ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾದಡಿ ಗುಣಮಟ್ಟದ ಕಾಮಗಾರಿ ಮಾಡಿ: ಸಿಇಒ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿಇಒ ಸೂಚನೆ
Last Updated 30 ಸೆಪ್ಟೆಂಬರ್ 2022, 13:49 IST
ಅಕ್ಷರ ಗಾತ್ರ

ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಾದ್ಯಂತ ಕೈಗೊಂಡ ವಿವಿಧ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಂತ್ರಿಕ ಸಂಯೋಜಕರು, ಸಹಾಯಕರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಬೇಕು. ಗುತ್ತೆದಾರರಿಗೆ ಕಾಮಗಾರಿ ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.

ಶೌಚಾಲಯ, ಅಂಗನವಾಡಿ ಕೇಂದ್ರ, ಬಿಸಿಯೂಟ ಕೋಣೆ, ಶಾಲಾ ಭೋಜನಾಲಯ ಸೇರಿದಂತೆ ಇನ್ನಿತರ ಯಾವುದೇ ಕಾಮಗಾರಿ ನಿರ್ವಹಿಸಿದರೂ ಗುಣಮಟ್ಟದಿಂದ ಕೂಡಿರಬೇಕು. ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದಾಗ, ಗುಣಮಟ್ಟ ಇಲ್ಲದಿದ್ದರೆ ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳಪೆ ಕಾಮಗಾರಿ ನಿರ್ವಹಿಸುವುದು ಕಂಡುಬಂದಲ್ಲಿ ನಿಮ್ಮ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಳಪೆ ಕಾಮಗಾರಿ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಮುಂದಿನ ಅಕ್ಟೋಬರ್ 30ರೊಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಘನತ್ಯಾಜ ವಿಲೇವಾರಿ ಘಟಕಕ್ಕೆ ಸಂಬಂಧಿಸಿ ಡಿಪಿಆರ್‌ನ್ನು ಆಕ್ಟೋಬರ್ 15ರೊಳಗಾಗಿ ಸಿದ್ದಪಡಿಸಿ ಜಿಲ್ಲಾ ಪಂಚಾಯಿತಿಗೆ ವರದಿ ನೀಡಬೇಕು. ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿಯಲ್ಲಿ ಬಾಕಿಯಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಎಸ್.ಕ್ಯೂ.ಎಂ,ಡಿ.ಕ್ಯೂ.ಎಂ ಸಂಬಂಧಿಸಿ ವಸೂಲಾತಿ ಪ್ರಕರಣಗಳನ್ನು ನಿರ್ಲಕ್ಯ ಮಾಡಬಾರದು. ಒಂಬುಡ್ಸ್ ಮನ್ ಅವರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಅಮೃತ ಸರೋವರ ಯೋಜನೆಯಡಿಯಲ್ಲಿ ಅನುಷ್ಠಾನ ಮಾಡುತ್ತಿರುವ ಪ್ರಗತಿ ಹಂತದಲ್ಲಿರುವ ಕೆರೆ ಕಾಮಗಾರಿಯನ್ನು 15 ದಿನದೊಳಗಾಗಿ ಪೂರ್ಣಗೊಳಿಸಬೇಕು. ಪೌಷ್ಟಿಕ ಕೈ ತೋಟ ಅಭಿಯಾನದಡಿಯಲ್ಲಿ ಪ್ರತಿ ತಾಲ್ಲೂಕಿಗೆ ಒಂದು ಸಾವಿರ ಟಾರ್ಗೆಟ್ ನೀಡಲಾಗುತ್ತದೆ ಎಂದರು.

ನರೇಗಾದಡಿಯಲ್ಲಿ ಅರಣ್ಯ, ಸಾಮಾಜಿಕ ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ರೇಷ್ಮೆ ಮತ್ತು ಪಿ.ಆರ್.ಇ.ಡಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡುವ ಮುಂಚೆ ಜಿಯೋಟ್ಯಾಗ್ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 15ನೇ ಹಣಕಾಸು, ನರೇಗಾದಡಿಯಲ್ಲಿ ಅನುಷ್ಠಾನ ಮಾಡುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹ್ಮದ್‌ ಅಲಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿ ವೆಂಕಟೇಶ್ ಗಲಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT