ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಷ್ಟೊಂದು ಗಲೀಜು ನಗರ ಎಲ್ಲಿಯೂ ಕಂಡಿಲ್ಲ...ರಾಯಚೂರು ಜಿಲ್ಲಾಧಿಕಾರಿ ಬೇಸರ

ರಾಯಚೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ನಿತಿಶ್‌ ಬೇಸರ
Published 16 ಆಗಸ್ಟ್ 2024, 14:33 IST
Last Updated 16 ಆಗಸ್ಟ್ 2024, 14:33 IST
ಅಕ್ಷರ ಗಾತ್ರ

ರಾಯಚೂರು: ‘ಇಷ್ಟೊಂದು ಗಲೀಜು ನಗರ ಎಲ್ಲಿಯೂ ಕಂಡಿಲ್ಲ. ನಗರಸಭೆ ಅಸ್ತಿತ್ವಕ್ಕೆ ಬಂದು ಏಳು ದಶಕ ಕಳೆದರೂ ನಗರ ವಾಸ ಯೋಗ್ಯವಾಗಿಲ್ಲ’ ಎಂದು ಜಿಲ್ಲಾಧಿಕಾರಿ ನಿತಿಶ್‌ ಬೇಸರದಿಂದ ಕಹಿಸತ್ಯ ಹೇಳಿದರು.

ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಾನು ಅನೇಕ ಜಿಲ್ಲೆಗಳಲ್ಲಿ ಕೆಲಸ ಮಾಡಿರುವೆ. ಚಿತ್ರದುರ್ಗ, ಬೆಳಗಾವಿ, ಮೈಸೂರು, ತುಮಕೂರು ನಗರಗಳಲ್ಲಿ ಕಾರ್ಯನಿರ್ವಹಿಸಿರುವೆ. ಆದರೆ, ಇಷ್ಟೊಂದು ಗಲೀಜು ನೋಡಿಲ್ಲ’ ಎಂದು ಖೇದ ವ್ಯಕ್ತಪಡಿಸಿದರು.

‘ನಗರಸಭೆ ಅಧಿಕಾರಿಗಳು, ಸಿಬ್ಬಂದಿ ನಗರ ಸ್ವಚ್ಛತೆಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕಾಗಿದೆ. ಜನ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ. ನಗರದ ಸುಧಾರಣೆ ಎಲ್ಲರೂ ಸೇರಿ ಹೆಜ್ಜೆಗಳನ್ನು ಇಡಬೇಕಾಗಿದೆ’ ಎಂದು ಹೇಳಿದರು.

‘15 ತಿಂಗಳ ನಂತರ ಆಡಳಿತ ಅಧಿಕಾರಿ ಅವಧಿಯಲ್ಲೇ ನಗರಸಭೆಯ ಸಾಮಾನ್ಯ ಸಭೆ ನಡೆದಿದೆ. ಕುಡಿಯುವ ನೀರು ಸಮರ್ಪಕ ಪೂರೈಕೆಗೆ ನಗರಸಭೆಯ ನಾಲ್ವರು ಹಿರಿಯ ಸದಸ್ಯರ ಹಾಗೂ ಎಂಜಿನಿಯರ್‌ಗಳನ್ನು ಒಳಗೊಂಡ ತಂಡ ರಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸೋಣ’ ಎಂದು ತಿಳಿಸಿದರು.

‘ಯಾವುದೇ ನಗರದ ಅಭಿವೃದ್ಧಿ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ರಾಯಚೂರು ನಗರದ ಸಮಗ್ರ ಅಭಿವೃದ್ಧಿ ಹಾಗೂ ಸ್ವಚ್ಛ ನಗರಕ್ಕಾಗಿ ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಸಿಬ್ಬಂದಿ ಸಹಕಾರ ಅಗತ್ಯವಾಗಿದೆ’ ಎಂದು ಹೇಳಿದರು.

‘ಅಧಿಕಾರಿಗಳು ನಗರಸಭೆಯ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ನಗರಸಭೆಯ ಮಳಿಗೆಗಳ ಹರಾಜು ನಿಯಮದಂತೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

‘ನಗರಸಭೆ ವ್ಯಾಪ್ತಿಯ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಪೌರಕಾರ್ಮಿಕರಿಲ್ಲ. ಪೌರಕಾರ್ಮಿಕರ ನೇಮಕಾತಿಗಾಗಿ ಸ್ವಂತ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ವಿಧಾನ ಪರಿಷತ್‌ ಸದಸ್ಯ ವಸಂತಕುಮಾರ ಮಾತನಾಡಿ, ‘ಎರಡು ನದಿಗಳು ತುಂಬಿ ಹರಿಯುತ್ತಿದ್ದರೂ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ನಗರಕ್ಕೆ 40 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದ್ದರೂ ನೀರು ಪೂರೈಕೆಯಲ್ಲಿ ಸಮಸ್ಯೆ ಇದೆ. ಇದನ್ನು ಸರಿಪಡಿಸಿಕೊಂಡು ಸಮರ್ಪಕ ನೀರು ಪೂರೈಕೆ ಮಾಡಬೇಕು’ ಎಂದರು.

ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯಸ್ವಾಮಿ ಹಿರೇಮಠ ಮಾತನಾಡಿ, ‘ನಗರದಲ್ಲಿ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಬೀದಿ ದೀಪಗಳು ಉರಿಯುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ‘ನಗರದ ವಾರ್ಡ್‌ 1ರಿಂದ 12ರವರೆಗೆ ಕೃಷ್ಣಾ ನದಿ ನೀರು ಪೂರೈಕೆ ಮಾಡಲಾಗುತ್ತಿದೆ. ರಾಂಪುರ ಜಲಾಶಯದ ನೀರನ್ನು ದಿನ ಬಿಟ್ಟು ದಿನ ನಗರದ ಜನತೆಗೆ ‍ಪೂರೈಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಬಸವರಾಜ, ಶರಣಬಸವ ಬಲ್ಲಟಗಿ, ನಾಗರಾಜ, ಸಣ್ಣನರಸರೆಡ್ಡಿ, ಶ್ರೀನಿವಾಸ ರೆಡ್ಡಿ, ಶಶಿರಾಜ ಅವರು ಸಮರ್ಪಕ ಕುಡಿಯುವ ನೀರು ‍ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಮನೆ ಮನೆಗೆ ಕಸ ಸಂಗ್ರಹಿಸುವ ವಾಹನಗಳು ನಿಗದಿತ ಸಮಯಕ್ಕೆ ವಾರ್ಡ್‌ಗಳಿಗೆ, ಮನೆಗಳಿಗೆ ಬರುತ್ತಿಲ್ಲ. ಕಸ ಸಾಗಿಸುವ ವಾಹನಗಳು ಸಹ ರಸ್ತೆ ಮೇಲೆ ಕಸ ಚೆಲ್ಲುತ್ತ ಸಾಗುತ್ತಿವೆ. ಇದರಿಂದ ನಗರ ಇನ್ನಷ್ಟು ಗಬ್ಬೆದ್ದಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬೀದಿ ದೀಪಗಳ ನಿರ್ವಹಣೆಯಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಗರಸಭೆ ಅಧಿಕಾರಿಗಳು ಸದಸ್ಯರ ಮೊಬೈಲ್‌ ಕರೆಗಳನ್ನೇ ಸ್ವೀಕರಿಸುವುದಿಲ್ಲ. ಅಧಿಕಾರಿಗಳು ಕರೆಗಳನ್ನೇ ಸ್ವೀಕರಿಸದಿದ್ದರೆ ಸಮಸ್ಯೆಗಳು ಹೇಗೆ ಇತ್ಯರ್ಥಗೊಳ್ಳಲು ಸಾಧ್ಯ ಎಂದು ಒಕ್ಕೊರಲಿನಿಂದ ಪ್ರಶ್ನಿಸಿದರು.

ನಗರಸಭೆಯ ತಾಂತ್ರಿಕ ವಿಭಾಗದ ಅಧಿಕಾರಿಗಳಾದ ನವೀನಕುಮಾರ, ರಾಹುಲ್, ಮೂರ್ತಿ ಹಾಗೂ ಮಲ್ಲಿಕಾರ್ಜುನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT