಕೊರೊನಾ ಎಲ್ಲಾ ಶುಭ ಕಾರ್ಯಗಳಿಗೆ ಕೊಳ್ಳಿ ಇಟ್ಟಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟ
ಎದುರಾಗಿದೆ. ಲಾಕ್ ಡೌನ್ ಸಂಪೂರ್ಣ ತೆರೆಯದ ಕಾರಣ ಮತ್ತಷ್ಟು ಆತಂಕವಿದೆ. ವ್ಯಾಪಾರ ಸಹಜ ಸ್ಥಿತಿಗೆ ಬರುವುದು ಬಹಳ ಕಷ್ಟ ಸರ್ಕಾರ ಬಿದಿರಿನ ವ್ಯಾಪಾರಸ್ಥರಿಗೂ ನೆರವು ನೀಡಬೇಕು.
–ಈರಯ್ಯ ಮ್ಯಾದರ್, ಬಿದಿರಿನ ವ್ಯಾಪಾರಸ್ಥ.

*
ಇಂದಿನ ದುಡಿಮೆ ಇಂದೇ ಖರ್ಚು ಮಾಡುವಂತಹ ಪಾಡು ನಮ್ಮದು. ಲಾಕ್‌ಡೌನ್‌ನಿಂದ ಕೆಲಸ ಇರಲಿಲ್ಲ ಮನೆ ಬಾಡಿಗೆ, ಇತರೆ ಖರ್ಚು ವೆಚ್ಚ ಸರಿದೂಗಿಸಲು ಸಾಲ ಮಾಡಿದ್ದೇನೆ. ಕೌಶಲ್ಯ ಕಾರ್ಮಿಕರಾದ ನಮಗೂ ಸರ್ಕಾರ ಪರಿಹಾರ ನೀಡಿ ಆರ್ಥಿಕ ಸಹಾಯ ಮಾಡಬೇಕು.
-ಪದ್ಮಮ್ಮ. ಬಿದಿರಿನ ಕೆಲಸ ಮಾಡುವ ವೃದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT