ಶನಿವಾರ, ಅಕ್ಟೋಬರ್ 24, 2020
25 °C
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ

‘ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ನೋಟಿಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಮಾಲೀಕರಿಗೆ ಕೂಡಲೇ ನೋಟಿಸ್‌ ಜಾರಿಗೊಳಿಸಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ ಸೂಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಯಾವುದೇ ಬಡಾವಣೆಗೆ ಅನುಮೋದನೆ ನೀಡುವ ಮೊದಲು ಅಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಕಡ್ಡಾಯ. ಎಂಜಿನಿಯರುಗಳು ಖುದ್ದಾಗಿ ಪರಿಶೀಲಿಸದೆ ಅನುಮೋದಿಸಿದರೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮೇಲಾದರೂ ನಗರವನ್ನು ಸುಂದರಗೊಳಿಸಲು ಮುಂದಾಗಬೇಕಿದೆ ಎಂದು ತಿಳಿಸಿದರು.

ಹೊಸ ಹೊಸ ಬಡಾವಣೆಗಳ ಅಭಿವೃದ್ಧಿಗಾಗಿ ಸಲ್ಲಿಕೆಯಾಗುವ ವಿನ್ಯಾಸಗಳನ್ನು ಕಣ್ಣುಮುಚ್ಚಿ ಅನುಮೋದಿಸಬಾರದು. ನಿಯಮಗಳು ಪಾಲನೆ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸದಸ್ಯ ಎ.ಚಂದ್ರಶೇಖರ್‌ ಮಾತನಾಡಿ, ವಾಹನಗಳ ನಿಲುಗಡೆ ಹಾಗೂ ಹೆಚ್ಚುವರಿ ಜಾಗ ಬಿಡುವ ನಿಯಮಗಳ ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದರು.

ಸದಸ್ಯ ಭೀಮಣ್ಣಾ ಮಾತನಾಡಿ, ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಮನೆಗಳನ್ನು ಕಟ್ಟುತ್ತಿದ್ದಾರೆ. ಕೂಡಲೇ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸದಸ್ಯ ಶೇಖರ್‌ ವಾರದ್‌ ಮಾತನಾಡಿ, ಲೇಔಟ್‌ಗಳಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಕೆಲವು ನಿವೇಶನಗಳನ್ನು ಮೀಸಲು ಇಡಲಾಗಿದೆ. ವಾಸ್ತವದಲ್ಲಿ ಆ ನಿವೇಶನಗಳೆಲ್ಲವೂ ಅತಿಕ್ರಮಣಗೊಂಡಿವೆ. ಅವುಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಬೊಳಮಾನದೊಡ್ಡಿ ಮಾರ್ಗದಲ್ಲಿ ಅಭಿವೃದ್ಧಿ ಮಾಡಿರುವ ಪ್ರಾಧಿಕಾರದ ಬಡಾವಣೆಯಲ್ಲಿ, ಬಾಕಿ ಇರುವ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮತ್ತು ನಾಲ್ಕು ಉದ್ಯಾನಗಳನ್ನು ಅಭಿವೃದ್ಧಿ ಮಾಡುವ ಕುರಿತು ಚರ್ಚಿಸಲಾಯಿತು.

ಸದಸ್ಯೆ ವಾಣಿಶ್ರೀ, ಪೌರಾಯುಕ್ತ ಡಾ.ದೇವಾನಂದ ದೊಡ್ಡಮನಿ, ಪ್ರಾಧಿಕಾರದ ಆಯುಕ್ತ ಶರಣಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.