ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಉತ್ತೇಜಿಸಲು ನಬಾರ್ಡ್‌ ಯೋಜನೆ

Last Updated 5 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿರುವ ರಾಯಚೂರಿನಲ್ಲಿ ಹೈನುಗಾರಿಕೆ ಬೆಳೆಸುವುದಕ್ಕಾಗಿ ಅಧಿಕಾರಿಗಳು ಗಂಭೀರ ಚಿಂತನೆ ಮಾಡಿದ್ದು, ಕಾರ್ಯಾನುಷ್ಠಾನ ಪ್ರಕ್ರಿಯೆ ಕೂಡಾ ಪ್ರಾರಂಭಿಸಿರುವುದು ವಿಶೇಷ.

ಪಾಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ದ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ. ಕುರಿ, ಕೋಳಿ ಹಾಗೂ ಜಾನುವಾರುಗಳ ಸಾಕಾಣಿಕೆಗೆ ಆಸಕ್ತಿ ತೋರಿಸುವವರಿಗೆ ಸೂಕ್ತ ಮಾರ್ಗದರ್ಶನ ಒದಗಿಸುತ್ತಿದ್ದು, ಜಿಲ್ಲೆಯಲ್ಲಿ ಹೈನುಗಾರಿಕೆ ಬೆಳೆಸಲು ಮಾಡಬೇಕಾದ ಹೊಸ ಹೊಸ ಆಯಾಮಗಳನ್ನು ಸಹ ಗುರುತಿಸುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಹೈನುಗಾರಿಕೆ ಉತ್ತೇಜಿಸಲು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ (ನಬಾರ್ಡ್‌) ಕಳೆದ ಸಾಲಿನಲ್ಲಿಯೆ ‘ಪ್ರದೇಶ ಅಭಿವೃದ್ಧಿ ಯೋಜನೆ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ, ಬ್ಯಾಂಕುಗಳಿಗೆ ಕಳುಹಿಸಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೈನುಗಾರಿಕೆಗಾಗಿ ಪಡೆಯುವ ಸಾಲದಲ್ಲಿ ಶೇ 33 ಹಾಗೂ ಸಾಮಾನ್ಯ ವರ್ಗದವರು ಪಡೆಯುವ ಸಾಲದಲ್ಲಿ ಶೇ 25 ರಷ್ಟು ಸರ್ಕಾರವು ಸಹಾಯಧನ ನೀಡುತ್ತದೆ. ಸಾಲ ನೀಡುವ ಬ್ಯಾಂಕುಗಳೇ ಸಹಾಯಧನ ಪಡೆಯುತ್ತವೆ (ಕ್ಲೈಮ್‌).

ಸಾಲ ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಿ ಬ್ಯಾಂಕುಗಳು ಹೈನುಗಾರಿಕೆಗೆ ಸಾಲ ಒದಗಿಸಲು ತೀರ್ಮಾನಿಸುತ್ತವೆ. ಗರಿಷ್ಠ ₹25 ಲಕ್ಷದವರೆಗೂ ಸಾಲ ನೀಡುವುದಕ್ಕೆ ನಬಾರ್ಡ್‌ ಅವಕಾಶ ಮಾಡಿಕೊಟ್ಟಿದೆ. ಆದರೆ, ಹೈನುಗಾರಿಕೆ ಮಾಡಲು ಒಂದು ಲಕ್ಷದವರೆಗೂ ಸಾಲ ಪಡೆಯಲು ಯಾವ ಭದ್ರತೆ ಒದಗಿಸುವ ಅಗತ್ಯ ಇರುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಹೈನುಗಾರಿಕೆ ಸಾಲ ಕೊಡುವುದರಲ್ಲಿ ಬ್ಯಾಂಕುಗಳು ಎಷ್ಟು ಪ್ರಗತಿ ಸಾಧಿಸಿವೆ ಎಂಬುದು ಇವರೆಗೂ ಪರಿಶೀಲನೆ ಮಾಡಿಲ್ಲ. ಆದರೆ ಈ ವರ್ಷ ಅಂಕಿ–ಅಂಶಗಳ ದಾಖಲೆಯೊಂದಿಗೆ ಹೈನುಗಾರಿಕೆ ಅಭಿವೃದ್ಧಿ ಆರಂಭಿಸಲಾಗಿದೆ.

ಲಿಂಗಸುಗೂರು, ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಮಾತ್ರ ಸದ್ಯಕ್ಕೆ ಹೈನುಗಾರಿಕೆ ಇದೆ. ಈ ಮೂರು ತಾಲ್ಲೂಕುಗಳಲ್ಲಿ ಒಟ್ಟು 111 ಹಾಲು ಸಂಗ್ರಹಿಸುವ ಕೆಎಂಎಫ್‌ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ರಾಯಚೂರು ಹಾಗೂ ದೇವದುರ್ಗ ತಾಲ್ಲೂಕುಗಳಲ್ಲಿ ಹೈನುಗಾರಿಕೆ ನಿರೀಕ್ಷೆ ಮಟ್ಟದಲ್ಲಿಲ್ಲ. ಈ ತಾಲ್ಲೂಕುಗಳಲ್ಲಿಯೂ ಹಾಲು ಸಂಗ್ರಹಿಸುವ ಸೊಸೈಟಿ ಪ್ರಾರಂಭಿಸಿ ರೈತರಿಗೆ ಆದಾಯ ದೊರಕಿಸಲು ಕೆಎಂಎಫ್‌ ಅಧಿಕಾರಿಗಳು ಈಗಾಗಲೇ ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಸಮೀಕ್ಷೆ ಆರಂಭಿಸಿದ್ದಾರೆ.

ಸಾಲ ಯೋಜನೆಗೆ ಐದು ವರ್ಷಗಳ ಕಾಲಾವಧಿಯನ್ನು ನಬಾರ್ಡ್‌ ಬ್ಯಾಂಕುಗಳಿಗೆ ನಿಗದಿ ನೀಡಿದೆ. ಬ್ಯಾಂಕ್‌ ಶಾಖೆಗಳು ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವಹಿಸಿ ಹೈನುಗಾರಿಕೆಗೆ ಸಾಲ ಒದಗಿಸಬೇಕಾಗಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT