ಸೋಮವಾರ, ಜನವರಿ 24, 2022
21 °C
ಕರ್ನಾಟಕ ರಾಜ್ಯ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪ್ರತಿಭಟನೆ

ರಾಯಚೂರು: ಹಂಸಲೇಖ ವಿರುದ್ಧ ಅಪಪ್ರಚಾರ; ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಕಿಲಾರಹಟ್ಟಿ ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಹಂಸಲೇಖ ಅವರ ಹೇಳಿಕೆಯನ್ನು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ಬೆಂಬಲಿಸಿದ್ದು, ಅವರ ವ್ಯಕ್ತಿತ್ವ ಹರಣ ಮಾಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಸೌಹರ್ದಕ್ಕೆ ಶ್ರಮಿಸಿದ ಗೌರಿ ಲಂಕೇಶ್ ಹಾಗೂ ಎಂ.ಎಂ ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿದೆ. ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆ ಆರೋಪಿಗಳಿಗೆ ಸಹಕಾರ ನೀಡುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ದೂರಿದರು.

ಸಮಾಜದ ಪರಿವರ್ತನೆ ವಿಚಾರ ಬಿತ್ತುವ ಕೆ.ಎಸ್ ಭಗವಾನ್, ಸಿ.ಎಸ್.ದ್ವಾರಕನಾಥ ಅವರ ಸಾಲಿಗೆ ಹಂಸಲೇಖ ಅವರು ಸೇರ್ಪಡೆಯಾಗಿದ್ದಾರೆ. ಮತೀಯ ಗೂಂಡಾಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಕಿಲಾರಹಟ್ಟಿ ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸದೇ ಆರೋಪಿಗಳನ್ನು ಬಂಧಿಸಿಲ್ಲ. ಸಂತ್ರಸ್ತೆಯ ತಂದೆಯನ್ನು ಗ್ರಾಮದ ಮೇಲ್ಜಾತಿಯವರು ಕಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯ ನಡೆಸಿದ್ದಾರೆ. ಇಂಥ ಘಟನೆಗಳು ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೂಡಲೇ ಹಂಸಲೇಖ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವವರನ್ನು ಬಂಧಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಮುಖಂಡ ಎಂ.ಆರ್.ಭೇರಿ, ಎಸ್. ಮಾರೆಪ್ಪ ವಕೀಲ, ಆಂಜಿನಯ್ಯ ಕುರುಬದೊಡ್ಡಿ, ಖಾಜಾ ಅಸ್ಲಂ ಅಹ್ಮದ್, ಕೆ.ಜಿ.ವೀರೇಶ, ಮಾರೆಪ್ಪ ಹರವಿ, ಗೋಪಾಲ ರಾಂಪೂರ, ಅಬ್ರಾಹಂ, ಕೆ.ಶ್ರೀನಿವಾಸ ಕೊಪ್ಪರ್, ರಾಜು ಬೊಮ್ಮನಾಳ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು