ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಮುಖಂಡರ ಮುನಿಸು: ಕಾರ್ಯಕರ್ತರಿಗೆ ಫಜೀತಿ

ಒಗ್ಗಟ್ಟು ಪ್ರದರ್ಶಿಸದ ಕಾಂಗ್ರೆಸ್‍: ಜೆಡಿಎಸ್‍—ಬಿಜೆಪಿ ಪ್ರತ್ಯೇಕ ಪ್ರಚಾರ
ಬಿ.ಎ.ನಂದಿಕೋಲಮಠ
Published 5 ಮೇ 2024, 5:51 IST
Last Updated 5 ಮೇ 2024, 5:51 IST
ಅಕ್ಷರ ಗಾತ್ರ

ಲಿಂಗಸುಗೂರು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಮೂರೂ ಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನ ನಡೆದಿತ್ತು. ಆದರೆ, ಲಿಂಗಸುಗೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ ಮೂರು ಗುಂಪಾಗಿದೆ. ಜೆಡಿಎಸ್‍–ಬಿಜೆಪಿ ಪ್ರತ್ಯೇಕವಾಗಿಯೇ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕೆ ಇಳಿದಿದ್ದು ಕಾರ್ಯಕರ್ತರಿಗೆ ಫಜೀತಿ ತಂದೊಡ್ಡಿದೆ.

ಕಾಂಗ್ರೆಸ್‍ ಪಕ್ಷದಲ್ಲಿ ಹೂಲಗೇರಿ, ಬಯ್ಯಾಪುರ ಮತ್ತು ಮೇಟಿ ಗುಂಪುಗಳಿವೆ. ಮೇಟಿ ಗುಂಪು ಕೊನೆ ಹಂತದಲ್ಲಿ ಬಿಜೆಪಿ ಸೇರ್ಪಡೆಗೊಂಡಿದೆ. ಬಯ್ಯಾಪುರ ಮತ್ತು ಹೂಲಗೇರಿ ಬಣಗಳು ಚುನಾವಣೆಯನ್ನು ಪ್ರತಿಷ್ಠಿಯಾಗಿ ತೆಗೆದುಕೊಂಡು ಪ್ರತ್ಯೇಕವಾಗಿಯೇ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಗೆಲುವಿಗೆ ಶ‍್ರಮಿಸುತ್ತಿವೆ.

ಕಾಂಗ್ರೆಸ್‍ ಪಕ್ಷದ ಮುಖಂಡರು ಒಗ್ಗಟ್ಟು ಪ್ರದರ್ಶಿಸದ ಕಾರಣ ಬಹುತೇಕ ಪ್ರಮುಖರು ಮತ್ತು ಕಾರ್ಯಕರ್ತರು ತಟಸ್ಥ ನೀತಿ ಅನುಸರಿಸುತ್ತಿದ್ದಾರೆ. ಕೆಳ ಹಂತದ ಪ್ರಮುಖರು, ಕಾರ್ಯಕರ್ತರು ಯಾವ ಬಣದತ್ತ ಹೋಗಬೇಕು ಎಂಬುದು ತಿಳಿಯದೇ ಸ್ಥಳೀಯ ಅಭ್ಯರ್ಥಿಯತ್ತ ಒಲವು ತೋರಿದ್ದು ಕಾಂಗ್ರೆಸ್‍ ಪಕ್ಷಕ್ಕೆ ಕಂಟಕವಾಗಲಿದೆ.

ಎನ್‍ಡಿಎ ಮೈತ್ರಿಕೂಟದ ಜೆಡಿಎಸ್‍–ಬಿಜೆಪಿ ಮುಖಂಡರು ಒಂದಾಗಿ ವೇದಿಕೆ ಹಂಚಿಕೊಂಡಿಲ್ಲ. ಮುಖಂಡರು ಪ್ರತ್ಯೇಕ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಅಭ್ಯರ್ಥಿ ರಾಜಾ ಅಮರೇಶ‍್ವರ ನಾಯಕ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಆರಂಭದಲ್ಲಿ ಬಿಜೆಪಿ ಪ್ರಚಾರ ಕಾಟಾಚಾರಕ್ಕೆ ನಡೆದಿತ್ತು. ನಾಲ್ಕು ದಿನಗಳಿಂದ ಪ್ರಚಾರದ ಅಬ್ಬರ ತೀವ್ರಗೊಂಡಿದೆ.

ಮೂರು ಪಕ್ಷಗಳ ಮುಖಂಡರ ಮುನಿಸಿನ ಮಧ್ಯೆ ಗುಂತಗೋಳ ಮತ್ತು ಗುರುಗುಂಟಾ ಸಂಸ್ಥಾನಿಕರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಕ್ಷಾತೀತವಾಗಿ ಬೆಂಬಲಿಸುವ ಹೊಸ ತಂತ್ರ ಕೈಗೆತ್ತಿಕೊಂಡಿದ್ದಾರೆ. ಸಂಸ್ಥಾನಿಕರ ಹೊಸ ತಂತ್ರದ ಸುಳಿಗೆ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಬೆಂಬಲ ಸೂಚಿಸುತ್ತಿದ್ದು, ಮತಗಳಿಕೆ ಹೇಗಾಗುತ್ತೋ ಕಾದು ನೋಡಬೇಕಷ್ಟೆ.

ಬಿಜೆಪಿ ಅಭ್ಯರ್ಥಿ ಗುಂತಗೋಳ ಸಂಸ್ಥಾನಿಕ ರಾಜಾ ಅಮರೇಶ‍್ವರ ನಾಯಕ ಅವರ ಹಿರಿಯ ಸಹೋದರ ಕಾಂಗ್ರೆಸ್ ಮುಖಂಡ ರಾಜಾ ರಾಯಪ್ಪ ನಾಯಕ ತಟಸ್ಥವಾಗಿದ್ದಾರೆ. ಇನ್ನೊಬ್ಬ ಸಹೋದರ ರಾಜಾ ಶ್ರೀನಿವಾಸ ನಾಯಕ ಮತ್ತು ಗುರುಗುಂಟಾ ಸಂಸ್ಥಾನಿಕ ಅಳಿಯ ರಾಜಾ ಸೋಮನಾಥ ನಾಯಕ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ.

ಗುರುಗುಂಟಾ ಸಂಸ್ಥಾನದ 40 ಗ್ರಾಮಗಳು ಮತ್ತು ಗುಂತಗೋಳ ಸಂಸ್ಥಾನದ 20 ಹಳ್ಳಿ, ತಾಂಡಾ, ದೊಡ್ಡಿಗಳ ಮತದಾರರ ಓಲೈಕೆಗೆ ಪ್ರತಿ ಚುನಾವಣೆಯಲ್ಲಿ ಪಕ್ಷಗಳ ಅಭ್ಯರ್ಥಿಗಳು ಸಹಾಯ ಬಯಸಿ ಹೋಗುವುದು ಸಾಮಾನ್ಯ. ಸಂಸ್ಥಾನಿಕರು ಈಗ ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತಿದ್ದು, ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಚರ್ಚಿತ ವಿಷಯವಾಗಿದೆ.

ರಾಜಕಾರಣಿಗಳ ತಯಾರಿಕೆಯ ಕಾರ್ಖಾನೆ ಎಂದು ಹೆಸರು ಮಾಡಿರುವ ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ನಂತರ ಸಾಕಷ್ಟು ಬದಲಾವಣೆ ಕಂಡಿದೆ. ಮುತ್ಸದ್ಧಿ ರಾಜಕಾರಣಿಗಳು, ಕೆಲ ಮುಖಂಡರು ಮತದಾನದ ಹಿಂದಿನ ದಿನ ನಡೆಸುವ ತಂತ್ರ ಯಾರ ಪರವಾಗಿರುವುದೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು ಮಾತನಾಡಿ, ‘ಬಿಜೆಪಿ–ಜೆಡಿಎಸ್‍ ಮೈತ್ರಿ ಬೆಂಬಲಿಸಿ ಕೆಲಸ ಮಾಡುತ್ತಿದ್ದೇವೆ. ಜೆಡಿಎಸ್‍ ಮುಖಂಡರು ಪ್ರತ್ಯೇಕವಾಗಿ, ನಾವು ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದೇವೆ. ಎರಡೂ ಪಕ್ಷದ ಗುರಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲ್ಲಿಸುವುದಾಗಿದೆ’ ಎಂದರು.

ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ‘ಪಕ್ಷಗಳಲ್ಲಿ ಗುಂಪುಗಾರಿಕೆ ಸಹಜ. ಎಲ್ಲರೂ ಕೂಡಿಯೇ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗುಂಪುಗಾರಿಕೆಯ ಕುರಿತು ಹೇಳಿಕೆ ನೀಡುವಷ್ಟು ದೊಡ್ಡವನಲ್ಲ’ ಎಂದು ಹಾರಿಕೆ ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT