ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಆದ್ಯತೆಯಿಂದ ಶಿಕ್ಷಣ ನೀಡಿ

ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಿಸಿ ಡಾ.ಬಿ.ಸಿ.ಸತೀಶ ಸಲಹೆ
Last Updated 23 ಸೆಪ್ಟೆಂಬರ್ 2021, 12:39 IST
ಅಕ್ಷರ ಗಾತ್ರ

ರಾಯಚೂರು: ಪೌರಕಾರ್ಮಿಕರು ಸರ್ಕಾರದ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಈ ವೃತ್ತಿ ರವಾನಿಸದೇ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಗೌರವಾನ್ವಿತ ಬದುಕು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ನೀಡಿದರು.

ನಗರದ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಗುರುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ಸ್ವಚ್ಛತೆಗೆ ಶ್ರಮ ವಹಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ನಿಷ್ಕಾಳಜಿ ವಹಿಸಬಾರದು. ಪೌರ ಕಾರ್ಮಿಕರು ಆರೋಗ್ಯವಂತರಾಗಿದ್ದರೆ ಸಾರ್ವಜನಿಕರು ಆರೋಗ್ಯವಾಗಿರಲು ಸಾಧ್ಯ. ಪೌರಕಾರ್ಮಿಕರಿಗಾಗಿ ಶೀಘ್ರವೇ ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು ಎಂದರು.

ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. 371–ಜೆ ಹಾಗೂ ಇತರೆ ಮೀಸಲಾತಿಯನ್ನು ಸದುಪಯೋಗ ಮಾಡಿಕೊಂಡು ಉತ್ತಮ ಶಿಕ್ಷಣ ನೀಡಿ ದೊಡ್ಡ ಸ್ಥಾನಕ್ಕೆ ಬೆಳೆಸಬೇಕು. ಸಸಿಕಾಂತ್ ಸಿಂಥಿಲ್ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಗರಸಭೆ ಸ್ವಚ್ಛತೆ ನಿರ್ವಹಣೆಯಲ್ಲಿ ರಾಜ್ಯದ ಪ್ರಥಮ ಸ್ಥಾನ ಪಡೆದು ಮಾದರಿಯಾಗಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ. ಪುನಃ ಪ್ರಥಮ ಸ್ಥಾನಕ್ಕೆ ಬರಲು ಶ್ರಮಿಸಬೇಕು. ಸ್ವಚ್ಛ ಹಾಗೂ ದೂಳುಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ನಗರಸಭೆಯೂ ಸ್ವಚ್ಛತಾ ನಿರ್ವಹಣೆಯಲ್ಲಿ ಎಡವಿದ್ದು, ನಗರಸಭೆ ಸದಸ್ಯರು ಹಾಗೂ ಆಡಳಿತ ಅಧಿಕಾರಿಗಳು ಆತ್ಮವಲೋಕನ ಮಾಡಿಕೊಳ್ಳಬೇಕು. ಸದಸ್ಯರು ಎಡವಿದಾಗ ಅಧಿಕಾರಿಗಳು, ಸಿಬ್ಬಂದಿ ಎಚ್ಚರವಹಿಸಬೇಕು. ಸಮರ್ಪಣಾ, ಕ್ರಿಯಾಶೀಲ ಹಾಗೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಮೊದಲ ಸ್ವಚ್ಛತೆಯಲ್ಲಿ ಅಗ್ರ ಸ್ಥಾನ ಪಡೆಯಬಹುದು ಎಂದು ಹೇಳಿದರು.

ಸಫಾಯಿ ಕರ್ಮಚಾರಿಗಳ ಸಂಘದ ರಾಜ್ಯಾಧ್ಯಕ್ಷ ಭಾಸ್ಕರ್ ಬಾಬು ಮಾತನಾಡಿ, ಪೌರ ಕಾರ್ಮಿಕರು ಹಾಗೂ ಸಫಾಯಿ ಕರ್ಮಾಚಾರಿಗಳಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆಯಲ್ಲಿ ದಿನಗೂಲಿ, ಗುತ್ತಿಗೆ ನೌಕರರಿಗೆ ಕಾಯಂಗೊಳಿಸುವ ಆದೇಶ ಪಾಲನೆ ಮಾಡಬೇಕು. ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನದಂದು ₹10 ಸಾವಿರ ಪ್ರೋತ್ಸಾಹ ಧನ ನೀಡಬೇಕು. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಪೌರಕಾರ್ಮಿಕ ದಿನಾಚರಣೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಈ ಬಗ್ಗೆ ಗಮಹರಿಸಬೇಕು ಎಂದು ಮನವಿ ಮಾಡಿದರು.

ಭಾರತೀಯ ರೆಡಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದರ್ ಕೋವಿಡ್ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪಿ. ಶಿವಪ್ಪ, ರಾಮಸ್ವಾಮಿ, ಲಕ್ಷ್ಮಣ, ಮಹಮ್ಮದ್ ರಫಿ, ಅಮರೇಶಮ್ಮ ಸೇರಿದಂತೆ ಕೆಲವು ಪೌರ ಕಾರ್ಮಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT