ಶನಿವಾರ, ಆಗಸ್ಟ್ 13, 2022
25 °C

‘ವಿದ್ಯುತ್ ದರ ಏರಿಕೆ ನಿರ್ಧಾರ ಹಿಂಪಡೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ವಿದ್ಯುತ್ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನ ಖಂಡನೀಯ. ಕೋವಿಡ್‌ನಿಂದ ಅಪಾರ ಪ್ರಮಾಣದ ಸಾವು ನೋವು ಉಂಟಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ತಮ್ಮ ದಿನಗಳಿಕೆ ಇಲ್ಲದೆ ಸಂಸಾರ ನಡೆಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದೆಡೆ ಪೆಟ್ರೋಲ್, ಡೀಸೆಲ್‌ಗಳ ಬೆಲೆ ನಿರಂತರವಾಗಿ ಹೆಚ್ಚಿಸಿದ್ದಲ್ಲದೇ ವಿದ್ಯುತ್ ದರ‌ ಹೆಚ್ಚಿಸಿರುವುದು ಸರಿಯಲ್ಲ ಎಂದರು.

ಕಳೆದ ವರ್ಷ ನವೆಂಬರ್‌ನಲ್ಲಿ  ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಿಸಲಾಗಿದೆ. ಈಗ ಪುನಃ 30 ಪೈಸೆ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಜನವಿರೋಧಿ ವಿದ್ಯುತ್ ದರ ಏರಿಕೆಯ ತೀರ್ಮಾನ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ, ವೀರೇಶ ಎನ್.ಎಸ್.ಚನ್ನಬಸವ ಜಾನೇಕಲ್, ಅಣ್ಣಪ್ಪ, ಮಲ್ಲನಗೌಡ, ಪೀರ್ ಸಾಬ್, ಕಾರ್ತಿಕ್  ಇದ್ದರು.

ಕರ್ನಾಟಕ ರಕ್ಷಣಾ ಸೇನೆ: ಕೋವಿಡ್ ಆರ್ಥಿಕ ಸಂಕಷ್ಟದ ಮಧ್ಯೆ ವಿದ್ಯುತ್ ದರ ಏರಿಕೆ ಸರಿಯಲ್ಲ ಎಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕೋವಿಡ್ ಹಾಗೂ ಲಾಕ್ಡೌನ್ ಪರಿಣಾಮ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದೆ. ಅಲ್ಲದೇ ವಾಣಿಜ್ಯ, ವ್ಯಾಪಾರ ನೆಲಕಚ್ಚಿದೆ. ಇಂತಹ ಸಂಕಷ್ಟದ ನಡುವೆ ವಿದ್ಯುತ್ ದರ ಏರಿಕೆ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.

ಕೂಡಲೇ ವಿದ್ಯುತ್ ದರ ಏರಿಕೆ ಆಯೋಗದ ಆಜ್ಞೆ ತಡೆ ಹಿಡಿಯಬೇಕು ಹಾಗೂ ಎಸ್ಕಾಂಗಳಿಗೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.    

ಸುವರ್ಣಾ ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಸಾದಿಕ್ ಖಾನ್, ರಾಮು ಹೊಸೂರು, ಜಿಲಾನ್ ರಝಾ, ಸಂಗಯ್ಯ, ಶೇಖ್ ನಾಸೀರ್, ಶಿವು ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು