ಮಂಗಳವಾರ, ಸೆಪ್ಟೆಂಬರ್ 21, 2021
29 °C
ಶುಲ್ಕ ಸಂಗ್ರಹಕ್ಕೆ ಸಿಮೀತವಾದ ನಗರಾಭಿವೃದ್ಧಿ ಪ್ರಾಧಿಕಾರ

ರಾಯಚೂರು: ಅನುದಾನ ಇದ್ದರೂ ‘ರುಡಾ’ದಿಂದ ಅಭಿವೃದ್ಧಿಯಿಲ್ಲ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರವನ್ನು ಅಭಿವೃದ್ಧಿಗೊಳಿಸುವ ಧ್ಯೆಯೋದ್ದೇಶದೊಂದಿಗೆ ಸ್ಥಾಪಿತವಾಗಿರುವ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ರುಡಾ)ವು ಕಳೆದ 35 ವರ್ಷಗಳಿಂದ ಶುಲ್ಕ ಸಂಗ್ರಹಕ್ಕೆ ಸಿಮೀತವಾಗಿದ್ದು, ಇದುವರೆಗೂ ಯಾವ ಯೋಜನೆಯನ್ನೂ ಪೂರ್ಣಗೊಳಿಸಿಲ್ಲ!

ಮೂರು ತಿಂಗಳು ಹಿಂದೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ವೈ.ಗೋಪಾಲರೆಡ್ಡಿ ಹಾಗೂ ನೂತನ ನಿರ್ದೇಶಕರು ಪ್ರಾಧಿಕಾರದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆ ಇದೀಗ ಮುಂದಾಗಿದ್ದಾರೆ. ಬೆಂಗಳೂರಿನ ಕಚೇರಿಗಳಲ್ಲಿ ವರ್ಷಗಳಿಂದ ಉಳಿದಿರುವ ಕಡತಗಳಿಗೆ ಅನುಮೋದನೆ ಪಡೆಯುವ ಕಾರ್ಯ ಮಾಡುತ್ತಿದ್ದು, ಶೀಘ್ರದಲ್ಲಿಯೇ ಯೋಜಿತ ಕಾಮಗಾರಿಗಳನ್ನೆಲ್ಲ ಅನುಷ್ಠಾನದ ಹಂತಕ್ಕೆ ತರುವ ಆಶಾಭಾವ ಜನರಲ್ಲಿ ಮೂಡಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಈಚೆಗೆ ನಗರಕ್ಕೆ ಭೇಟಿ ನೀಡಿ ಯೋಜನೆ ಜಾರಿಗೊಳಿಸುವ ಜಾಗಗಳಿಗೆ ಭೇಟಿ ನೀಡಿರುವುದು ಇದಕ್ಕೆ ಪೂರಕವಾಗಿದೆ.

ನನೆಗುದಿಗೆ ಬಿದ್ದಿರುವ ಯೋಜನೆಗಳು: ರಾಯಚೂರು ನಗರದಲ್ಲಿ ನಾಲ್ಕು ಉದ್ಯಾನಗಳನ್ನು ಅಭಿವೃದ್ಧಿ ಮಾಡಿಕೊಡುವಂತೆ ಬೆಂಗಳೂರಿನ ದಿ.ನರ್ಸರಿಮೆನ್‌ ಕೋ–ಆಪರೇಟಿವ್‌ ಸೊಸೈಟಿ ಲಿಮಿಟೆಟ್‌ ಅವರಿಗೆ ಒಪ್ಪಿಸಿರುವುದು ಹಾಗೇ ಉಳಿದಿದೆ. ಪ್ರಾಧಿಕಾರಕ್ಕೆ ಸ್ವಂತ ಕಚೇರಿ ನಿರ್ಮಿಸಿಕೊಳ್ಳುವ ಪ್ರಸ್ತಾವನೆ ಬೆಂಗಳೂರಿನಲ್ಲಿಯೇ ಇದೆ. ಪ್ರಾಧಿಕಾರ ಮತ್ತು ಖಾಸಗಿ ಬಡಾವಣೆಗಳಲ್ಲಿ ಲಭ್ಯವಿದ್ಧ 167 ಸಾರ್ವಜನಿಕ ನಿವೇಶನಗಳನ್ನು ಇದುವರೆಗೂ ಹಂಚಿಕೆ ಮಾಡಿಲ್ಲ.

ಕೆಲವು ಯೋಜನೆಗಳಿಗೆ ಅನುಮೋದನೆ ಸಿಕ್ಕಿದ್ದರೂ ಜಾರಿಯಾಗಿಲ್ಲ. ಬೊಳಮಾನದೊಡ್ಡಿ ವಸತಿ ಯೋಜನೆಯಡಿ 188 ನಿವೇಶನಗಳು ಹಂಚಿಕೆಯಾಗಿದ್ದು, 28 ನಿವೇಶನಗಳು ಹಂಚಿಕೆ ಆಗಬೇಕಿದೆ. ಸಿದ್ರಾಂಪೂರ ವಸತಿ ಯೋಜನೆಯಲ್ಲಿ 427 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 225 ನಿವೇಶನಗಳ ಹಂಚಿಕೆ ಬಾಕಿ ಇದೆ. ಆದರೆ, ಈ ವಸತಿ ಯೋಜನೆಗಳಲ್ಲಿ ನಿಯಮಾನುಸಾರ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಕೊಟ್ಟು ಗೃಹ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಮಗ್ರ ಅನುಕೂಲ ಕಲ್ಪಿಸಲಾಗಿಲ್ಲ. ಈ ಬಗ್ಗೆ ಅರ್ಜಿದಾರರು ಪ್ರಾಧಿಕಾರದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.

ಶುಲ್ಕ ಸಂಗ್ರಹ: ನಗರದ ವಿವಿಧ ಕಡೆ ಬಡಾವಣೆಗಳನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಇದುವರೆಗೂ ನಗರಾಭಿವೃದ್ಧಿ ಪ್ರಾಧಿಕಾರವು 728 ನೀಲನಕ್ಷೆಗಳಿಗೆ ಅನುಮೋದನೆ ನೀಡಿದೆ. ಇದಕ್ಕಾಗಿ ವಿವಿಧ ರೀತಿಯ ಶುಲ್ಕ ಸಂಗ್ರಹ ಮಾಡಿರುವುದು ಇನ್ನೂ ಬಳಕೆ ಆಗಿಲ್ಲ. ಸಾಮಾನ್ಯ ಶುಲ್ಕ ₹1.57 ಕೋಟಿ, ಕೊಳೆಗೇರಿ ಶುಲ್ಕ ₹5.43 ಲಕ್ಷ, ಸಿದ್ರಾಂಪುರ ವಸತಿ ಯೋಜನೆ ಅನುಷ್ಠಾನಕ್ಕಾಗಿ ₹4.90 ಲಕ್ಷ, ಬೊಳಮಾನದೊಡ್ಡಿ ವಸತಿ ಯೋಜನೆಗಾಗಿ ₹96 ಲಕ್ಷ, ಕೆರೆ ಪುನರುಜ್ಜೀವನ ಶುಲ್ಕ ₹10.13 ಕೋಟಿ ಹಾಗೂ ಉದ್ಯಾನ ಅಭಿವೃದ್ಧಿ ಶುಲ್ಕ ₹2.28 ಕೋಟಿ ಇದೆ.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ. ಯೋಜನೆ ಮಾಡುವುದರಲ್ಲಿ ಹಿಂದೇ ಬಿದ್ದಿಲ್ಲ. ಆದರೆ, ಅನುಷ್ಠಾನದಲ್ಲಿ ಸಾಧನೆಯಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು