ಸೋಮವಾರ, ಮೇ 23, 2022
27 °C
ಮಹಿಳೆಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 6ನೇ ದಿನಕ್ಕೆ

ಅಕ್ರಮ ಮದ್ಯ ಮಾರಾಟ ತಡೆಗೆ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಹೈಕೋರ್ಟ್‌ ಆದೇಶ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯಿಂದ ಮಹಿಳೆಯರು ಸೋಮವಾರ ಪತ್ರ ಚಳವಳಿ ನಡೆಸಿದರು.

ಧರಣಿ ನಡೆಸುತ್ತಿರುವ ಸ್ಥಳ ಜಿಲ್ಲಾ ಕ್ರೀಡಾಂಗಣದಿಂದ ನಗರಸಭೆ ಪಕ್ಕದ ಕೇಂದ್ರ ಅಂಚೆಕಚೇರಿವವರೆಗೂ ಮೆರವಣಿಗೆ ನಡೆಸಿ, ಬೇಡಿಕೆಗಳನ್ನು ಒಳಗೊಂಡ ಪತ್ರಗಳನ್ನು ಸರದಿಯಲ್ಲಿ ಅಂಚೆ ಪೆಟ್ಟಿಗೆಗೆ ಹಾಕಿದರು.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಹಗಲಿರುಳು ಧರಣಿ ಮುಂದುವರಿದಿದ್ದು, ಸೋಮವಾರ 5ನೇ ಪೂರ್ಣಗೊಂಡಿದೆ. ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವವರೆಗೂ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

‘ಅಕ್ರಮ ಮದ್ಯದ ವಿರುದ್ಧ ರಾಯಚೂರಿನಲ್ಲಿ ನಡೆಯುವ ಹೋರಾಟ ಐತಿಹಾಸಿಕ. ಈ ಹಿಂದೆಯೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಧರಣಿ ಮಾಡಿದ್ದರು. ಈಗಲೂ ರಾಜ್ಯ ಸರ್ಕಾರ ಮಾತುಕತೆಗೆ ಆಹ್ವಾನಿಸದಿದ್ದರೆ, ರಾಜ್ಯದೆಲ್ಲೆಡೆಯಿಂದ ಮಹಿಳೆಯರು ರಾಯಚೂರಿನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಲಿದ್ದಾರೆ’ ಎಂದು ಮದ್ಯ ನಿಷೇಧ ಆಂದೋಲನದ ವಿದ್ಯಾ ಪಾಟೀಲ ಹೇಳಿದರು.

ರಾಜ್ಯದ 11 ಜಿಲ್ಲೆಗಳ ಯಾವ ಗ್ರಾಮಗಳಲ್ಲಿ ಅಕ್ರಮ ಮದ್ಯೆ ಮಾರಾಟ ನಡೆಯುತ್ತಿದೆ. ಯಾರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಯಾ ಜಿಲ್ಲಾಡಳಿತಗಳಿಗೆ ಒದಗಿಸಲಾಗಿದೆ. ಅದರಂತೆ ಕೂಡಲೇ ಕಾರ್ಯಕ್ರಪವೃತ್ತರಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಧರಣಿ ನಿರತ ಮಹಿಳಾ ನಿಯೋಗದೊಂದಿಗೆ ಚರ್ಚಿಸಬೇಕು ಎಂದರು.

ಉದಯ, ಮೋಕ್ಷಮ್ಮ, ವಿರುಪಮ್ಮ, ಗುರುರಾಜ, ಎಂ.ಆರ್‌.ಭೇರಿ, ಪದ್ಮಾ, ಕೆ.ಜಿ.ವೀರೇಶ, ಬಸವರಾಜ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು