ಗುರುವಾರ , ಜುಲೈ 7, 2022
23 °C
207 ವಿದ್ಯಾರ್ಥಿಗಳು, 6 ಜನ ಶಿಕ್ಷಕರು: ಕುಡಿಯುವ ನೀರಿನ ಸೌಲಭ್ಯ ಮರೀಚಿಕೆ

ಮಲ್ಕಾಪುರದಲ್ಲಿ ಭೀತಿಯ ನೆರಳಲ್ಲೇ ಪಾಠ

ಮಂಜುನಾಥ ಬಳ್ಳಾರಿ Updated:

ಅಕ್ಷರ ಗಾತ್ರ : | |

Prajavani

ಮಲ್ಕಾಪುರ (ಕವಿತಾಳ): ಮಸ್ಕಿ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಥಿಲಗೊಂಡ ಕಟ್ಟಡಗಳನ್ನು ತೆರವು ಮಾಡದ ಕಾರಣ ಮಕ್ಕಳು ಭಯದ ನೆರಳಿನಲ್ಲಿಯೇ ಪಾಠ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

1 ರಿಂದ 7ನೇ ತರಗತಿಯವರೆಗೂ ಇಲ್ಲಿ ಶಾಲೆ ಇದೆ. ಸುಮಾರು 207 ವಿದ್ಯಾರ್ಥಿಗಳು ಹಾಗೂ 6 ಜನ ಶಿಕ್ಷಕರಿದ್ದಾರೆ. ಕಾಯಂ ಮುಖ್ಯ ಶಿಕ್ಷಕರಿಲ್ಲ. ಹೊಸದಾಗಿ ನಿರ್ಮಿಸಿದ 7 ಕೊಠಡಿಗಳನ್ನು ಬಳಕೆ ಮಾಡಲಾಗುತ್ತಿದೆ ಮತ್ತು 4 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ.

ಹಳೆ ಕಟ್ಟಡದ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಮತ್ತು ಶಿಥಿಲಾವಸ್ಥೆಯಲ್ಲಿರುವ ಕೊಠಡಿ ತೆರವು ಮಾಡಿಲ್ಲ. ಇದು ಮಕ್ಕಳು ಮತ್ತು ಪಾಲಕರ ಆತಂಕಕ್ಕೆ ಕಾರಣವಾಗಿದೆ.

ಶಾಲೆ ಆವರಣದಲ್ಲಿರುವ ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಎರಡು ಶೌಚಾಲಯ ನಿರ್ಮಿಸಲಾಗಿದೆ. ಅವುಗಳನ್ನು ಬಳಕೆ ಮಾಡುತ್ತಿಲ್ಲ ಮತ್ತು ಸ್ವಚ್ಛತೆ ಕೊರತೆ ಇದೆ. ಕೈತೊಳೆಯಲು ಅಳವಡಿಸಿದ ನಳಗಳು ಮುರಿದು, ಹಾಳಾಗಿವೆ.

ಮಳೆ ನೀರು ಸಂರಕ್ಷಣೆ ಯೋಜನೆಯಡಿ ನೀರು ಸಂಗ್ರಹಕ್ಕಾಗಿ ಅಗೆದ ತಗ್ಗು ಮತ್ತು ಕಟ್ಟಡ ನಿರ್ಮಾಣಕ್ಕೆ ತಳಪಾಯ ಹಾಕಲು ಅಗೆದ ಆಳವಾದ ತಗ್ಗುಗಳು ಹಾಗೆಯೇ ಇದ್ದು, ಆತಂಕ ಮೂಡಿಸುತ್ತವೆ. ಶಾಲಾ ಆವರಣದಲ್ಲಿ ಚರಂಡಿ ಹಾದು ಹೋಗಿದ್ದು, ಮಕ್ಕಳು ಆಟವಾಡುವ ಸಮಯದಲ್ಲಿ ಸ್ವಲ್ಪ ಓಡಾಡಿದರೂ ಚರಂಡಿಯಲ್ಲಿ ಬೀಳುವ ಸಾಧ್ಯತೆ ಇದೆ.

‘ಆವರಣದಲ್ಲಿ ಮಳೆ ನೀರು ನಿಂತು ಗಲೀಜು ಉಂಟಾಗುತ್ತಿದೆ. ಗಿಡಗಳು ಬೆಳೆದು ಮಕ್ಕಳಿಗೆ ಆಟವಾಡಲು ಸಮಸ್ಯೆಯಾಗುತ್ತಿದೆ. ಕಳೆದ ವರ್ಷ ನರೇಗಾ ಕೂಲಿಕಾರರ ನೆರವಿನಿಂದ ಆವರಣ ಸ್ವಚ್ಛಗೊಳಿಸಲಾಗಿತ್ತು. ಇದೀಗ ಮತ್ತೆ ಗಿಡಗಳು ಬೆಳೆದಿವೆ. ನೆಲ ಸಮತಟ್ಟು ಮಾಡಿ ಮುರಂ ಹಾಕಿಸಿ ಶಾಶ್ವತವಾಗಿ ದುರಸ್ತಿ ಮಾಡಬೇಕಿದೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಮಲ್ಲಪ್ಪ ಹೇಳಿದರು.

2019ರಲ್ಲಿ ಇಲ್ಲಿನ ಮಕ್ಕಳು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಶಿಕ್ಷಕ ರವಿರಾಜ ಅವರ ಕಾಳಜಿಯಿಂದಾಗಿ ‘ಮಕ್ಕಳ ಮಂದಾರ’ ಎನ್ನುವ ತ್ರೈಮಾಸಿಕ ಪತ್ರಿಕೆಯನ್ನು ಮಕ್ಕಳು ಪ್ರಕಟಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ಕುರಿತ ವಿಭಾಗ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಈ ಶಾಲೆಯ ಮಕ್ಕಳು ಶಾಲೆಯ ಕುಂದು ಕೊರತೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು