ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌ಸಿ ಪಟ್ಟಿಯಿಂದ ನಾಲ್ಕು ಜಾತಿ ಕೈಬಿಡುವ ವರದಿಗಾಗಿ ಸೂಚನೆ’

Last Updated 12 ಮಾರ್ಚ್ 2020, 13:54 IST
ಅಕ್ಷರ ಗಾತ್ರ

ರಾಯಚೂರು: ‘ರಾಜ್ಯದ ಸ್ಪೃಶ್ಯ ಜಾತಿಗಳಾದ ಬಂಜಾರಾ ಅಥವಾ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸರ್ಕಾರದ ಮೇಲಧಿಕಾರಿಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ನಿರ್ದೇಶನ ನೀಡಿದೆ’ ಎಂದು ಡಾ.ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿಯ ಮಹೇಂದ್ರಕುಮಾರ್‌ ಮಿತ್ರಾ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 70 ವರ್ಷಗಳಿಂದ ಈ ಸಮಸ್ಯೆ ಪರಿಹರಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಡಾ.ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿಯು ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ ಫಲ ಇದು. ಈ ಬಗ್ಗೆ ಆಯೋಗವು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಅದೇ ರೀತಿ ಆಯೋಗವು ರಾಜ್ಯದ ಮೇಲಧಿಕಾರಿಗಳಿಗೆ ನಿರ್ದೇಶನ ನೀಡಿದೆ’ ಎಂದರು.

1935 ರಲ್ಲಿ ಬ್ರಿಟಿಷ್‌ ಇಂಡಿಯಾ ಸರ್ಕಾರವು ದೇಶದ ಸಮಸ್ತ ಅಸ್ಪೃಶ್ಯ ಜಗಾಂಗವನ್ನು ‘ಪರಿಶಿಷ್ಟ ಜಾತಿ’ ಎಂದು ನಾಮಕರಣ ಮಾಡಿದ್ದು, ದೇಶದಲ್ಲಿದ್ದ 9 ಪ್ರಾಂತಗಳಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿ ತಯಾರಿಸಲಾಗಿತ್ತು. ಮದ್ರಾಸ್‌ ಪ್ರಾಂತದ ಭಾಗವಾಗಿದ್ದ ಮೈಸೂರು ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬಂಜಾರ, ಬೋವಿ, ಕೊರಚ ಮತ್ತು ಕೊರಮ ಜಾತಿಗಳು ಇರಲಿಲ್ಲ. 1936 ರ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಅಂಬೇಡ್ಕರ್‌ ಅವರು ಪರಿಪೂರ್ಣ ಮತ್ತು ಅಧಿಕೃತ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, 1949 ರಲ್ಲಿ ಅನುಚ್ಛೇದ 341ನ್ನು ಸಂವಿಧಾನದ ವ್ಯಾಪ್ತಿಗೆ ಸೇರ್ಪಡೆ ಮಾಡುವಾಗಲೂ ಯಾರೂ ಅಸ್ಪೃಶ್ಯರೋ ಮತ್ತು ಯಾರೂ ಹಿಂದು ಧರ್ಮ ಪಾಲನೆ ಮಾಡುತ್ತಾರೋ ಅವರೆಲ್ಲ ಪರಿಶಿಷ್ಟ ಜಾತಿ ಎಂದು ಘೋಷಿಸಿದ್ದಾರೆ ಎಂದು ಹೇಳಿದರು.

1950 ರಲ್ಲಿ ಮೈಸೂರು ರಾಜ್ಯದ ಪ್ರಮುಖರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಈ ನಾಲ್ಕು ಸವರ್ಣೀಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿದರು. ಬಿ.ಬಸವಲಿಂಗಪ್ಪ ಹಾಗೂ ಮಲ್ಲಿಕಾರ್ಜು ಖರ್ಗೆ ಅವರು ಅಧಿಕಾರದ ಸಲುವಾಗಿ ಇದನ್ನು ವಿರೋಧ ಮಾಡಲಿಲ್ಲ. ಅಸ್ಪೃಶ್ಯರ ಬಡತನಕ್ಕೆ ಇವರೂ ಕಾರಣ ಎಂದು ಆರೋಪಿಸಿದರು.

ಮೈಸೂರಿನ ಹರಿಜನ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ಮುನಿಸ್ವಾಮಿ, ಕಾಂಗ್ರೆಸ್‌ ನಾಯಕರಾಗಿದ್ದ ಬಿ.ಬಸವಲಿಂಗಪ್ಪ, ಸಾಯಿಬಣ್ಣ ಬನ್ನಟ್ಟಿ ಹಾಗೂ ಕರ್ನಾಟಕ ರಾಜ್ಯ ಅಸ್ಪೃಶ್ಯ ಮಹಾಸಭಾ ಅಧ್ಯಕ್ಷ ಶಂಕರ ಕೊಡ್ಲ ಅವರು ಸವರ್ಣೀಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಹಾಕಲು ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಎಂದು ಹೇಳಿದರು.

ಸಿ.ಎಂ. ಕೃಷ್ಣ, ದೇವಮಿತ್ರ, ಮಾರುತಿರಾವ್‌ ಜಂಬಗಾ, ಪ್ರಸನ್ನಕುಮಾರ್‌ ವೆಂಕಟೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT