ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೇವಾಲಾಲ್‍ರ ಸಂದೇಶ  ಮನುಕುಲದ ಏಳಿಗೆಗೆ ಪೂರಕ’

ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಆಚರಣೆ
Published 15 ಫೆಬ್ರುವರಿ 2024, 13:57 IST
Last Updated 15 ಫೆಬ್ರುವರಿ 2024, 13:57 IST
ಅಕ್ಷರ ಗಾತ್ರ

ಸಿಂಧನೂರು: ‘ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಅನಘ್ರ್ಯರತ್ನವಾಗಿದ್ದು, ಅವರ ಜೀವನ ಮತ್ತು ಸಂದೇಶಗಳು ಮನುಕುಲದ ಏಳಿಗೆಗೆ ಪೂರಕವಾಗಿವೆ. ಹೀಗಾಗಿ ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಕರ್ನಾಟಕ ರಾಜ್ಯ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ (ಕೆಒಎಫ್) ಅಧ್ಯಕ್ಷ ವೆಂಕಟರಾವ್ ನಾಡಗೌಡ ಹೇಳಿದರು.

ಇಲ್ಲಿನ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘18ನೇ ಶತಮಾನದಲ್ಲಿ ಸಮಾಜದ ಪರಿವರ್ತನೆಗೆ ಶ್ರಮಿಸಿದ ಸಂತ ಸೇವಾಲಾಲರು. ಶರಣರ, ಸಂತರ ಸಂದೇಶಗಳು ಶಾಂತಿ, ಸಾಮರಸ್ಯದ ನಾಡು ಕಟ್ಟಬೇಕೆಂಬುದಾಗಿದೆ. ಅವರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ತತ್ವ-ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ’ ಎಂದರು.

ನಿರುಪಾದೆಪ್ಪ ಗುಡಿಹಾಳ ವಕೀಲ ಮಾತನಾಡಿ ‘ಸೇವಾಲಾಲ್ ಒಬ್ಬ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ,  ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿಕೊಟ್ಟವರು’ ಎಂದು ಬಣ್ಣಿಸಿದರು.

ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ಮುಖಂಡ ರಾಜೇಶ ಹಿರೇಮಠ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಲಿಮಲಿಕ್ ವಕೀಲ, ಜೆಡಿಎಸ್ ಯುವ ಮುಖಂಡ ಸೈಯ್ಯದ್ ಆಸೀಫ್, ಮುಖಂಡರಾದ ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಕೃಷ್ಣ ಚವ್ಹಾಣ್, ಕೃಷ್ಣಪ್ಪ ರಾಠೋಡ್, ಅಮರೇಶ, ಮಂಜುನಾಥ ಹರಸೂರು, ಚಂದ್ರಪ್ಪ ಇದ್ದರು.

ಸಿಂಧನೂರಿನ ಸುಕಾಲಪೇಟೆ ರಸ್ತೆಯ ಹಳೆ ಬೃಂದಾವನ ಹೋಟೆಲ್ ಮುಂಭಾಗದ ಸಂತ ಸೇವಾಲಾಲ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಲಾಯಿತು
ಸಿಂಧನೂರಿನ ಸುಕಾಲಪೇಟೆ ರಸ್ತೆಯ ಹಳೆ ಬೃಂದಾವನ ಹೋಟೆಲ್ ಮುಂಭಾಗದ ಸಂತ ಸೇವಾಲಾಲ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT