ಬುಧವಾರ, ಫೆಬ್ರವರಿ 26, 2020
19 °C
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ ಚೆಟ್ಟಿ ಅಭಿಮತ

ರೋಗ ಹರಡದಂತೆ ಸಂಶೋಧನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬೆಳೆಗಳಿಗೆ ರೋಗ ಹರಡುವುದನ್ನು ತಡೆಯುವ ಶಕ್ತಿಯ ಬಗ್ಗೆ ಸಸ್ಯಶಾಸ್ತ್ರದ ವಿಜ್ಞಾನಿಗಳು ಸಂಶೋಧನೆ ಮಾಡಬೇಕಾಗಿದೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ ಚೆಟ್ಟಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ’ಸಸ್ಯರೋಗ ಶಾಸ್ತ್ರದ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳೆಗಳನ್ನು ದಿಢೀರ್‌ ಬಾಧಿಸುವ ರೋಗಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ದಿಸೆಯಲ್ಲಿ ರೋಗ ತಡೆಗಟ್ಟುವ ಬಗ್ಗೆ ಹೆಚ್ಚು ಸಂಶೋಧನೆಗಳಾದರೆ ಮಾತ್ರ ರೈತರು ನಷ್ಟದಿಂದ ಪಾರಾಗಿ, ಸಮರ್ಪಕವಾಗಿ ಫಸಲು ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದರು.

ಸಸ್ಯಗಳ ಶರೀರ ಕ್ರಿಯೆಯನ್ನು ವಿದ್ಯಾರ್ಥಿಗಳು ವಿಶ್ಲೇಷಿಸಿ ಅಧ್ಯಯನ ಮಾಡಬೇಕು. ಶರೀರಕ್ರಿಯೆ ಸಂಶೋಧನೆಯು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ದೇಶದಲ್ಲಿ ಹವಾಮಾನಕ್ಕೆ ಅನುಗುಣವಾದ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಹೇಳಿದರು.

ಹವಾಮಾನ ವೈಪರಿತ್ಯದಿಂದ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತಿವೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯವು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಮತ್ತು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯುವಂತೆ ರೈತರನ್ನು ಪ್ರೇರಿಪಿಸುವ ಕೆಲಸ ಮಾಡಬೇಕಾಗಿದೆ. ರೈತರ ಬೆಳೆದ ಬೆಳೆಗಳಿಗೆ ಇಂದು ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ದೊರೆಯದ ಕಾರಣ ರೈತರು ಸ್ಥಿತಿ ತೀರಾ ಶೋಚನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಮಾತನಾಡಿ, ರೈತರು ಸರಳವಾಗಿ ಅಳವಡಿಸಿಕೊಳ್ಳಬಹುದಾದ ತಂತ್ರಜ್ಞಾನ ಕೊಡಬೇಕು. ರೋಗ ನಿಯಂತ್ರಣಕ್ಕೆ ಅನುಕೂಲವಾಗುವ ತಂತ್ರಗಳನ್ನು ಪರಿಚಯ ಮಾಡಬೇಕು. ಸಾಧ್ಯವಾದಷ್ಟು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನವನ್ನು ರೈತರಿಗೆ ಅರ್ಥ ಮಾಡಿಸಬೇಕು. ಭತ್ತಕ್ಕೆ ಕಾಡಿಗೆ ರೋಗ ಬರುತ್ತಿದೆ. ಸೊಪ್ಪುಗಳಿಗೆ ಮುದುರ ರೋಗ ಬರುತ್ತಿದೆ. ಮುಂಗಾರು ಅವಧಿಯಲ್ಲಿ ಬೂದಿರೋಗ ಬರುತ್ತದೆ. ಇಂತಹ ರೋಗಗಳನ್ನು ನಿಯಂತ್ರಿಸಲು ಪರಿಸರಸ್ನೇಹಿ ಪರಿಹಾರವನ್ನು ಕೊಡಬೇಕು. ಯಾವುದೇ ಕೀಟನಾಶಕ ಬಳಕೆ ಮಾಡಿದರೆ, ಅದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಇರಬೇಕು. ಸಸ್ಯಶಾಸ್ತ್ರಜ್ಞರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕಾ ವಿಜ್ಞಾನ ಕೇಂದ್ರದ ಉಪಕುಲಪತಿ ಡಾ.ಎಂ.ಕೆ.ನಾಯಕ್, ಕೃಷಿ ವಿಶ್ವವಿದ್ಯಾಲಯ ಮಾಜಿ ಉಪಕುಲಪತಿ ಡಾ. ವಿ.ಐ ಬೆನಾಗಿ ಒಡಿ, ಶಿಕ್ಷಣ ನಿರ್ದೇಶಕ ಡಾ.ಎಸ್.ಕೆ ಮೇಟಿ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ, ಇಂಡಿಯನ್ ಫೈಟೊಪಾಥೋಲಾಜಿಕಲ್ ಸೊಸೈಟಿ ಕಾರ್ಯದರ್ಶಿ ಡಾ.ದಿನೇಶ್ ಸಿಂಗ್, ಎಸ್.ಎನ್. ಪ್ರಸಾದ್, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ರಾಜೇಂದ್ರ ಕುಮಾರ ಕಟಾರಿಯಾ, ವೀರನಗೌಡ ಪರಸರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು