ಮಂಗಳವಾರ, ಆಗಸ್ಟ್ 3, 2021
26 °C
ರಸ್ತೆಗಳಲ್ಲಿ ವಾಹನ, ಜನ ಸಂಚಾರ ಇದೆ; ಮಳಿಗೆಗಳಲ್ಲಿ ವ್ಯಾಪಾರ ಎಂದಿನಂತಿಲ್ಲ

ರಾಯಚೂರು | ಷರತ್ತುಗಳಡಿ ನಡೆದಿದೆ ಸಹಜ ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ಮೊದಲಿನಂತೆ ಸಹಜ ಜೀವನ ಸಾಧ್ಯವಾಗುತ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ಆತಂಕ ಹುಟ್ಟಿಸಿದೆ. ಸೋಂಕು ಹರಡದಂತೆ ಜಿಲ್ಲಾಡಳಿತವು ಮುಂದುವರಿಸಿದ ಕೆಲವು ಷರತ್ತುಗಳಿಗೆ ಒಳಪಟ್ಟು ಜನಜೀವನ ನಡೆಯುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಸರ್ಕಾರಿ ಬಸ್‌ಗಳ ಸೇವೆ ಆರಂಭಿಸಿದ್ದರೂ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿಲ್ಲ. ಆಟೋಗಳ ಸಂಚಾರವಿದ್ದರೂ ಬಳಕೆದಾರರ ಕೊರತೆ ಇದೆ. ಇವರೆಗೂ ಬಂದ್ ಮಾಡಿಕೊಂಡಿದ್ದ ಹೋಟೆಲ್‌ಗಳು ಸೋಮವಾರದಿಂದ ತೆರೆದುಕೊಂಡಿವೆ. ಆದರೆ, ಮೊದಲಿದ್ದಂತೆ ಗ್ರಾಹಕರು ಇಲ್ಲ. ಸಲೂನ್‌ ತೆರೆದಿದ್ದರೂ ಜನರು ನಿರ್ಭಯವಾಗಿ ಸೇವೆ ಪಡೆಯುತ್ತಿಲ್ಲ. ಚಿತ್ರಮಂದಿರ ಆರಂಭವಾಗುವ ಮುನ್ಸೂಚನೆ ಇದ್ದರೂ, ಚಲನಚಿತ್ರ ವೀಕ್ಷಿಸುವ ಕುತೂಹಲ ಜನರಲ್ಲಿ ತುಂಬಾ ಕಡಿಮೆಯಾಗಿದೆ.

ಬೀದಿಬದಿಗಳಲ್ಲಿ ಆಹಾರ ತಯಾರಿಸುವ ತಳ್ಳುಗಾಡಿಯವರಿಗೆ ಇನ್ನೂ ಅನುಮತಿ ನೀಡಿಲ್ಲ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಬಜ್ಜಿ, ಪಾನಿಪುರಿ, ಒಗ್ಗರಣೆ, ಇಡ್ಲಿ, ದೋಸೆ ಮಾರಾಟ ಮಾಡುವವರು ಇನ್ನೂ ಹೊರಗೆ ಬಂದಿಲ್ಲ. ಬೀದಿ ವ್ಯಾಪಾರವು ಜನಸಾಮಾನ್ಯರ ಬೇಡಿಕೆಗಳನ್ನು ಆಧರಿಸಿ ನಡೆಯುವಂತದ್ದು. ಸದ್ಯ ಇಬ್ಬರೂ ಸಂಕಷ್ಟದಲ್ಲಿ ಮುಳುಗಿದ್ದಾರೆ.

ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿಗೆ ಸಹಜ ಜೀವನ ಶುರುವಾಗಿದೆ ಎನ್ನುವ ಭಾವನೆ ಬಂದಿದೆ. ಆದರೆ, ಮಧ್ಯಾಹ್ನದ ನಂತರ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಸುತ್ತಿರುವುದರಿಂದ ಇನ್ನೂ ಲಾಕ್‌ಡೌನ್‌ ಮನಸ್ಥಿತಿಯಿಂದ ಹೊರಬರಲು ಆಗುತ್ತಿಲ್ಲ. ಕೊರೊನಾ ವರದಿಗಳು ಮತ್ತು ಸೋಂಕಿತರ ಪ್ರವಾಸ ಆಧರಿಸಿ ಅಧಿಕಾರಿಗಳು ಇದ್ದಕ್ಕಿದ್ದಂತೆ ಹೊಸ ಹೊಸ ಕ್ರಮಗಳನ್ನು ಜಾರಿ ಮಾಡುತ್ತಿರುವುದರಿಂದ, ಆತಂಕ ಮುಕ್ತವಾಗಿ ಯಾವುದು ನಡೆಯುತ್ತಿಲ್ಲ.

ಜಿಲ್ಲೆಗೆ ಹೊಂದಿಕೊಂಡಿರುವ ಎಂಟು ಜಿಲ್ಲೆಗಳ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ ಈಗಲೂ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಜನರಿಗೆ ಮುಕ್ತ ಸಂಚಾರಕ್ಕೆ ಅವಕಾಶವಿದ್ದರೂ, ಮಹಾರಾಷ್ಟ್ರ, ಗುಜರಾತ್‌ನಿಂದ ಬರುವವರಿಗೆ ನಿರ್ಬಂಧ ಮುಂದುವರಿಸಲಾಗಿದೆ. ಹೀಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ವಿಚಾರಸದೆ ಯಾರನ್ನೂ ಬಡುತ್ತಿಲ್ಲ. ಹೈದರಾಬಾದ್‌, ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಗಳಿಗೆ ಇನ್ನೂ ಬಸ್‌ ಸಂಚಾರ ಆರಂಭಿಸಿಲ್ಲ. ಆದರೆ, ಸೋಮವಾರ ಹೈದರಾಬಾದ್‌ನಿಂದ ಬರುವ ರೈಲು ರಾಯಚೂರು ಮಾರ್ಗದಲ್ಲಿ ಸಂಚಾರ ಬೆಳೆಸುತ್ತಿದೆ.

ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವುದು, ಸ್ಯಾನಿಟೈಜರ್‌ ಬಳಕೆ ಮಾಡಬೇಕಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಮಹಾ ತೊಂದರೆಗಳನ್ನು ಸಹಜ ಜೀವನದೊಂದಿಗೆ ರೂಢಿಸಿಕೊಳ್ಳುವಂತೆ ಕೊರೊನಾ ಬದಲಾವಣೆ ಮಾಡದೆ.

ಅಪರಿಚಿತ ಜೀವನ: ಕೊರೊನಾ ಮಹಾಸಂಕಷ್ಟದಿಂದ ಪಾರಾಗಲು ಬಹುತೇಕ ಜನರು ಮಾಸ್ಕ್‌ ಧರಿಸುತ್ತಿದ್ದಾರೆ. ಇದರಿಂದ ಪರಿಚಯಸ್ಥರು ಎದುರಿನಲ್ಲೇ ಇದ್ದರೂ ಅಪರಿಚಿತರಂತೆ ಕಾಣುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು