ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗೆ ಯಾವುದೇ ಶಾಸಕರು ಹೊಣೆಯಲ್ಲ: ಬಿ.ವಿ. ನಾಯಕ

Last Updated 25 ಮೇ 2019, 12:40 IST
ಅಕ್ಷರ ಗಾತ್ರ

ರಾಯಚೂರು:ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು ಜನರು ಗುರುತಿಸಿ ಜನರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದ ಸಂಸದರಾಗಿದ್ದ ಬಿ.ವಿ. ನಾಯಕ ಅವರ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪರ ಅಲೆಗಳ ಅಬ್ಬರದ ಅರಿವು ಚುನಾವಣಾ ಫಲಿತಾಂಶದ ಬಳಿಕವೇ ಗೊತ್ತಾದಂತಾಗಿದೆ. ಈ ಬಗ್ಗೆ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು.

* ಈ ಸೋಲನ್ನು ಹೇಗೆ ವಿಶ್ಲೇಷಿಸುತ್ತೀರಿ?

ಮತದಾರರು ಯಾವ ನಿರೀಕ್ಷೆಗಳನ್ನು ಮತ್ತು ಸದುದ್ದೇಶ ಇಟ್ಟುಕೊಂಡು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈ ಸೋಲನ್ನು ಸಮಚಿತ್ತದಿಂದ ಸ್ವೀಕರಿಸಲಾಗುವುದು. ರಾಯಚೂರು ಲೋಕಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್‌ ಪಕ್ಷವು ನಿರೀಕ್ಷಿಸಿರುವುದಕ್ಕೆ ವ್ಯತಿರೀಕ್ತವಾಗಿ ಬಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಉದ್ದೇಶದಿಂದ ಮತ ನೀಡಿದ್ದರೆ ನಮಗೂ ಸಂತೋಷ. ಒಟ್ಟಾರೆ ಕ್ಷೇತ್ರದ ಮತದಾರನ ತೀರ್ಪನ್ನು ಗೌರವಿಸುತ್ತೇನೆ.

* ಸೋಲಿನ ಅಂತರ ಅನಿರೀಕ್ಷಿತ, ಏನಂತೀರಿ?

ತುಂಬಾ ಅಚ್ಚರಿಯ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಒಂದೇ ನಿಲುವಿನತ್ತ ಮತದಾರರು ಒಲವು ತೋರಿಸಿದ್ದು ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಅಂತಿಮವಾಗಿ ಜನರು ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಲೇ ಬೇಕಾಗುತ್ತದೆ.

*ಬಹಳ ಅಂತರದ ಸೋಲಿಗೆ ಮೈತ್ರಿ ಪಕ್ಷಗಳ ಒಡಕು ಕಾರಣವೆ?

ಚುನಾವಣೆ ಫಲಿತಾಂಶಕ್ಕೂ ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿರುವ ಶಾಸಕರಿಗೂ ಸಂಬಂಧವಿಲ್ಲ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಒಂದು ಕಡೆಯಲ್ಲ; ರಾಜ್ಯದ ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಹಿನ್ನಡೆ ಆಗಿರುವುದು ಸತ್ಯ. ಮತದಾರರನ್ನು ಬಿಜೆಪಿಯವರು ಹೈಜಾಕ್‌ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ವೈಫಲ್ಯಕ್ಕೆ ಶಾಸಕರನ್ನು ಅಥವಾ ಮೈತ್ರಿ ಪಕ್ಷವನ್ನು ಹೊಣೆ ಮಾಡುವುದಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರವು ಉತ್ತಮ ಆಡಳಿತವನ್ನು ನೀಡುತ್ತಿದೆ. ಇದೇ ನಿರೀಕ್ಷೆಯಲ್ಲಿ ಚುನಾವಣೆಯನ್ನು ಎದುರಿಸಿದ್ದೇವೆ. ನಿರೀಕ್ಷಿಸಿದಷ್ಟು ಗೆಲುವು ಸಾಧ್ಯವಾಗಿಲ್ಲ.

*ರಾಜ್ಯದ ಮೇಲೆ ಈ ಫಲಿತಾಂಶದ ಪರಿಣಾಮ ಏನಾಗಲಿದೆ?

ರಾಜ್ಯ ಸರ್ಕಾರವು ಸ್ಪಷ್ಟ ಬಹುಮತದೊಂದಿಗೆ ನಡೆಯುತ್ತಿದೆ. ಲೋಕಸಭೆ ಚುನಾವಣೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನುವ ಸಂಗತಿ ವೈಯಕ್ತಿಕವಾಗಿದ್ದು, ಇನ್ನೂ ನಾಲ್ಕು ವರ್ಷಗಳ ಅವಧಿ ಹೊಂದಿರುವ ಶಾಸಕರನ್ನು ಪಕ್ಷದಿಂದ ಬಿಟ್ಟುಕೊಡಲಾಗುವುದಿಲ್ಲ. ಕಾಂಗ್ರೆಸ್‌ ಪಕ್ಷದ ಯಾವುದೇ ಶಾಸಕರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಮುಂದಾಗಿಲ್ಲ. ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಶಾಸಕರು ರಾಜೀನಾಮೆ ನೀಡುವುದನ್ನು ಕ್ಷೇತ್ರದ ಜನರು ಒಪ್ಪುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT