ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಅಸ್ತಿತ್ವ ಕಳೆದುಕೊಳ್ಳುತ್ತಿರುವ ಶಿಕ್ಷಣ ಹಕ್ಕು ಕಾಯ್ದೆ

Last Updated 16 ಮೇ 2022, 4:03 IST
ಅಕ್ಷರ ಗಾತ್ರ

ರಾಯಚೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿ ಒಂದು ದಶಕವಾಯಿತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಗಾಂಭೀರ್ಯ ಕಡಿಮೆಯಾಗುತ್ತಿದೆ. ಕಾಯ್ದೆ ಇದ್ದರೂ ಉತ್ತಮ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳು ಓದಲು ಸಾಧ್ಯವಾಗರ ಪರಿಸ್ಥಿತಿ ಇದೆ.

ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆಗಳೇ ಇಲ್ಲದ ಸ್ಥಳದಲ್ಲಿ ಖಾಸಗಿ ಶಾಲೆಯೊಂದೆ ಜನರಿಗೆ ಆಯ್ಕೆಯಾಗಿದ್ದರೆ ಮಾತ್ರ ಆರ್‌ಟಿಇಯಡಿ ಆ ಶಾಲೆಗೆ ಪ್ರವೇಶ ದೊರಕಿಸಬಹುದು ಎನ್ನುವುದಷ್ಟೇ ಈಗ ಉಳಿದಿದೆ. ಅದು ಪ್ರವೇಶ ಸಿಗುವ ಖಚಿತತೆ ಇಲ್ಲ. ಏಕೆಂದರೆ ಈಗಾಗಲೇ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆಯಡಿ ಓದುತ್ತಿರುವ ಮಕ್ಕಳ ಶುಲ್ಕವನ್ನೇ ಸರ್ಕಾರ ಇನ್ನೂ ಸಂಪೂರ್ಣ ಭರಿಸಿಲ್ಲ. ಹಲವು ವರ್ಷಗಳಿಂದ ಶುಲ್ಕಬಾಕಿ ಇರುವ ಕಾರಣ ಶಿಕ್ಷಣ ಕಾಯ್ದೆಯೇ ಅಪ್ರಸ್ತುತವಾಗುವ ಸಾಧ್ಯತೆ ಇದೆ.

ಈಗ ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ಪ್ರವೇಶಕ್ಕೆ ಮಾತ್ರ ಆರ್‌ಟಿಇ ಅರ್ಜಿ ಸಲ್ಲಿಸಬಹುದಾಗಿದೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನೆ ಇದೆ ಹಾಗೂ ಅರ್ಹತೆ ಇರುವ ಶಿಕ್ಷಕರಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ ಎನ್ನುವ ವಾದಕ್ಕೆ ಶಿಕ್ಷಣ ಹಕ್ಕು ಕಾಯ್ದೆ ಸೀಮಿತಗೊಳಿಸಲಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ ಸರಿಯಾಗಿಯೇ ಇದೆ. ಉತ್ತಮ ಬೋಧನೆ ಹಾಗೂ ಅರ್ಹ ಶಿಕ್ಷಕರಿರುವ ಸರ್ಕಾರಿ ಶಾಲೆಗಳಲ್ಲಿ ಆರ್‌ಟಿಇಯಡಿ ಉಚಿತ ಪ್ರವೇಶ ನೀಡಲಾಗುತ್ತದೆ. ಆದರೆ, ಬಹುತೇಕ ಸರ್ಕಾರಿ ಶಾಲೆಗಳು ಒಂದಿಲ್ಲ ಒಂದು ಸಮಸ್ಯೆ ಎದುರಿಸುತ್ತಿರುವುದು ಜನರ ಕಣ್ಣೆದುರು ಇದೆ. ಮುಖ್ಯವಾಗಿ ಮೂಲಸೌಕರ್ಯಗಳ ವಿಷಯದಲ್ಲಿ ಖಾಸಗಿ ಶಾಲೆಗಳೇ ಮುಂದಿವೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕುಳಿತುಕೊಳ್ಳಲು ಡೆಸ್ಕ್‌ ಇಲ್ಲದಿರುವುದು, ಶೌಚಾಲಯ, ಶುಚಿತ್ವ, ಶುದ್ಧ ಕುಡಿಯುವ ನೀರು, ಕಲಿಕಾಮಟ್ಟ ಗುರುತಿಸಿಕೊಂಡು ಪಾಠ ಮಾಡದಿರುವುದು, ಪಾಲಕರ ಸಭೆಗಳನ್ನು ಮಾಡುವುದು ನಿಯಮಿತವಾಗಿಲ್ಲ. ಇದರ ಮಧ್ಯೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳು ಸಾಕಷ್ಟಿವೆ.

ಆದರೆ, ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಶೇ 25 ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಮೀಸಲಿಡಬೇಕು. ಈ ಸೀಟುಗಳನ್ನು ಕಾಯ್ದೆ ಅನುಸಾರ ಆರ್ಥಿಕ ಸ್ಥಿತಿಗತಿ ಮತ್ತು ಜಾತಿ ಮೀಸಲಾತಿ ಅನುಸಾರ ಹಂಚಿಕೆ ಮಾಡಬೇಕಿತ್ತು. ಸದ್ಯಕ್ಕೆ ಇದ್ಯಾವುದು ನಡೆಯುತ್ತಿಲ್ಲ.

2020ಕ್ಕೂ ಮುನ್ನ ಆರ್‌ಟಿಇಯಡಿ ನೂರಾರು ಸೀಟುಗಳನ್ನು ಪಡೆಯಲು ಪ್ರವೇಶ ಕೋರಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆದರೆ, 2022–23ನೇ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಅರ್ಜಿಗಳು ಸಲ್ಲಿಕೆಯಾದ ಸಂಖ್ಯೆ ಕೇವಲ 505 ಮಾತ್ರ.

ರಾಯಚೂರು ತಾಲ್ಲೂಕಿನಲ್ಲೇ ಅತಿಹೆಚ್ಚು 405 ಅರ್ಜಿಗಳು ಸಲ್ಲಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯ ಖಾಸಗಿ ಶಾಲೆಗಳಿರುವ ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ಕ್ರಮವಾಗಿ 33 ಮತ್ತು 15 ಅರ್ಜಿಗಳು ಬಂದಿವೆ.

ಜಿಲ್ಲೆಯಲ್ಲಿರುವ ಒಟ್ಟು 415 ಖಾಸಗಿ ಶಾಲೆಗಳು ಈಗ ಬಹುತೇಕ ಆರ್‌ಟಿಇ ಹೊಸ ಪ್ರವೇಶದಿಂದ ಹೊರಗುಳಿದಿವೆ. ದೇವದುರ್ಗ 46, ಲಿಂಗಸುಗೂರು 66, ಮಾನ್ವಿ 90, ರಾಯಚೂರು 111, ಸಿಂಧನೂರು 102 ಖಾಸಗಿ ಶಾಲೆಗಳಲ್ಲಿ 2016 ರಲ್ಲಿಯೇ ಕಾಯ್ದೆಯಡಿ ಪರಿಗಣಿಸಿ ಶೇ 25 ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಮೀಸಲಿರಿಸಲಾಗಿತ್ತು. ಈಗ ಶಾಲೆಗಳಿವೆ, ಆದರೆ ಆರ್‌ಟಿಇ ಹೊಸ ಪ್ರವೇಶಗಳಿಲ್ಲ.

ಈ ವರ್ಷ ಸಲ್ಲಿಕೆಯಾದ 505 ಅರ್ಜಿಗಳ ಪೈಕಿ 253 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕಾಯ್ದೆಯಡಿ ಇದುವರೆಗೂ ಶಾಲೆಗಳಲ್ಲಿ ಪ್ರವೇಶಾತಿ ಪಡೆದವರು ಕೇವಲ 74 ವಿದ್ಯಾರ್ಥಿಗಳು.

ಸೌಲಭ್ಯ ಮಾರ್ಪಾಡು; ಪಾಲಕರ ಬೇಸರ
ಮಾನ್ವಿ
: ರಾಜ್ಯ ಸರ್ಕಾರ ಆರ್‌ಟಿಇ ಸೌಲಭ್ಯ ನೀಡುವಲ್ಲಿ ತಿದ್ದುಪಡಿ ಮಾಡಿರುವ ಬಗ್ಗೆ ಸ್ಥಳೀಯ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಪ್ರವೇಶ ಸೌಲಭ್ಯ ಮುಂದುವರಿಸಬೇಕಿತ್ತು ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ.

ಮಾನ್ವಿ ತಾಲ್ಲೂಕಿನಲ್ಲಿ ಕೇವಲ 4 ಖಾಸಗಿ ಅನುದಾನಿತ ಶಾಲೆಗಳು ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ವ್ಯಾಪ್ತಿಗೆ ಒಳಪಟ್ಟಿವೆ. ಮಾನ್ವಿ ಪಟ್ಣಣದ ಶ್ರೀಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಎಸ್.ಆರ್.ಎಸ್.ವಿ ಕನ್ನಡ ಮಾಧ್ಯಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅಮರೇಶ್ವರ ಕ್ಯಾಂಪ್‌ನ ಶ್ರೀ ರಾಮಕೃಷ್ಣ ಕನ್ನಡ ಮಾಧ್ಯಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತೆಲುಗು ಮಾಧ್ಯಮದ ಶ್ರೀರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಆರ್‌ಟಿಇ ಸೌಲಭ್ಯದಡಿಯಲ್ಲಿ ಪ್ರವೇಶ ಪಡೆಯಲು ಅವಕಾಶ ಇದೆ.

2022-23 ನೇ ಸಾಲಿನಲ್ಲಿ ಈ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಶೇ25ರಷ್ಟು ಸೀಟುಗಳನ್ನು ಮೀಸಲಿಡಲಾಗಿತ್ತು. ಈ ಎಲ್ಲಾ ಶಾಲೆಗಳಲ್ಲಿ 1ನೇತರಗತಿಗೆ ಒಟ್ಟು 38 ಸೀಟುಗಳನ್ನು ಕಾಯ್ದಿರಿಸಲಾಗಿತ್ತು. ಮೊದಲ ಹಂತದಲ್ಲಿ 15 ಮತ್ತು ಎರಡನೇ ಹಂತದಲ್ಲಿ 9 ಸೀಟುಗಳು ಮಾತ್ರ ಹಂಚಿಕೆಯಾಗಿವೆ. ಸದರಿ ಖಾಸಗಿ ಶಾಲೆಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದರೂ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆ ಇರುವ ಕಾರಣ ಪಾಲಕರು ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯದೆ ನೇರವಾಗಿ ಪ್ರವೇಶ ಪಡೆಯುತ್ತಿದ್ದಾರೆ. ಈ ಶಾಲೆಯಲ್ಲಿ ಆರ್‌ಟಿಇ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಸರ್ಕಾರದ ಅನುದಾನ ಪಡೆಯುವ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಒಟ್ಟು ಪ್ರವೇಶ ಸಂಖ್ಯೆ ಇಳಿಮುಖಗೊಂಡಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕು. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಬಡ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿಟ್ಟಿನಲ್ಲಿ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.

ಅಂತರವೇ ಆರ್‌ಟಿಇ ಸೌಕರ್ಯಕ್ಕೆ ತೊಡಕು
ಸಿಂಧನೂರು:
ಅನುದಾನರಹಿತ ಖಾಸಗಿ ಶಾಲೆಯಿರುವ ಸ್ಥಳದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಯಿದ್ದರೆ ಅಂತಹ ಖಾಸಗಿ ಶಾಲೆ ಆರ್‌ಟಿಇ ಅಡಿಯಲ್ಲಿ ಶೇ 25 ಸೀಟ್‍ಗಳನ್ನು ಪಡೆಯಲು ಅರ್ಹವಾಗದಿರುವ ಸರ್ಕಾರದ ಆದೇಶ ಆರ್‌ಟಿಇ ಸೌಕರ್ಯ ಪಡೆಯಲು ಆಸಕ್ತಿಯಿರುವ ಬಡ ವಿದ್ಯಾರ್ಥಿಗಳಿಗೆ ತೊಡಕಾಗಿ ಪರಿಣಮಿಸಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಯಿಂದ 5 ಕಿಮೀ ಅಂತರದ ಆದೇಶವಿಲ್ಲದ 2018 ರಿಂದ 2020ರ ಅವಧಿಯಲ್ಲಿ ಸಿಂಧನೂರು ತಾಲ್ಲೂಕಿನಲ್ಲಿ ಅನುದಾನರಹಿತ 99 ಶಾಲೆಗಳು ಆರ್‍ಟಿಇಗೆ ಒಳಪಟ್ಟಿದ್ದವು. ಆದರೆ 2021 ರಿಂದ ಇಲ್ಲಿಯವರೆಗೆ 19 ಶಾಲೆಗಳು ಮಾತ್ರ ಆರ್‍ಟಿಇಗೆ ಒಳಪಟ್ಟಿವೆ.2019 ರಲ್ಲಿ 3180 ವಿದ್ಯಾರ್ಥಿಗಳು ದಾಖಲಾದರೆ, 2022 ರಲ್ಲಿ 24 ಮಕ್ಕಳು ಮಾತ್ರ ದಾಖಲಾಗಿವೆ.

‘1 ರಿಂದ 5ನೇ ತರಗತಿ ಮತ್ತು 1 ರಿಂದ 8ನೇ ತರಗತಿಯವರೆಗೆ ಇರುವ ಶಾಲೆಗಳಲ್ಲಿ ಆರ್‌ಟಿಇ ಪ್ರದೇಶದ ಸೌಕರ್ಯವಿದ್ದು, ಶೇ 99 ರಷ್ಟು ಶಾಲೆಗಳು ಅಂತರದ ಕಾರಣದಿಂದಾಗಿ ಆರ್‌ಟಿಇ ಅವಕಾಶದಿಂದ ವಂಚಿತವಾಗಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ಹೇಳಿದರು.

ರದ್ದು ಮಾಡುವ ತಂತ್ರ: ‘ಪ್ರಾರಂಭದಲ್ಲಿ ಆರ್‌ಟಿಇ ಕಾನೂನು ಜಾರಿಗೊಳಿಸಿದ ಸಮಯದಲ್ಲಿ ಖಾಸಗಿ, ಸರ್ಕಾರಿ ಶಾಲೆಗಳ ಅಂತರದ ಷರತ್ತಿಲ್ಲದೆ ಬಡಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆರ್‌ಟಿಇ ಸೌಕರ್ಯ ರದ್ದು ಪಡಿಸುವ ಉದ್ದೇಶದಿಂದಲೇ ಹೊಸ ಆದೇಶ ಹೊರಡಿಸಲಾಗಿದೆ’ ಎಂದು ಖಾಸಗಿ ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಮುಖ್ಯಸ್ಥರಲ್ಲೊಬ್ಬರಾದ ಸರಸ್ವತಿ ಪಾಟೀಲ ಆರೋಪಿಸಿದರು.

ಅರ್ಜಿ ಸಲ್ಲಿಸಲು ಹಿಂದೇಟು
ದೇವದುರ್ಗ
: ‘ತಾಲ್ಲೂಕಿನಲ್ಲಿನ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಬನದೇಶ್ವರ ಹಿರಿಯ ಪ್ರಾಥಮಿಕ ಶಾಲೆ ಜಾಲಹಳ್ಳಿಯ ಜೆ.ಜೆ.ಹಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ಅನುದಾನಿತ ಶಾಲೆಗಳಾಗಿದ್ದು,ಆರ್‌ಟಿಇ ಅಡಿಯಲ್ಲಿ ಲಭ್ಯವಿರುವ 43 ಸಿಟಿಗಳಲ್ಲಿ 2022-23ರಲ್ಲಿ ಪ್ರಥಮ ಸುತ್ತಿನಲ್ಲಿ 14 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು ಬಾಕಿ ಉಳಿದ 29 ಸ್ಥಾನಗಳಿಗೆ 2ನೇ ಮತ್ತು 3 ನೇ ಸುತ್ತಿನಲ್ಲಿ ಹಂಚಿಕೆ ಮಾಡಲಾಗುವುದು‘ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಇಂದಿರಾ ಅವರು ತಿಳಿಸಿದರು.

ಆರ್‌ಟಿಇ ಅಡಿಯಲ್ಲಿ ಸೀಟುಗಳನ್ನು ಪಡೆದುಕೊಳ್ಳುವುದಕ್ಕೆ ಈ ಮೊದಲು ಜನರು ಮುಗಿಬಿದ್ದು ಅರ್ಜಿಗಳನ್ನು ಸಲ್ಲಿಸುತ್ತಿದ್ದ ದೃಶ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕಂಡು ಬರುತ್ತಿತ್ತು. ಆದರೆ, ಈ ವರ್ಷ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ಸೀಟು ದೊರೆಯುತ್ತಿಲ್ಲ ಎಂಬುದನ್ನು ಅರಿತು, ಅರ್ಜಿಗಳನ್ನು ಸಲ್ಲಿಸುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ.

’ಸರ್ಕಾರಿ ಶಾಲೆಗಳಲ್ಲಿ ನೇರವಾಗಿ ಹೋಗಿ ಅರ್ಜಿ ಸಲ್ಲಿಸಿದರೂ ಪ್ರವೇಶ ಕೊಡುತ್ತಾರೆ. ಅದಕ್ಕಾಗಿ ಆರ್‌ಟಿಇ ಮೂಲಕ ಏಕೆ ಹೋಗಬೇಕು. ಎಷ್ಟೇ ಸಮಸ್ಯೆಯಿದ್ದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು. ನಮ್ಮ ಮನೆ ಪಕ್ಕದಲ್ಲೇ ಖಾಸಗಿ ಶಾಲೆ ಇದ್ದು, ದುಬಾರಿ ಶುಲ್ಕ ನಮಗೆ ಭರಿಸುವುದಕ್ಕೆ ಆಗುತ್ತಿಲ್ಲ. ಅನಿವಾರ್ಯವಾಗಿ ಸ್ವಲ್ಪ ದೂರದ ಸರ್ಕಾರಿ ಶಾಲೆಗೆ ಮಕ್ಕಳು ಹೋಗುತ್ತಿದ್ದಾರೆ‘ ಎಂದು ದೇವದುರ್ಗದ ನಿವಾಸಿ ಮಲ್ಲಪ್ಪ ಅಳಲು ತೋಡಿಕೊಂಡರು.

*

ಪ್ರಾರಂಭದಲ್ಲಿ ಆರ್‌ಟಿಇ ಕಾನೂನು ಜಾರಿಗೊಳಿಸಿದ ಸಮಯದಲ್ಲಿ ಖಾಸಗಿ, ಸರ್ಕಾರಿ ಶಾಲೆಗಳ ಅಂತರದ ಷರತ್ತಿಲ್ಲದೆ ಬಡಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆರ್‌ಟಿಇ ಸೌಕರ್ಯ ರದ್ದು ಪಡಿಸುವ ಉದ್ದೇಶದಿಂದಲೇ ಹೊಸ ಆದೇಶ ಹೊರಡಿಸಲಾಗಿದೆ.
-ಸರಸ್ವತಿ ಪಾಟೀಲ, ಆಡಳಿತಾಧಿಕಾರಿ, ರಾಜೇಂದ್ರಕುಮಾರ ಸ್ಮಾರಕ ಸ್ಕೂಲ್ ಸಿಂಧನೂರು

*

ಸರ್ಕಾರ ಖಾಸಗಿ ಶಿಕ್ಷಣ ಸಂಘಟನೆಗೆ ಮಣಿದು ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಮಕ್ಕಳ ಶಿಕ್ಷಣ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ಬೆಳವಣಿಗೆ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷವಾಗಿ ಹಣ ಸುಲಿಗೆಗೆ ಅವಕಾಶ ಕೊಟ್ಟಂತೆ.
-ಮರಿಲಿಂಗಪ್ಪ ಕೋಳೂರ, ಶಿಕ್ಷಣ ಪ್ರೇಮಿ, ದೇವದುರ್ಗ

*

ಆರ್‌ಟಿಇ ಕಾಯ್ದೆ ತಿದ್ದುಪಡಿಯಿಂದ ಮಕ್ಕಳು ಆಯ್ಕೆ ಮಾಡಿಕೊಳ್ಳಬಹುದಾದ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಕಟ್ಟಳೆ ಹೆಚ್ಚು ವಿಧಿಸಿದ್ದು ಪ್ರವೇಶ ಪಡೆಯಲು ತೊಂದರೆ ಆಗಿದೆ. ಈ ಮೊದಲಿನಂತೆಯೆ ನಿಯಮ ಜಾರಿಗೊಳಿಸಿದರೆ ಹೆಚ್ಚು ಪ್ರಯೋಜನ ಆಗಲಿದೆ.
-ಅಕ್ರಂಪಾಷಾ, ಶಿಕ್ಷಣ ಪ್ರೇಮಿ, ಲಿಂಗಸುಗೂರು

*

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರ ನೇಮಕ ಹಾಗೂ ಮೂಲಸೌಕರ್ಯ ಕಲ್ಪಿಸುವವರೆಗೆ ರಾಜ್ಯ ಸರ್ಕಾರ ಎಲ್ಲಾ ಅನುದಾನರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೌಲಭ್ಯ ಮುಂದುವರಿಸಬೇಕಿತ್ತು.
-ಶಿವರಾಜ ಬಿ, ಪಾಲಕ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT