ರಾಯಚೂರು: ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದೇವದುರ್ಗ ತಾಲ್ಲೂಕಿನ ಬಂಡೆಗುಡ್ಡ ತಾಂಡಾದ ಪ್ರಕಾಶ ಹಾಗೂ ಹಂಪಮ್ಮ ದಂಪತಿ ಮಗು ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಗುಳೆ ಹೊರಟಿದ್ದರು. ಇದೇ ರೈಲಿನಲ್ಲಿ ಕಲಬುರಗಿ ಸಮೀಪದ ನಾಗನಹಳ್ಳಿಯ ಆಟೊ ಡ್ರೈವರ್ ರೂಪೇಶ ಹಾಗೂ ಕುಸಮ ದಂಪತಿ ಧರ್ಮಾವರಂಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಂದರ್ಭದಲ್ಲಿ ರೂಪೇಶ ದಂಪತಿ ಪ್ರಕಾಶ ದಂಪತಿಯನ್ನು ಪರಿಚಯಿಸಿಕೊಂಡಿದ್ದಾರೆ. ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ತಮಗೆ ಮಕ್ಕಳಿಲ್ಲ ಯಾರಾದರೂ ದತ್ತು ಕೊಡುವುದಾದರೆ ತಿಳಿಸಿ ಎಂದು ಹೇಳಿ ಅವರಿಗೆ ತಮ್ಮ ಮೊಬೈಲ್ ನಂಬರ್ ಅನ್ನು ಸಹ ಕೊಟ್ಟಿದ್ದಾರೆ.
ರಾತ್ರಿ ಮಲಗುವಾಗ ಮಗುವಿಗೆ ಬಿಸ್ಕತ್ ಕೊಟ್ಟಿದ್ದಾರೆ. ಮಗುವಿನ ತಂದೆ–ತಾಯಿ ನಿದ್ರೆಗೆ ಜಾರುತ್ತಿದ್ದಂತೆ ಮಗುವನ್ನು ಎತ್ತಿಕೊಂಡು ಅನಂತಪುರ ರೈಲು ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡ ಪ್ರಕಾಶ ದಂಪತಿ ತಕ್ಷಣ ಅನಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್‌ಪಿಐ ಪೊಲೀಸರು ಶೋಧ ಕಾರ್ಯ ಶುರು ಮಾಡಿ ರಾಯಚೂರು ಹಾಗೂ ಧರ್ಮಾವರಂ ಪೊಲೀಸರಿಗೂ ಮಾಹಿತಿ ಮುಟ್ಟಿಸಿದ್ದಾರೆ.
ಆರೋಪಿಗಳು ಅನಂತಪುರ ರೈಲು ನಿಲ್ದಾಣದಿಂದ ಮಗುವನ್ನು ಬಸ್‌ನಲ್ಲಿ ನೇರವಾಗಿ ಮಂತ್ರಾಲಯಕ್ಕೆ ಕರೆ ತಂದು ಕೂದಲು ತೆಗೆಸಿದ್ದಾರೆ. ನಂತರ ಬಸ್‌ನಲ್ಲಿ ರಾಯಚೂರಿಗೆ ಬಂದಿದ್ದಾರೆ. ಇದೇ ಅವಧಿಯಲ್ಲಿ ಪೊಲೀಸರು ಆರೋಪಿಗಳ ಮೊಬೈಲ್ ಟ್ರೇಸ್ ಮಾಡಿದಾಗ ರಾಯಚೂರು ಬಸ್ ನಿಲ್ದಾಣದಲ್ಲಿರುವುದು ಗೊತ್ತಾಗಿದೆ. ರಾಯಚೂರು ಬಸ್ ನಿಲ್ದಾಣದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಕೈಗೆ ಸಿಕ್ಕಿಬಿದ್ದಿದ್ದಾರೆ.
ಮದುವೆಯಾಗಿ 22 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಮಗುವನ್ನು ಕದ್ದಿರುವುದಾಗಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ರಾಯಚೂರು ಪೊಲೀಸರು, ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್‌ಲೈನ್ ಸಮನ್ವಯದಿಂದಾಗಿ ಸಕಾಲದಲ್ಲಿ ಮಗುವನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಮಗುವನ್ನು ಪಾಲಕರ ಸುಪರ್ದಿಗೆ ಒಪ್ಪಿಸಲು ಸಾಧ್ಯವಾಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.