ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಿದೆ ನಗರಸಭೆ ಕಚೇರಿ ಕಟ್ಟಡ ಕಾಮಗಾರಿ!

ಅಪೂರ್ಣಾವಸ್ಥೆಯಲ್ಲಿರುವ ಕಚೇರಿ ಕೋಣೆಗಳಲ್ಲಿಯೇ ಸಿಬ್ಬಂದಿ ಕಾರ್ಯನಿರ್ವಹಣೆ
Last Updated 10 ಜುಲೈ 2019, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಎಂಟು ವರ್ಷಗಳಾಗಿದ್ದು, ಇನ್ನೂ ಕೆಲಸ ಪೂರ್ಣಗೊಳಿಸಿಲ್ಲ!

ಮೊದಲ ಮಹಡಿಯಲ್ಲಿ ಕೆಲವು ಕೋಣೆಗಳು ಸುಸಜ್ಜಿತವಾಗಿರುವುದನ್ನು ಹೊರತುಪಡಿಸಿದರೆ, ಇಡೀ ಕಟ್ಟಡ ಅಪೂರ್ಣ ಸ್ಥಿತಿಯಲ್ಲಿಯೇ ಉಳಿದುಕೊಂಡಿದೆ. ಅಲ್ಲಲ್ಲಿ ಗೋಡೆಗಳಿಗೆ ಸಿಮೆಂಟ್‌ ಹಾಕಲಾಗಿದೆ. ಹಳೇ ಗೋಡೆಗಳನ್ನು ಒಡೆದುಹಾಕಿದ ಅವಶೇಷವನ್ನು ಅಲ್ಲಲ್ಲಿ ಮೂಲೆಗಳಲ್ಲಿ ಸಂಗ್ರಹಿಸಲಾಗಿದ್ದು, ಕಚೇರಿ ಕೆಲಸಕ್ಕೆ ಬರುವ ಜನರು ಅವಶೇಷದ ಮೇಲೆಯೇ ಗುಟ್ಕಾ ತಿಂದು ಉಗಿಯುತ್ತಿದ್ದಾರೆ.

₹199 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆ ನಂತರ, ಕಟ್ಟಡದ ಅಂದಾಜು ವೆಚ್ಚವನ್ನು ₹1.65 ಕೋಟಿಗೆ ಇಳಿಕೆ ಮಾಡಲಾಯಿತು. ಯಾವುದೇ ಟೆಂಡರ್‌ ಆಹ್ವಾನಿಸದೆ ಕೆಆರ್‌ಐಡಿಎಲ್‌ ಏಜೆನ್ಸಿಗೆ ಕಾಮಗಾರಿ ವಹಿಸಲಾಗಿದೆ ಎನ್ನುವ ಆರೋಪ ಕೇಳಿಬಂತು. ಇದರಿಂದಾಗಿ ಕೆಲವು ತಿಂಗಳು ಕಾಮಗಾರಿ ಸ್ಥಗಿತವಾಗಿತ್ತು. ಆದರೆ, ಈಗ ಕಾಮಗಾರಿ ಆರಂಭಿಸಿದಂತೆ ಕಂಡು ಬರುತ್ತಿದೆ. ಬೆರಳೆಣಿಕೆಯ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ತುಂಬಾ ನಿಧಾನವಾಗಿ ಮುಂದುವರಿದಿದೆ.

ರಾಜ್ಯದಲ್ಲಿ 2011 ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳನ್ನು ನೆರವೇರಿಸಲಾಗಿತ್ತು. 2011 ರ ಜುಲೈನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಶ್ರೀರಾಮುಲು ಅವರು ಶಂಕುಸ್ಥಾಪನೆ ಮಾಡಿದ್ದರು. 2013 ರ ಫೆಬ್ರುವರಿಯಲ್ಲಿ ಕಚೇರಿ ಕಟ್ಟಡವನ್ನು ಪೌರಾಡಳಿತ ಸಚಿವರಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟನೆ ನೆರವೇರಿಸಿದ್ದರು. ಅಪೂರ್ಣ ಸ್ಥಿತಿಯಲ್ಲಿ ಉದ್ಘಾಟನೆಯಾದ ಕಟ್ಟಡವು, ಇವರೆಗೂ ಪೂರ್ಣಗೊಳ್ಳುವ ಸ್ಥಿತಿಗೆ ತಲುಪಿಲ್ಲ!

ಎರಡನೇ ಅಂತಸ್ತಿನಲ್ಲಿ ಕಚೇರಿ ಕೋಣೆಗಳನ್ನು ಇನ್ನೂ ನಿರ್ಮಿಸಲಾಗುತ್ತಿದೆ. ಲಿಫ್ಟ್‌ ಕೂಡಾ ಆಗಬೇಕಿದೆ. ಕಟ್ಟಡಕ್ಕೆ ಬಣ್ಣ ಬಳಿಯದೆ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಆನಂತರದಲ್ಲಿ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕೆನ್ನುವ ಜವಾಬ್ದಾರಿಯನ್ನು ನಗರಸಭೆ ಮಾಡಿಲ್ಲ. ವಾಹನಗಳ ನಿಲುಗಡೆಗೆ ನೆಲಮಹಡಿಯಲ್ಲಿ ಸ್ಥಳಾವಕಾಶ ನೀಡಲಾಗಿದೆ. ಆದರೆ, ಸುಸಜ್ಜಿತ ವ್ಯವಸ್ಥೆ ಇಲ್ಲ. ಹೀಗಾಗಿ ಬೈಕ್‌ ಮತ್ತು ಕಾರುಗಳು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಕಚೇರಿಯೊಳಗೆ ಜನರು ಹೋಗುವುದಕ್ಕೆ ಮತ್ತು ಹೊರ ಬರುವುದಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

‘ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರವು ಬೇರೆ ತಾಲ್ಲೂಕು ಕೇಂದ್ರಗಳಿಗೆ ಮಾದರಿಯಾಗಬೇಕಿತ್ತು. ಆದರೆ, ಸರ್ಕಾರಿ ಅಧಿಕಾರಿಗಳು, ಎಂಜಿನಿಯರುಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಗಮನ ಹರಿಸುತ್ತಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಅನುದಾನವು ಸರಿಯಾಗಿ ಬಳಸಿಕೊಂಡು ಕಾಮಗಾರಿ ಮಾಡಿಸುತ್ತಿಲ್ಲ. ಸಾರ್ವಜನಿಕರು ನಿರ್ಮಿಸಿಕೊಳ್ಳುವ ಕಟ್ಟಡಗಳಿಗೆ ಅನುಮತಿ ನೀಡುವ ಕೆಲಸ ಮಾಡುವ ನಗರಸಭೆಯು, ತಾನೇ ಸಂಕಷ್ಟದಲ್ಲಿ ಉಳಿದುಕೊಳ್ಳುವಂತಾಗಿದೆ’ ಎನ್ನುವುದು ಸ್ಟೇಷನ್‌ ರೋಡ್‌ ನಿವಾಸಿ ಸದಾಶಿವಯ್ಯ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT