ಸೋಮವಾರ, ಆಗಸ್ಟ್ 26, 2019
20 °C
ಪ್ರವಾಹ ಪೀಡಿತ ಹಿರೇರಾಯನಕುಂಪಿ ಗ್ರಾಮದ ಜನರಿಗೆ ಪುನರ್ವಸತಿಯಿಲ್ಲ

ನಮ್ಮೂರಿಗೆ ಯಾರೂ ಬಂದಿಲ್ಲ; ಗೋಳು ಕೇಳಿಲ್ಲ

Published:
Updated:
Prajavani

ರಾಯಚೂರು: ಕೃಷ್ಣಾನದಿ ತೀರದ ಗ್ರಾಮಗಳಲ್ಲೊಂದಾದ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪಿ ಗ್ರಾಮದ ಜನರು 10 ವರ್ಷಗಳ ಬಳಿಕ ಮತ್ತೊಮ್ಮೆ ಪ್ರವಾಹ ಪೀಡಿತರಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂದು ತೊಂದರೆ ಅನುಭವಿಸಿದ್ದ ನದಿತೀರದ ಬೇರೆ ಗ್ರಾಮಗಳಿಗೆ ಪುನರ್ವಸತಿ ಮಾಡಿಕೊಟ್ಟಿದ್ದು, ತಮ್ಮೂರಿಗೆ ಏಕೆ ಪುನರ್ವಸತಿ ಮಾಡಿಕೊಡುತ್ತಿಲ್ಲ ಎನ್ನುವ ಅಳಲು ಹೇಳಿಕೊಳ್ಳುತ್ತಿದ್ದಾರೆ.

ಗ್ರಾಮದ ಜನರ ಸಂಕಷ್ಟ ಕೇಳುವುದಕ್ಕೆ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಇದುವರೆಗೂ ಬಂದಿಲ್ಲ. ಈಗ ನೀರು ಬಂದಿದೆ ಎನ್ನುವ ಕಾರಣಕ್ಕೆ ಬರುತ್ತಿದ್ದಾರೆ. ಸರ್ಕಾರದಿಂದ ಬರುವ ಅನುಕೂಲಗಳನ್ನು ತಾರತಮ್ಯ ಮಾಡದೆ ಹಂಚಿಕೆ ಮಾಡಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಎಲ್ಲರೂ ಸೇರಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರದ್ದು.

ಹಿರೇರಾಯನಕುಂಪಿ ಗ್ರಾಮದ ತಾಪತ್ರಯ ಸರ್ಕಾರಕ್ಕೆ ತಿಳಿಸುವುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರನ್ನೆ ಆಯ್ಕೆಗೊಳಿಸಿಲ್ಲ ಎನ್ನುವುದು ಇನ್ನೊಂದು ಗಮನಾರ್ಹ ವಿಷಯ. ಹೊಸ ಗ್ರಾಮ ಪಂಚಾಯಿತಿ ನಿರ್ಮಾಣ ಸಂದರ್ಭದಲ್ಲಿ ಉಂಟಾದ ವಿವಾದವು ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದೆ. ಈ ಕಾರಣದಿಂದ ಯಾವುದೇ ರಾಜಕಾರಣಿಗಳು ಈ ಗ್ರಾಮಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಪಂಚಾಯಿತಿಯಿಂದ ಸಿಗಬೇಕಾದ ಯಾವ ಸೌಲಭ್ಯಗಳು ಕೂಡಾ ಈ ಗ್ರಾಮಕ್ಕೆ ತಲುಪುತ್ತಿಲ್ಲ. ಗ್ರಾಮದ ಜನರು ತ್ರಿಶಂಕು ಸ್ಥಿತಿಯಲ್ಲಿ ಕಾಲಕಳೆಯುತ್ತಿದ್ದಾರೆ.

ಕೃಷ್ಣಾಪ್ರವಾಹದಲ್ಲಿ ಹಿರೇರಾಯನಕುಂಪಿ ಭಾಗಶಃ ಜಲಾವೃತವಾಗಿದ್ದರಿಂದ ಸುಮಾರು 40 ಕುಟುಂಬಗಳ 600 ಜನರನ್ನು ಶಾವಂತಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದೆ. ಮೂರು ದಿನಗಳಾದರೂ ನದಿ ನೀರು ಕಡಿಮೆಯಾಗದೆ ಇರುವುದಕ್ಕಾಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿರುವುದು ಪರಿಹಾರ ಕೇಂದ್ರದಲ್ಲಿ ಕಂಡುಬಂತು. ಜಾನುವಾರುಗಳಿಗೆ ಮೇವು ಹೊಂದಿಸುವುದು, ಅವುಗಳನ್ನು ನಿರ್ವಹಿಸುವುದು ಸಂಕಷ್ಟವಾಗಿ ಪರಿಣಮಿಸಿದೆ.

ಗ್ರಾಮದ ರೈತರು ಸಾಲ ಮಾಡಿಕೊಂಡು ಬೆಳೆದಿದ್ದ ಹತ್ತಿ, ಭತ್ತದ ಗದ್ದೆಗಳೆಲ್ಲವೂ ನೀರಿನಲ್ಲಿ ಸಂಪೂರ್ಣ ಮುಳುಗಿದೆ. ಸಾಲದ ಹೊರೆಯಿಂದ ಪಾರಾಗುವುದು ಹೇಗೆ ಎನ್ನುವ ಚಿಂತೆಯಲ್ಲಿ ಕೆಲವು ರೈತರು ಮುಳುಗಿದ್ದರು. ಶಾವಂತಗೇರಾ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿರುವ ಜನರು ಮರಳಿ ಗ್ರಾಮ ಸೇರುವ ಧಾವಂತದಲ್ಲಿದ್ದಾರೆ. ಆದರೆ, ಗ್ರಾಮದೊಳಗೆ ನಿಂತಿರುವ ನೀರು ಆಸ್ಪದ ನೀಡುತ್ತಿಲ್ಲ.

‘ನಾವೂ ಬಡವರು, ನಮ್ಮ ಸಂಬಂಧಿಗಳು ಬಡವರು. ಕಷ್ಟ ಇದೆ ಎಂದು ಸಂಬಂಧಿಗಳಿಗೆ ಕಷ್ಟಕೊಟ್ಟು ಅವರ ಮನೆಗಳಲ್ಲಿ ಇರುವುದಕ್ಕೆ ಮನಸು ಬರಲಿಲ್ಲ. ಅದಕ್ಕೆ ಪರಿಹಾರ ಕೇಂದ್ರದೊಳಗೆ ಬಂದು ಇದ್ದೇವೆ. ಹಿರೇರಾಯನಕುಂಪಿ ಜನರ ಪಾಲಿಗೆ ಸರ್ಕಾರದಿಂದ ಈಗ ಊಟದ ಆಸರೆ ಆಗಿದೆ. ಆದರೆ, ಪುನರ್ವಸತಿ ಮಾಡಿಕೊಟ್ಟಿದ್ದರೆ, ಯಾವ ಸಂಕಷ್ಟವಿಲ್ಲದೆ ಹೋಗಿ ಇರುತ್ತಿದ್ದೇವು. ಇಲ್ಲಿ ಕೂಡಾ ಕಷ್ಟ ಕೇಳಿ ಶಾಶ್ವತ ಪರಿಹಾರ ಕಲ್ಪಿಸಲು ಯಾರೂ ಬರುತ್ತಿಲ್ಲ. ಏನಾದರಾಗಲಿ ಗಟ್ಟಿ ಮನಸ್ಸು ಮಾಡಿಕೊಂಡು ಉಳಿದಿದ್ದೇವೆ’ ಎಂದು ಗ್ರಾಮದ ರೈತ ಆನಂದ ಅವರು ಅಳಲು ತೋಡಿಕೊಂಡರು.

Post Comments (+)