ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಮ್ಸ್| ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಸಿಗದ ಔಷಧ: 7 ರೋಗಿಗಳ ಸಂಬಂಧಿಕರಲ್ಲಿ ಆತಂಕ

ಏಳು ಜನ ಸೋಂಕಿತರಿಗೆ ರಿಮ್ಸ್‌ನಲ್ಲಿ ಚಿಕಿತ್ಸೆ; ರೋಗಿಗಳ ಸಂಬಂಧಿಕರಲ್ಲಿ ಹೆಚ್ಚಿದ ಆತಂಕ
Last Updated 22 ಮೇ 2021, 8:29 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ಔಷಧಿ ಹಾಗೂ ಇಂಜೆಕ್ಷನ್‌ ಸರ್ಕಾರದಿಂದ ಇನ್ನೂ ಪೂರೈಕೆ ಆಗುತ್ತಿಲ್ಲ.

ತುಂಬಾ ವಿರಳವಾಗಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ‘ಎಂಪೊಟೆರೆಸಿನ್‌ ಇಂಜೆಕ್ಷನ್‌’ ಸಂಗ್ರಹವು ರಿಮ್ಸ್‌ನಲ್ಲಿ ಕಡಿಮೆ ಪ್ರಮಾಣದಲ್ಲಿತ್ತು. ಅದು ಖಾಲಿಯಾಗಿದ್ದು, ಮತ್ತೆ ಬೇಡಿಕೆ ಸಲ್ಲಿಸುತ್ತಿದ್ದರೂ ಕಂಪನಿಗಳಿಂದಲೇ ಪೂರೈಕೆ ಆಗುತ್ತಿಲ್ಲ. ಖಾಸಗಿ ಮಾರಾಟಗಾರರಲ್ಲಿಯೂ ಇಂಜೆಕ್ಷನ್‌ ದೊರೆಯುತ್ತಿಲ್ಲ. ಕಂಪನಿಯಿಂದಲೇ ಉತ್ಪಾದಿಸಿ ಪೂರೈಕೆ ಆಗಬೇಕಿದೆ ಎಂದು ರಿಮ್ಸ್‌ ವೈದ್ಯರು ಹೇಳುತ್ತಿದ್ದಾರೆ.

ಕಪ್ಪು ಶೀಲಿಂಧ್ರ ಸೋಂಕು ಕಾಣಿಸಿಕೊಂಡ ಏಳು ರೋಗಿಗಳು ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಆದರೆ ಅಗತ್ಯ ಔಷಧಿ ದೊರೆಯುತ್ತಿಲ್ಲ ಎನ್ನುವ ಸುದ್ದಿ ತಿಳಿದು ರೋಗಿ ಸಂಬಂಧಿಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಿಕಿತ್ಸೆ ಲಭ್ಯವಿದ್ದರೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ತಮ್ಮ ಅಥಣಿ ಕ್ಷೇತ್ರದ ರೋಗಿಯೊಬ್ಬರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ಈಚೆಗೆ ಸುದ್ದಿಯಾಗಿತ್ತು. ರಾಯಚೂರಿನಲ್ಲಿ ದಾಖಲಾದ ರೋಗಿಗಳಿಗೂ ಸಚಿವರು ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಗಳು ಮನವಿ
ಮಾಡುತ್ತಿದ್ದಾರೆ.

‘ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೇಳಿಕೊಳ್ಳಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ಈಚೆಗೆ ಜಿಲ್ಲೆಗೆ ಬಂದಿದ್ದ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು.

ವೈದ್ಯರು ಹೇಳುವ ಪ್ರಕಾರ, ಈ ಮೊದಲು ಒಂದು ಲಕ್ಷ ರೋಗಿಗಳಲ್ಲಿ ಒಬ್ಬರಿಗೆ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ‘ಎಂಪೊಟೆರೆಸಿನ್‌ ಇಂಜೆಕ್ಷನ್‌’ ಬಳಕೆ ವಿರಳವಾಗಿದ್ದರಿಂದ ಔಷಧಿ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿರಲಿಲ್ಲ. ಸದ್ಯಕ್ಕೆ ಈ ವಿಷಯ ಸರ್ಕಾರದ ಮಟ್ಟದಲ್ಲಿದ್ದು, ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು
ನೋಡಲಾಗುತ್ತಿದೆ.

ಇಂಜೆಕ್ಷನ್‌ ಸಿಗುತ್ತಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಅವರು ಖುದ್ದಾಗಿ ಬೆಂಗಳೂರಿಗೆ ತೆರಳಿ ‘ಎಂಪೊಟೆರೆಸಿನ್‌ ಇಂಜೆಕ್ಷನ್‌’ ಪಡೆಯುವ ವ್ಯವಸ್ಥೆ ಮಾಡಿಕೊಂಡಿದ್ದು ಗುರುವಾರ ಸುದ್ದಿ ಆಯಿತು. ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡ 14 ರೋಗಿಗಳಿಗೆ ಅವರು ನೆರವಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲೂ ಸಂಸದರು, ಶಾಸಕರಿದ್ದಾರೆ. ಆದರೆ, ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಔಷಧಿ ಪಡೆಯುವ ಕೆಲಸ ಮಾಡುತ್ತಿಲ್ಲ ಎಂದು ರೋಗಿ ಸಂಬಂಧಿಗಳು ಆರೋಪಿಸುತ್ತಿದ್ದಾರೆ.

ಸೋಂಕಿಗೆ ಏನು ಕಾರಣ?

ಕೋವಿಡ್‌ ದೃಢವಾದವರಿಗೆ ಕಪ್ಪು ಶಿಲೀಂಧ್ರ (ಮ್ಯೂಕೋಮೈರೋಸಿಸ್‌) ಸೋಂಕು ಕಾಣಿಸಿಕೊಳ್ಳಲು ಸ್ಟಿರಾಯ್ಡ್‌ ಇಂಜೆಕ್ಷನ್‌ ಕಾರಣ ಎನ್ನುತ್ತಿದ್ದಾರೆ ಸರ್ಕಾರಿ ವೈದ್ಯರು.

ಕೊರೊನಾ ಸೋಂಕಿತರಿಗೆ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವು ಅರೆ ತಿಳಿವಳಿಕೆ ವೈದ್ಯರು ಸ್ಟಿರಾಯ್ಡ್‌ ಇಂಜೆಕ್ಷನ್‌ ನೀಡುತ್ತಿದ್ದಾರೆ. ಇದು ಜ್ವರ ನಿಯಂತ್ರಿಸಿದರೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಸೋಂಕಿತರಿಗೆ ಜ್ವರ ಮುಂದುವರಿದು ಐದು ದಿನಗಳ ಬಳಿಕ ಮಾತ್ರ ಸ್ಟಿರಾಯ್ಡ್‌ ಇಂಜೆಕ್ಷನ್‌ ಕೊಡಬೇಕು ಎನ್ನುತ್ತಾರೆ ರಿಮ್ಸ್‌ ತಜ್ಞ ವೈದ್ಯರು.

ಆರಂಭದಲ್ಲಿಯೇ ಸ್ಟಿರಾಯ್ಡ್‌ ಕೊಡುವುದರಿಂದ ರೋಗ ನಿರೋಧಕ ಶಕ್ತಿ ಕಳೆಯುತ್ತದೆ. ಇದರಿಂದ ಕೆಲವರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT