ಗುರುವಾರ , ಸೆಪ್ಟೆಂಬರ್ 23, 2021
22 °C

ಉಸ್ಮಾನಿಯಾ ಮಾರ್ಕೆಟ್‌: ಬೆಳ್ಳುಳ್ಳಿ ಬೆನ್ನಟ್ಟಿದ ಈರುಳ್ಳಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ವಹಿವಾಟಿನ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಇದೇ ಮೊದಲಬಾರಿ ವ್ಯಾಪಾರಿಗಳು ಈರುಳ್ಳಿಯನ್ನು ಬೆಳ್ಳುಳ್ಳಿಯಂತೆ ಮಾರಾಟ ಮಾಡುತ್ತಿದ್ದಾರೆ. ಅಂಗೈಯಲ್ಲಿ ಒಂದು ಹಿಡಿಯಬಹುದಾದ ದೊಡ್ಡಗಾತ್ರದ ಈರುಳ್ಳಿ ದರ ಪ್ರತಿ ಕೆಜಿಗೆ ₹120 ಕ್ಕೆ ಏರಿಕೆಯಾಗಿದೆ. ಬಡವರು ಮತ್ತು ಕೆಳಮಧ್ಯಮವರ್ಗದವರು ಇಂತಹ ಈರುಳ್ಳಿ ಖರೀದಿಸುವುದು ಅಪರೂಪ. ಸದ್ಯ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯಷ್ಟೇ ದಪ್ಪಗಿರುವ (3ನೇ ಗುಣಮಟ್ಟದ) ಪಕಳೆಗಳು ಚದುರಿದ ಈರುಳ್ಳಿ ಪ್ರತಿ ಕೆಜಿಗೆ ₹80 ರ ದರದಲ್ಲಿ ಮಾರಾಟ ಆಗುತ್ತಿದೆ. ಮತ್ತೆ ದುಬಾರಿಯಾಗಬಹುದು ಎಂದರಿತು ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡುಬಂತು.

ಒಂದು ವಾರದ ಹಿಂದೆ ಬೆಳ್ಳುಳ್ಳಿ ಮತ್ತು ಈರುಳ್ಳಿ ದರಗಳ ಮಧ್ಯೆ ₹100 ವ್ಯತ್ಯಾಸ ಇತ್ತು. ಈಗ ಅಂತರ ಕಡಿಮೆಯಾಗುತ್ತಿದೆ. ಈರುಳ್ಳಿ ದರ ಸತತ ಏರಿಕೆಯಿಂದ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು ಒಂದು ಕೆಜಿ ಬೆಳ್ಳುಳ್ಳಿ ₹160 ರಿಂದ ₹200ಕ್ಕೆ ಏರಿಕೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ, ಇನ್ನುಳಿದ ತರಕಾರಿಗಳ ದರದಲ್ಲಿ ಬಹಳ ವ್ಯತ್ಯಾಸವಾಗಿಲ್ಲ. ಸ್ವಲ್ಪ ಅಗ್ಗವಾಗಿದ್ದು, ಟೊಮೆಟೊ ದರ ಕುಸಿತವಾಗುತ್ತಿದೆ.

ಹಸಿಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಎಲೆಕೋಸು, ಬದನೆಕಾಯಿ, ಸವತೆಕಾಯಿ ಅಗ್ಗದ ತರಕಾರಿಗಳು. ಖಾನಾವಳಿಗೆ ಸಗಟು ರೂಪದಲ್ಲಿ ಇವುಗಳ ಖರೀದಿ ಯತೇಚ್ಛವಾಗಿದೆ. ಆಲೂಗಡ್ಡೆ ಮತ್ತು ಹೂಕೋಸು ಹೊರಜಿಲ್ಲೆಗಳಿಂದ ಬರುತ್ತಿದೆ. ಇನ್ನುಳಿದ ಸೊಪ್ಪು ಮತ್ತು ತರಕಾರಿಗಳು ಬಹುತೇಕ ರಾಯಚೂರು ಜಿಲ್ಲೆಯ ರೈತರು ಬೆಳೆದಿದ್ದಾರೆ. ಬೀನ್ಸ್‌, ಗಜ್ಜರಿ, ಹೂಕೋಸು, ಬೆಳ್ಳುಳ್ಳಿ ಬೆಳಗಾವಿಯಿಂದ ಬರುತ್ತಿವೆ.

ತಂಪು ಹವಾಮಾನ ಇರುವುದರಿಂದ ರೈತರು ಸೊಪ್ಪುಗಳನ್ನು ಸಾಕಷ್ಟು ಬೆಳೆದಿದ್ದು, ಪಾಲಕ್‌, ಸಬ್ಬಕ್ಕಿ, ಕೊತಂಬರಿ, ಸಪ್ಪನ ಪಲ್ಲೆ, ಮೇಂತೆ ಎಲ್ಲವೂ ಸಾಮಾನ್ಯ ದರದಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಅಪರೂಪವಾಗಿದೆ. ಒಂದು ದಂಟಿಗೆ ₹10 ದರದಲ್ಲಿ ಸಿಗುತ್ತಿದೆ.

ರಾಯಚೂರು ಉಸ್ಮಾನಿಯಾ ತರಕಾರಿ ಮಾರುಕಟ್ಟೆ

ತರಕಾರಿ; ಹಿಂದಿನವಾರ(₹); ಈವಾರ(₹)

ಈರುಳ್ಳಿ; 60; 100

ಬೆಳ್ಳುಳ್ಳಿ; 160; 200

ಟೊಮೆಟೊ; 25; 20

ಎಲೆಕೋಸು; 50; 60

ಬೀನ್ಸ್‌; 60; 60

ಸವತೆಕಾಯಿ; 40; 30

ಬೆಂಡಿಕಾಯಿ; 40; 40

ದಪ್ಪಮೆಣಸು; 60; 60

ಚವಳೆಕಾಯಿ; 40; 50

ಬದನೆಕಾಯಿ; 40; 40

ಆಲೂಗಡ್ಡೆ; 25; 20

* ಪ್ರತಿ ಕೆಜಿ ದರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು