ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು

ಕವಿತಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯ: ಆರೋಪ
Last Updated 4 ಏಪ್ರಿಲ್ 2023, 12:26 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನವಜಾತ ಶಿಶುವೊಂದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಸ್ಕಿ ತಾಲ್ಲೂಕಿನ ಇರಕಲ್ ಗ್ರಾಮದ ಬಸ್ಸಮ್ಮ–ಅಮರೇಶ ದಂಪತಿಗೆ ಜನಿಸಿದ ಮೊದಲ ಗಂಡು ಮಗು ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ (ಏ.2) ಮಧ್ಯಾಹ್ನ ಬಸ್ಸಮ್ಮ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ತಪಾಸಣೆ ಮಾಡಿದ ನರ್ಸ್‌ ಮಹಿಳೆಯನ್ನು ಆಂಬ್ಯುಲೆನ್ಸ್‌ನಲ್ಲಿ ಲಿಂಗಸುಗೂರು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಮಾರ್ಗಮಧ್ಯೆ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಈ ವೇಳೆ ಗರ್ಭಿಣಿ ಜತೆಗೆ ತೆರಳಿದ್ದ ನರ್ಸ್‌, ತಾಯಿ ಮತ್ತು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ವಾಪಸ್‌ ಕರೆತಂದು ದಾಖಲಿಸಿಕೊಂಡಿದ್ದರು.

‘ಶನಿವಾರ ಮತ್ತು ಭಾನುವಾರ ಆರೋಗ್ಯವಾಗಿದ್ದ ಮಗು ಸೋಮವಾರ ಬೆಳಿಗ್ಗೆ 9.30ಕ್ಕೆ ಮೃತಪಟ್ಟಿದೆ. ವೈದ್ಯರು ಸರಿಯಾಗಿ ನೋಡಿಕೊಂಡಿದ್ದರೆ ಮಗು ಬದುಕುಳಿಯುತ್ತಿತ್ತು’ ಎಂದು ಮಗುವಿನ ಪೋಷಕರು ದೂರಿದ್ದಾರೆ.

‘ಆಸ್ಪತ್ರೆಯಲ್ಲಿ ಎರಡು ದಿನ ಇದ್ದರೂ ವೈದ್ಯರು ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆ ಮಾಡಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಮಗು ಸತ್ತಿದೆ’ ಎಂದು ಮಗುವಿನ ತಂದೆ ಅಮರೇಶ ಆರೋಪಿಸಿದರು.

‘ಮಗು ಆರೋಗ್ಯವಾಗಿತ್ತು ಹಾಗೂ ಮೂರು ಕೆ.ಜಿ. ತೂಕವಿತ್ತು ಸೋಮವಾರ ಬೆಳಿಗ್ಗೆ ಮಗು ಮೃತಪಟ್ಟ ನಂತರ ಮನೆಯವರು ಊರಿಗೆ ಬಂದಿದ್ದಾರೆ. ಮಗುವನ್ನು ಕಳೆದುಕೊಂಡ ದು:ಖದಲ್ಲಿದ್ದ ನಮಗೆ ಏನು ಮಾಡಬೇಕು ಎಂದು ತೋಚದೆ ಮಗುವಿನ ಶವ ಸಂಸ್ಕಾರ ಮಾಡಿದ್ದೇವೆ. ವೈದ್ಯರ ನಿರ್ಲಕ್ಷದಿಂದಲೇ ಮಗು ಸತ್ತಿದೆ’ ಎಂದು ಮೃತ ಮಗುವಿನ ಸಂಬಂಧಿ ಹನುಮಂತ ಮೇಸ್ತ್ರಿ ಆರೋಪಿಸಿದರು.

‘ಹೆರಿಗೆ ನಂತರ ಮಗುವಿನ ಆರೋಗ್ಯದ ಬಗ್ಗೆ ನರ್ಸ್‌ ಜತೆ ಚರ್ಚಿಸಿದ್ದು ಮಗು ಆರೋಗ್ಯವಾಗಿದ್ದ ಕಾರಣ ಯಾವುದೇ ಚಿಕಿತ್ಸೆ ಅಗತ್ಯವಿರಲಿಲ್ಲ. ಸೋಮವಾರ ಬೆಳಿಗ್ಗೆ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದಾಗ ಮಗುವನ್ನು ಮಡಿಲಲ್ಲಿ ಹಾಕಿಕೊಂಡು ಕುಳಿತಿದ್ದ ಮಹಿಳೆಯನ್ನು ವಿಚಾರಿಸಿದಾಗ ಮಗು ಸತ್ತಿರುವುದು ತಿಳಿದು ಬಂತು ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸುಶಾಂತ ತಿಳಿಸಿದರು.

‘ಎದೆಹಾಲು ಕುಡಿಸಿ ಮಗುವನ್ನು ಮಲಗಿಸಿ ಗರ್ಭಿಣಿಯನ್ನು ಸ್ನಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಅವರು ವಾಪಸ್‌ ಬರುವ ವೇಳೆಗೆ ಮಗು ಮೃತಪಟ್ಟಿದೆ. ಈ ವಿಚಾರ ತಮಗೆ ವಾರ್ಡ್‌ಗೆ ಭೇಟಿ ನೀಡಿದಾಗ ತಿಳಿಯಿತು.‌ ಹಾಲು ಕುಡಿಸಿದ ನಂತರ ಮಗುವನ್ನು ಮಲಗಿಸಿದ ಕಾರಣ ಮಗು ಉಸಿರುಗಟ್ಟಿ ಸತ್ತಿರಬಹುದು. ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ರೀತಿ ಘಟನೆ ಜರುಗಿದೆ. ತಮ್ಮಿಂದ ನಿರ್ಲಕ್ಷ್ಯ ಆಗಿಲ್ಲ’ ಡಾ.ಸುಶಾಂತ ಸ್ಪಷ್ಟಪಡಿಸಿದರು.

‘ಈ ಘಟನೆ ಸಂಬಂಧ ವೈದ್ಯರೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT