ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳನ್ನೆಲ್ಲ ತಕ್ಷಣ ಪರಿಶೀಲಿಸಿ; ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌

Last Updated 21 ಜೂನ್ 2021, 12:37 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ‘ಪ್ರಜಾವಾಣಿ’ಯಿಂದ ಸೋಮವಾರ ಆಯೋಜಿಸಿದ್ದ ‘ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋವಿಡ್‌ ಲಸಿಕೆ, ಉದ್ಯೋಗ ಖಾತರಿ ಹಾಗೂ ಮೂಲ ಸೌಕರ್ಯಗಳ ಕೊರತೆ ಕುರಿತು ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಅವರು ಸಮಾಧಾನದಿಂದ ಸಮರ್ಪಕ ಉತ್ತರ ನೀಡಿದರು. ಸಮಸ್ಯೆಗಳನ್ನು ನೋಟ್‌ ಮಾಡಿಕೊಂಡು, ಕ್ರಮ ಜರುಗಿಸುವ ಭರವಸೆ ನೀಡಿದರು. ಜನರು ಕೇಳಿದ ಪ್ರಶ್ನೆಗಳು ಹಾಗೂ ಉತ್ತರ ಇಂತಿವೆ..

* ನಿಂಗಪ್ಪ (ಡೊಣಮರಡಿ, ತಾ:ಮಸ್ಕಿ)– ನಮ್ಮೂರಲ್ಲಿ ಕೋವಿಡ್‌ ಲಸಿಕೆ ಕೊಡುತ್ತಿಲ್ಲ. ಪಂಚಾಯಿತಿ ಮಟ್ಟದಲ್ಲಿ ಮಾತ್ರ ಕೊಡುತ್ತಿದ್ದಾರೆ. ನಮ್ಮೂರಿನಲ್ಲೇ ಲಸಿಕೆ ಕೊಡುವಂತೆ ಮಾಡಬೇಕು.

*ನಮ್ಮ ಜಿಲ್ಲೆಯಲ್ಲಿ ಮಾತ್ರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಸಿಕೆ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿ ಗ್ರಾಮಗಳು ದೊಡ್ಡದಾಗಿ ಇರುವುದರಿಂದ ಮೊದಲ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೂ ಹೋಗುವುದಕ್ಕೆ ಸೂಚನೆ ನೀಡಲಾಗಿದೆ. ನರೇಗಾ ಕಾಮಗಾರಿ ಮಾಡುತ್ತಿರುವವರಿಗೆಲ್ಲ ಲಸಿಕೆ ಕೊಡುವ ಅಭಿಯಾನ ನಡೆಯುತ್ತಿದೆ.

* ವೆಂಕಟೇಶ ಶಂಕ್ರಿ (ಕವಿತಾಳ, ತಾ:ಸಿರವಾರ)– ಬಲ್ಲಟಗಿ, ಮಲ್ಲಟ ಹಾಗೂ ಹಣಗಿ ಗ್ರಾಮ ಪಂಚಾಯಿತಿಯಿಂದ ಲಸಿಕೆ ಸರಿಯಾಗಿ ತಲುಪಿಸುತ್ತಿಲ್ಲ.

* ಲಸಿಕೆ ನೀಡಲು ಪ್ರತಿ ಗ್ರಾಮ ಪಂಚಾಯಿತಿಗೂ ಗುರಿ ನೀಡಲಾಗುತ್ತಿದೆ. ಸೋಮವಾರದಿಂದ ಲಸಿಕೆ ಮೇಳ ಆರಂಭಿಸಲಾಗಿದೆ. ಪ್ರತಿ ತಾಲ್ಲೂಕಿಗೆ 5 ರಿಂದ 6 ಸಾವಿರ ಲಸಿಕೆ ಕಳುಹಿಸಲಾಗಿದೆ. ಜೂನ್‌ 21 ರಂದು ಒಂದೇ ದಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 100 ಜನರಿಗೆ ಲಸಿಕೆ ನೀಡುವಂತೆ ತಿಳಿಸಲಾಗಿದೆ. ನೀವು ತಿಳಿಸಿದ ಪಂಚಾಯಿತಿಗಳಲ್ಲಿ ಚೆಕ್‌ ಮಾಡುತ್ತೇನೆ.

* ಅಮರೇಶ ದಿನ್ನಿ (ಕವಿತಾಳ, ತಾ:ಸಿರವಾರ)– ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂದು ನೀವು ಹೇಳುತ್ತೀರಿ. ಆದರೆ ಲಸಿಕೆ ಪಡೆಯದ ಕುಟುಂಬದ ಪಡಿತರ ಕಡಿತ ಮಾಡುವುದು ಸರಿಯೇ?

* ಲಸಿಕೆ ಪಡೆಯಬೇಕು ಎಂದು ಜನಜಾಗೃತಿ ನಿರಂತರ ಮಾಡುತ್ತಾ ಬರಲಾಗಿದೆ. ರಿಮ್ಸ್‌ನಲ್ಲಿ ದಾಖಲಾದವರಲ್ಲಿ ಶೇ 99 ರಷ್ಟು ರೋಗಿಗಳು ಲಸಿಕೆ ಪಡೆದಿರಲಿಲ್ಲ. ಈ ಕಾರಣಕ್ಕಾಗಿ ಲಸಿಕೆ ಕಡ್ಡಾಯವಾಗಿ ಪಡೆಯುವಂತೆ ತಿಳಿಸಲಾಗುತ್ತಿದೆ. ಪಡಿತರ ಕಡಿತ ಮಾಡುವುದಿಲ್ಲ.

* ಶಿವಮೂರ್ತಿ (ನೇತಾಜಿನಗರ, ರಾಯಚೂರು)– ಕೋವಿಡ್‌ ನಿಯಂತ್ರಿಸಲು ಚೆನ್ನಾಗಿ ಕೆಲಸ ಮಾಡಿದ್ದೀರಿ ಧನ್ಯವಾದಗಳು. 18 ವರ್ಷದೊಳಗಿನವರಿಗೆ ಲಸಿಕೆ ಯಾವಾಗ ಕೊಡುತ್ತೀರಿ?

* ನೀವು ಸಹಕಾರ ನೀಡಿದ್ದಕ್ಕೆ ಕೋವಿಡ್‌ ನಿಯಂತ್ರಣ ಸಾಧ್ಯವಾಗಿದೆ. 18 ವರ್ಷದೊಳಗಿನವರಿಗೆ ಲಸಿಕೆ ನೀಡುವುದು ಇನ್ನೂ ವೈದ್ಯಕೀಯ ಪ್ರಯೋಗದ ಹಂತದಲ್ಲಿದೆ. ಇನ್ನೂ ಅಧಿಕೃತ ಅನುಮೋದನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಲಸಿಕೆ ಬರಲಿದೆ.

* ವೆಂಕನಗೌಡ (ಶಕ್ತಿನಗರ, ತಾ: ರಾಯಚೂರು)– ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದರೂ ಆರ್‌ಟಿಪಿಎಸ್‌ನಲ್ಲಿ ಉದ್ಯೋಗಿಗಳು ಬರುವುದಕ್ಕೆ ನಿರ್ಬಂಧನೆ ಮಾಡುತ್ತಿಲ್ಲ.

* ವಿದ್ಯುತ್‌ ಉತ್ಪಾದನೆ ಎನ್ನುವುದು ತುರ್ತು ವಿಭಾಗದಲ್ಲಿದೆ. ಹೀಗಾಗಿ ಉದ್ಯೋಗಿಗಳು ಸೇರುವುದನ್ನು ನಿರ್ಬಂಧಿಸಲು ಸೂಚಿಸಿಲ್ಲ. ಈಗ ವಿದ್ಯುತ್‌ ಘಟಕಗಳು ಬಂದ್‌ ಆಗಿರುವುದರಿಂದ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಇಡಿ ಅವರೊಂದಿಗೆ ಚರ್ಚಿಸುತ್ತೇನೆ. ಕೋವಿಡ್‌ ದೃಢವಾದ ಉದ್ಯೋಗಿಗಳು ಕೂಡಲೇ ಗೇಸ್ಟ್‌ಹೌಸ್‌ನಲ್ಲಿ ಆರಂಭಿಸಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗುವಂತೆ ನೀವು ಜಾಗೃತಿ ಮೂಡಿಸಬೇಕು.

* ತಾಯಪ್ಪ (ಶಿವಂಗಿ, ತಾ:ದೇವದುರ್ಗ)– ಉದ್ಯೋಗ ಖಾತರಿ ಕೆಲಸಗಳನ್ನು ಯಂತ್ರಗಳಿಂದ ಮಾಡುತ್ತಿದ್ದು, ಪ್ರಭಾವಿಗಳಿಗೆ ಮಾತ್ರ ಉದ್ಯೋಗ ಕೊಡುತ್ತಾರೆ.

* ಚೆಕ್‌ಡ್ಯಾಂ, ಸಿಸಿ ರಸ್ತೆ ಸೇರಿ ಕೆಲವು ಕೆಲಸಗಳಿಗೆ ಮಾತ್ರ ಯಂತ್ರ ಬಳಕೆ ಮಾಡಲು ಅವಕಾಶವಿದೆ. ಕೃಷಿ ಹೊಂಡಕ್ಕೆ ಯಂತ್ರ ಬಳಸಬಾರದು. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.

*ರವಿಕುಮಾರ್‌ (ಕಲವಲದೊಡ್ಡಿ ಗ್ರಾಮ, ರಾ;ರಾಯಚೂರು)– ಗ್ರಾಮದಲ್ಲಿ ಎರಡು ಸಣ್ಣ ಟ್ಯಾಂಕ್‌ಗಳಿದ್ದು, ನೀರಿನ ಸಮಸ್ಯೆ ಪರಿಹಾರವಾಗುತ್ತಿಲ್ಲ.

* ಪ್ರತಿ ಮನೆಮನೆಗೂ ನೀರು ತಲುಪಿಸಲು ಜಲಜೀವನ್‌ ಮಿಷನ್‌ ಹಾಗೂ ಜಲಧಾರೆ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಾಗಿವೆ. ಆದಷ್ಟು ಬೇಗನೆ ಎಲ್ಲ ಗ್ರಾಮಗಳಲ್ಲೂ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

* ತಿಮ್ಮಪ್ಪ (ಲಿಂಗದಳ್ಳಿ, ತಾ:ದೇವದುರ್ಗ)– ಗ್ರಾಮದ ರಸ್ತೆ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ಮಾಡಿದ್ದರು. ಇದುವರೆಗೂ ಕಾಮಗಾರಿ ಆಗಿಲ್ಲ. ರಸ್ತೆ ತುಂಬಾ ಹಾಳಾಗಿದೆ. ಉದ್ಯೋಗ ಖಾತರಿ ತಪ್ಪಿಹೋಗಿದೆ.

* ಲಾಕ್‌ಡೌನ್‌ ಕಾರಣದಿಂದ ಸರ್ಕಾರದ ಅನೇಕ ಕೆಲಸಗಳು ನಿಂತುಹೋಗಿವೆ. ಈಗ ಸಡಿಲಿಕೆ ಮಾಡಲಾಗುತ್ತಿದ್ದು, ಕಾಮಗಾರಿಗಳು ಶುರುವಾಗಲಿವೆ. ರಸ್ತೆ ಹಾಳಾಗಿರುವುದನ್ನು ಪರಿಶೀಲಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗುವುದು. ಉದ್ಯೋಗ ಖಾತರಿ ಕೈಬಿಟ್ಟು ಹೋಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಲಾಗುತ್ತಿದೆ.


* ಗಂಗಾಧರ (ಫೂಲಬಾವಿ, ತಾ:ಲಿಂಗಸುಗೂರು)– ಗ್ರಾಮಕ್ಕೆ ಬಸ್‌ ಬಿಡುತ್ತಿಲ್ಲ.

* ಸೋಮವಾರ ಮೊದಲ ದಿನ ಸಡಿಲಿಕೆ ಆರಂಭವಾಗಿದೆ. ಪರಿಸ್ಥಿತಿ ಹೀಗೆ ಇದ್ದರೆ, ಹಂತಹಂತವಾಗಿ ಬಸ್‌ಗಳನ್ನೆಲ್ಲ ಶುರು ಮಾಡುತ್ತಾರೆ. ಈಗ 75 ಶೆಡ್ಯುಲ್‌ಗಳಿಗೆ ಮಾತ್ರ ಬಸ್‌ಗಳಿವೆ. ಒಟ್ಟು ಆಸನಗಳಲ್ಲಿ ಶೇ 50 ರಷ್ಟು, ಆಸನಗಳನ್ನು ತುಂಬಿಸಿಕೊಳ್ಳಲು ಅವಕಾಶ ಮಾಡಲಾಗಿದೆ.

* ಶರಣಪ್ಪ ಮರಳಿ (ಸಿಂಧನೂರು)– ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದ ಬಹಳಷ್ಟು ರೈತರಿಗೆ ನಷ್ಟವಾಗಿದೆ. ಕೇಳಿದ ಬೀಜ ಸಿಗುತ್ತಿಲ್ಲ. ಮೀಸಲಾತಿ ಜಾತಿಗೆ ಅಗತ್ಯ ಕೃಷಿಯಂತ್ರಗಳು ಸಿಗುತ್ತಿಲ್ಲ. ಹೊಲಗಳಿಗೆ ರಸ್ತೆಗಳಿಲ್ಲ.

* ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಲು ಮೂರು ತಿಂಗಳು ಸಮಯಾವಕಾಶ ನೀಡಲಾಗಿತ್ತು. ಕೇವಲ 750 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಅವಧಿ ವಿಸ್ತರಿಸಲು ಮತ್ತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮಾರುಕಟ್ಟೆ ದರ ಕಡಿಮೆ ಇದ್ದು, ಭತ್ತ ಸಂಗ್ರಹಿಸಲು ವ್ಯವಸ್ಥೆ ಮಾಡಲು ರೈತರು ಕೋರಿದ್ದರು. ಅದರಂತೆ ಗೋದಾಮು ಒದಗಿಸಲಾಗಿದ್ದು, ಈಗಾಗಲೇ 10 ಸಾವಿರ ಕ್ವಿಂಟಲ್‌ ಇಟ್ಟಿದ್ದಾರೆ. ಬೀಜಗಳು ಯಾವುದು ಸಿಗುತ್ತಿಲ್ಲ ಎಂಬುದನ್ನು ಪರಿಶೀಲಿಸುತ್ತೇನೆ. ನಮ್ಮ ಹೊಲ ನಮ್ಮ ದಾರಿ, ಮತ್ತೆ ತ್ವರಿತಗತಿಯಲ್ಲಿ ಆರಂಭಿಸಲಾಗುವುದು. ಕೃಷಿಯಂತ್ರಗಳ ಬಗ್ಗೆ ಮೀಸಲಾತಿ ಪ್ರಕಾರ ಒದಗಿಸುವ ಬಗ್ಗೆ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ. ಜೋಳ ಖರೀದ ಆಗಿದ್ದ ರೈತರಿಗೆ ಈಗಾಗಲೇ ಹಣ ಆಗಿದೆ. ಆದರೂ ಕೆಲವರಿಗೆ ಹಣ ಏಕೆ ಜಮಾ ಆಗಿಲ್ಲ ಎಂಬುದನ್ನು ಪರಿಶೀಲಿಸಲಾಗುವುದು.

* ಪ್ರಸಾದ ಆಶಾಪೂರ (ರಾಯಚೂರು): ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, 94 ಸಿಸಿ ಅಡಿ ಅರ್ಜಿ ಸಲ್ಲಿಸಿದರೂ ಹಕ್ಕುಪತ್ರ ಕೋಡುತ್ತಿಲ್ಲ.

* ಈಗ ಮತ್ತೆ ಸರ್ಕಾರ 94ಸಿಸಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡುತ್ತಿದೆ. ವಾಸದ ಮನೆ ಇದ್ದರೆ, ಸಕ್ರಮ ಮಾಡಲಾಗುವುದು. ದನದ ಕೊಟ್ಟಿಗೆ ಅಥವಾ ವಾಣಿಜ್ಯ ಉದ್ದೇಶಿತವಾಗಿದ್ದರೆ ಅನುಮತಿ ನೀಡಲಾಗುವುದಿಲ್ಲ. ಮತ್ತೆ ಅರ್ಜಿ ಸಲ್ಲಿಸಿದರೆ, ಕ್ರಮ ವಹಿಸಲಾಗುವುದು

* ನರಸಿಂಹ (ದೇವದುರ್ಗ)– ಪ್ರವಾಸಿಮಂದಿರ ಹತ್ತಿರ ರಾಜಕಾಲುವೆಯು ಪ್ರತಿಮಳೆಗಾಲದಲ್ಲಿ ತುಂಬಿ ಸಮಸ್ಯೆ ಆಗುತ್ತಿದೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.

* ತಹಶೀಲ್ದಾರ್‌ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ಕೊಟ್ಟು ಸ್ವಚ್ಛತೆಗೆ ಕ್ರಮ ವಹಿಸುತ್ತೇನೆ.

* ಆಂಜನೇಯ್ಯ, ವಕೀಲರು (ಅಸ್ಕಿಹಾಳ, ರಾಯಚೂರು)– ಎರಡನೇ ಹಂತದ ಲಸಿಕೆ ಸಿಗುತ್ತಿಲ್ಲ?

* ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಲಾಗುತ್ತಿದೆ. ನಗರ ಮಟ್ಟದಲ್ಲಿ ವಾರ್ಡ್‌ವಾರು ಲಸಿಕೆ ನೀಡಲಾಗುತ್ತಿದೆ. ಅಸ್ಕಿಹಾಳದಲ್ಲಿ ಲಸಿಕೆ ಬಂದಿಲ್ಲ ಎಂಬುದನ್ನು ಪರಿಶೀಲಿಸುತ್ತೇನೆ.

* ಶಿವಪುತ್ರ (ತುರವಿಹಾಳ, ತಾ: ಸಿಂಧನೂರು)– ಸರ್ಕಾರಿ ಜಮೀನಿದ್ದು, ಅಕ್ರಮ–ಸಕ್ರಮದಲ್ಲಿ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಪ್ರಮಾಣಪತ್ರ ಕೊಡುತ್ತಿಲ್ಲ.

* ಕೂಡಲೇ ಈ ಬಗ್ಗೆ ಪರಿಶೀಲಿಸುತ್ತೇನೆ. ತಕ್ಷಣವೇ ಪ್ರಮಾಣಪತ್ರ ನೀಡುವುದಕ್ಕೆ ತಹಶೀಲ್ದಾರ್‌ ಅವರೊಂದಿಗೆ ಮಾತನಾಡುತ್ತೇನೆ.

* ಅಂಬರೇಶ (ಡೊಣಮರಡಿ, ತಾ:ಮಸ್ಕಿ)– ಗ್ರಾಮದಲ್ಲಿ ಲಸಿಕೆ ಕೊಡುತ್ತಿಲ್ಲ

* ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಲಸಿಕೆ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತೇವೆ.

* ರಾಮಯ್ಯ (ಜವಳಗೇರಾ, ತಾ: ಸಿಂಧನೂರು)– ಅಂಗಡಿಗಳು ಬಂದ್‌ ಆಗಿದ್ದರಿಂದ ಬೀಜ, ಗೊಬ್ಬರ ಖರೀದಿಗೆ ತೊಂದರೆ ಆಗಿದೆ.

* 20 ದಿನಗಳ ಹಿಂದೆಯೇ ಬೀಜ, ಗೊಬ್ಬರ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಸಿಂಧನೂರಿನಲ್ಲಿ ಯಾವ ಮಳಿಗೆ ತೆರೆದಿಲ್ಲ ಎಂಬುದನ್ನು ಚೆಕ್‌ ಮಾಡುತ್ತೇನೆ.

* ನಾಗರಾಜ (ತುರವಿಹಾಳ, ತಾ:ಸಿಂಧನೂರು)– ಕೊರೊನಾ ನಿಯಂತ್ರಣದ ಕೆಲಸ ಚೆನ್ನಾಗಿ ಮಾಡಿದ್ದೀರಿ. ಕೋವಿಡ್‌ನಿಂದ ಮೃತಪಟ್ಟವರಿಗೆ ₹5 ಲಕ್ಷ ಪರಿಹಾರ ಕೊಡಿಸಿ.

* ಸರ್ಕಾರವು ಈಗಾಗಲೇ ಕೋವಿಡ್‌ನಿಂದ ಮೃತಪಟ್ಟವರಿಗೆ ₹1 ಲಕ್ಷ ಪರಿಹಾರ ಘೋಷಿಸಿದೆ. ಆದರೆ, ಇನ್ನೂ ಮಾರ್ಗಸೂಚಿಗಳು ಬಂದಿಲ್ಲ.

* ವೆಂಕಟೇಶನಾಯಕ (ಶಕ್ತಿನಗರ, ರಾಯಚೂರು): ಕೃಷ್ಣಾನದಿಯ ಸೇತುವೆ ಸಂಪೂರ್ಣ ಹಾಳಾಗಿದೆ

* ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ಹೋಗಿದೆ. ನೂತನ ಸೇತುವೆ ನಿರ್ಮಾಣವಾಗುವ ತನಕ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ.

* ವೀರಣ್ಣ ಎಂ. (ರಾಯಚೂರು): 1948–85 ರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ. ಆದರೆ ಜಾಗ ಎಲ್ಲಿದೆ ಎಂಬುದನ್ನು ತೋರಿಸಿಲ್ಲ.

* ನಿಮ್ಮಲ್ಲಿರುವ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಿ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT